ದಾವಣಗೆರೆ: ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಕಾರ್ಯಕರ್ತರು ಗುರುವಾರ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದ್ದಾರೆ.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಕ್ರಮವಾಗಿ ಪ್ರತಿ ಲೀಟರ್‌ಗೆ 78.84 ರೂಪಾಯಿ, ಮತ್ತು 70.61 ರೂಪಾಯಿಯಷ್ಟು ಸಾರ್ವಕಾಲಿಕ ದಾಖಲೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಭಾರೀ ಹೊರೆ ಹೇರಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.
ಕರ್ನಾಟಕದಲ್ಲಿ ಚುನಾವಣೆ ಮುಗಿಯುವವರೆಗೂ ತೈಲ ಬೆಲೆ ಏರಿಸದ ಕೇಂದ್ರ ಸರ್ಕಾರ ಚುನಾವಣೆ ಮುಗಿದ ತಕ್ಷಣಕ್ಕೆ ದರ ಏರಿಕೆ ಮಾಡಿರುವುದು ಜನರಿಗೆ ಬಗೆದ ದ್ರೋಹ. 70ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶದ ಎಲ್ಲಾ ತೈಲ ಕಂಪನಿಗಳನ್ನು ರಾಷ್ಟ್ರೀಕೃತಗೊಳಿಸಿದ್ದರು. ಗ್ಯಾಟ್ ನೀತಿ ಬರುವ ಮುಂಚೆ ನಮ್ಮಲ್ಲಿ ಆಯಿಲ್ ಪೂಲ್‌ಅಕೌಂಟ್ ಇತ್ತು.
ಗ್ಯಾಟ್ ನೀತಿಗಳ ಫಲವಾಗಿ ದಿನೇ ದಿನೇ ಆಯಿಲ್ ಪೂಲ್ ಅಕೌಂಟ್ ಸ್ಥಗಿತಗೊಳಿಸುತ್ತಿರುವ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳಕ್ಕೆ ನಾವು ಬೆಲೆ ತೆರಬೇಕಾಗಿದೆ. ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ಒಂದು ಯಶಸ್ವಿ ಕಾರ್ಯಕ್ರಮ ಎಂದು ಹೇಳುತ್ತಾರೆ. ಆದರೆ, ತೈಲ ಕಂಪೆನಿಗಳನ್ನು ಏಕೆ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ತರಲಿಲ್ಲ. ಜಿಎಸ್‌ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ದೂರವಿಟ್ಟಿದೆ ಎಂದು ದೂರಿದರು.
ಭಾರತದಿಂದ ನೇಪಾಳಕ್ಕೆ ರಫ್ತಾಗುವ ಪೆಟ್ರೋಲ್‌ದರ 65 ರೂಪಾಯಿಗಳಷ್ಟಿದೆ. ಪ್ರಪಂಚದ 4ನೇ ಅತಿ ದೊಡ್ಡ ತೈಲ ಗುಜರಾತ್ ಘಟಕವನ್ನು ಖಾಸಗಿ ಕಂಪೆನಿಗೆ ಸಬ್ಸಿಡಿ ಆಧಾರದಲ್ಲಿ ನಡೆಸಲು ಅನುಮತಿ ನೀಡಲಾಗಿದೆ. ಮೋದಿಯವರಿಗೆ ದೇಶ ಮತ್ತು ವಿದೇಶ ಬಂಡವಾಳಿಗರ ಸಂಸ್ಥೆಗಳ ಮೇಲೆ ಇರುವ ಅನುಕಂಪ ಜನತೆ ಮೇಲೆ ಇಲ್ಲ. ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡಿರುವ ಸರ್ಕಾರ ಕೂಡಲೇ ತೈಲ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಸಂಚಾಲಕ ಮಂಜುನಾಥ್ ಕೈದಾಳೆ, ನಾಗಸ್ಮಿತಾ, ರೇಣುಕಾ ಪ್ರಸನ್ನ, ಸತೀಶ್. ಮಧು ತೊಗಲೇರಿ. ಶಶಿಕುಮಾರ್. ಗುರು. ಪ್ರವೀಣ್. ಮಂಜುನಾಥ್‌ರೆಡ್ಡಿ. ಭಾರತಿ. ಜ್ಯೋತಿ ಕುಕ್ಕವಾಡ ಬನಶ್ರೀ, ಸವಿತಾ. ಮಂಜುನಾಥ್ ಕುಕ್ಕವಾಡ, ಡಾ| ವಸುಧೇಂದ್ರ, ಯತೀಂದ್ರ, ರೈತ ಸಂಘಟನೆಯ ಬಲ್ಲೂರು ರವಿಕುಮಾರ್ ಇತರರು ಇದ್ದರು.