ಹೊಸದಿಲ್ಲಿ : ಪೆಟ್ರೋಲ್ ಮತ್ತು ಡೀಸಿಲನ್ನು ಜಿಎಸ್‌ಟಿ ಅಡಿ ತರುವುದಕ್ಕೆ ಕೇಂದ್ರ ಸರಕಾರ ಯಾವತ್ತೂ ಸಿದ್ಧವಿದೆ; ಆದರೆ ಇದಕ್ಕೆ ರಾಜ್ಯ ಸರಕಾರಗಳು ಸಿದ್ಧವಾದ ಬಳಿಕ ಅವುಗಳೇ ಈ ಬಗೆಗಿನ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇತ್ಲಿ ಹೇಳಿದ್ದಾರೆ.
ಈಚೆಗೆ ಪೆಟ್ರೋಲ್, ಡೀಸಿಲ್ ದರ ಏರಿರುವುದಕ್ಕೆ ಕೇಂದ್ರ ಸರಕಾರ ಭಾರೀ ಟೀಕೆ, ಖಂಡನೆಗಳನ್ನು ಕೇಳಬೇಕಾಯಿತು. ಆ ಪರಿಣಾಮವಾಗಿ ಕೇಂದ್ರವೇ ಪೆಟ್ರೋಲ್, ಡೀಸಿಲ್ ಮೇಲಿನ ಸುಂಕವನ್ನು ಲೀಟರಿಗೆ ತಲಾ 2 ರೂ. ಇಳಿಸಿತು. ಆ ಮೂಲಕ ಹಣದುಬ್ಬರವನ್ನು ಕಡಿಮೆ ಮಾಡಲು ಮತ್ತು ಜನಾಕ್ರೋಶವನ್ನು ಶಮನ ಮಾಡಲು ಸರಕಾರ ಯತ್ನಿಸಿತು ಎಂದು ಜೇತ್ಲಿ ಹೇಳಿದರು.
ಕೇಂದ್ರದ ಕೋರಿಕೆಯನ್ನು ಮನ್ನಿಸಿ ಗುಜರಾತ್, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶ ಸರಕಾರಗಳು ಪೆಟ್ರೋಲ್, ಡೀಸಿಲ್ ಮೇಲಿನ ವ್ಯಾಟ್ ಇಳಿಸಿದವು. ಈ ನಡುವೆ ಅನೇಕ ಪರಿಣತರು ಪೆಟ್ರೋಲ್, ಡೀಸಿಲನ್ನು ಜಿಎಸ್‌ಟಿ ಅಡಿ ಯಾಕೆ ತರಬಾರದು ಎಂದು ಪ್ರಶ್ನಿಸಿದರು. ಇವುಗಳನ್ನು ಜಿಎಸ್‌ಟಿ ಅಡಿ ತಂದಲ್ಲಿ ತೆರಿಗೆ ಹೊರೆ ಗಮನಾರ್ಹವಾಗಿ ಇಳಿಯುವುದು ಎಂದು ಜೇತ್ಲಿ ಹೇಳಿದರು.
ಪೆಟ್ರೋಲ್, ಡಿಸೀಲ್ ಮೇಲಿನ ಈಗಿನ ತೆರಿಗೆಯು ಶೇ.100ಕ್ಕೂ ಅಧಿಕವಿದೆ. ಜಿಎಸ್‌ಟಿ ಅಡಿಯ ಗರಿಷ್ಠ ಶೇ.28ರ ತೆರಿಗೆಗೆ ಪೆಟ್ರೋಲ್, ಡೀಸಿಲ್ ಒಳಪಟ್ಟರೂ ಅದು ಗಮನಾರ್ಹವಾಗಿ ಅಗ್ಗವಾಗಲಿದೆ. ಆದರೆ ರಾಜ್ಯ ಸರಕಾರಗಳಿಗೆ ವ್ಯಾಟ್ ರೂಪದಲ್ಲಿ ಸಿಗುತ್ತಿರುವ ಪೆಟ್ರೋಲ್, ಡೀಸಿಲ್ ಆದಾಯ ಬೃಹತ್ ಪ್ರಮಾಣದ್ದಾಗಿರುವುದರಿಂದ ಅವು ಚಿನ್ನದ ಮೊಟ್ಟೆ ಇಡುವ ಈ ಕೋಳಿಯನ್ನು ಬಿಟ್ಟುಕೊಡಲು ಸುತರಾಂ ಇಷ್ಟಪಡುವುದಿಲ್ಲ.
ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಅವರು “ನಾವು ಸರ್ವಥಾ ಪೆಟ್ರೋಲ್, ಡೀಸಿಲ್ ವ್ಯಾಟ್ ದರ ಇಳಿಸಲ್ಲ’ ಎಂದು ಹೇಳಿದ್ದರು.