ಪ್ಯಾರಿಸ್: ಕಳೆದ ವರ್ಷದ ವನಿತಾ ಸಿಂಗಲ್ಸ್ ಚಾಂಪಿಯನ್, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಫ್ರೆಂಚ್ ಓಪನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರ್ಗಮಿಸಿದ್ದಾರೆ. ಮಾಜಿ ನಂಬರ್ ವನ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರಿಗೂ ಪ್ರಥಮ ಸುತ್ತಿನ ಆಘಾತ ಎದುರಾಗಿದೆ. ಅನುಭವಿ ವೀನಸ್ ವಿಲಿಯಮ್ಸ್ ಇಂಥದೊಂದು ಆಘಾತಕಾರಿ ಆರಂಭಕ್ಕೆ ಮುಹೂರ್ತವಿರಿಸಿದ್ದರು.ಪುರುಷರ ವಿಭಾಗದಲ್ಲಿ 2015ರ ಚಾಂಪಿ ಯನ್ ಸ್ಟಾನಿಸ್ಲಾಸ್ ವಾವ್ರಿಂಕ ಕೂಡ ಪ್ರಥಮ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಕೊಜೊವಾ ಪರಾಕ್ರಮ
ರವಿವಾರ ರಾತ್ರಿ ಕದನದಲ್ಲಿ ಉಕ್ರೇನಿನ ಕ್ಯಾಥರಿನಾ ಕೊಜೊವಾ 7-5, 6-3 ಅಂತರ ದಿಂದ ಒಸ್ಟಾಪೆಂಕೊಗೆ ಸೋಲುಣಿಸಿದರು. ಒಸ್ಟಾಪೆಂಕೊ ಫ್ರೆಂಚ್ ಓಪನ್ ಮೊದಲ ಸುತ್ತಿ ನಲ್ಲೇ ಪರಾಭವಗೊಂಡ 6ನೇ ಹಾಲಿ ಚಾಂಪಿ ಯನ್ ಆಟಗಾರ್ತಿಯಾಗಿದ್ದಾರೆ. ಕೊನೆಯ ಸಲ 2005ರಲ್ಲಿ ರಶ್ಯದ ಅನಾಸ್ತಾಸಿಯಾ ಮಿಸ್ಕಿನಾ ಈ ಆಘಾತಕ್ಕೆ ಸಿಲುಕಿದ್ದರು.
ವೀನಸ್ ವಿಲಿಯಮ್ಸ್ ಅವರನ್ನು ವಾಂಗ್ ಕ್ವಿಯಾಂಗ್ 6-4, 7-5ರಿಂದ ಮಣಿಸಿದರು. ಇದರೊಂದಿಗೆ ಕಳೆದ ವರ್ಷ ಫ್ರೆಂಚ್ ಓಪನ್ ಮೊದಲ ಸುತ್ತಿನಲ್ಲೇ ವೀನಸ್ ವಿರುದ್ಧ ಅನುಭವಿಸಿದ ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಕ್ವಿಯಾಂಗ್ ಯಶಸ್ವಿಯಾದರು!
66ನೇ ರ್‍ಯಾಂಕಿಂಗ್ ಆಟಗಾರ್ತಿ ಕುಜೊವಾ ಅವರಿನ್ನು ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ಅವರನ್ನು ಎದುರಿಸುವರು. ಸಿನಿಯಕೋವಾ ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ 7-5, 7-5 ಅಂತರದ ಜಯ ಸಾಧಿಸಿದರು. ಕಳೆದ ಋತುವಿನುದ್ದಕ್ಕೂ ಕುಟುಂಬ ಸಂಬಂಧಿ ಕಾನೂನು ಹೋರಾಟ ದಲ್ಲಿ ತೊಡಗಿದ್ದ ಅಜರೆಂಕಾ ಅವರ ಗ್ರ್ಯಾನ್‌ಸ್ಲಾಮ್ ಪುನರಾಗಮನ ದುರಂತದಲ್ಲಿ ಅಂತ್ಯ ಕಂಡಿತು. ಕಳೆದ 5 ವರ್ಷಗಳಲ್ಲಿ ಅಜರೆಂಕಾಗೆ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಒಲಿದದ್ದು 2 ಗೆಲುವು ಮಾತ್ರ. ಕಳೆದ ವರ್ಷ ವಿಂಬಲ್ಡನ್ 4ನೇ ಸುತ್ತಿನಲ್ಲಿ ಸಿಮೋನಾ ಹಾಲೆಪ್‌ಗೆ ಶರಣಾದ ಬಳಿಕ ಅಜರೆಂಕಾ ಆಡಿದ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಇದಾಗಿತ್ತು.
ಬ್ರಿಟನ್ನಿನ ಜೊಹಾನ್ನಾ ಕೊಂಟಾ ಸತತ 4ನೇ ವರ್ಷ ಪ್ಯಾರಿಸ್‌ನಲ್ಲಿ ಮೊದಲ ಸುತ್ತಿನ ಸೋಲಿನ ಬಲೆಗೆ ಸಿಲುಕಿದರು. ಇವರೆದುರು ಜಯ ಸಾಧಿಸಿದವರು ಕಜಾಕ್‌ಸ್ಥಾನದ ಯುಲಿಯಾ ಪುಟಿನ್ಸೇವಾ. ಅಂತರ 6-4, 6-3.
ವಾವ್ರಿಂಕ ಸೋಲಿನ ಅಂಕ
ಸ್ವಿಟ್ಸರ್‌ಲ್ಯಾಂಡಿನ ನೆಚ್ಚಿನ ಆಟಗಾರ, 2015ರ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಅವರಿಗೂ ಮೊದಲ ಸುತ್ತಿನ ಕಂಟಕ ಎದುರಾಯಿತು. ಮಂಡಿ ನೋವಿಗೆ ಸಿಲುಕಿದ್ದ ಅವರನ್ನು 5 ಸೆಟ್‌ಗಳ ಕಾದಾಟದ ಬಳಿಕ ಸ್ಪೇನಿನ ಗಾರ್ಸಿಯ ಲೋಪೆಜ್ 6-3, 3-6, 4-6, 7-6, 6-3 ಅಂತರದಿಂದ ಹಿಮ್ಮೆಟ್ಟಿಸಿದರು.
2 ಬಾರಿಯ ವಿಂಬಲ್ಡನ್ ಚಾಂಪಿಯನ್, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಭಾರೀ ಹೋರಾಟದ ಬಳಿಕ ಪರಗ್ವೆಯ ವೆರೋನಿಕಾ ಸಿಪೆಡ್ ರೋಗ್ ಅವರನ್ನು 3-6, 6-1, 7-5ರಿಂದ ಮಣಿಸಿ ದ್ವಿತೀಯ ಸುತ್ತು ತಲುಪುವಲ್ಲಿ ಯಶಸ್ವಿಯಾದರು. ಇವರ ಮುಂದಿನ ಎದುರಾಳಿ ಸ್ಪೇನಿನ ಲಾರಾ ಅರೌಬರೆನಾ.
ಈ ಸಲದ ಇಂಡಿಯಾನಾ ವೆಲ್ಸ್ ಚಾಂಪಿಯನ್, ಜಪಾನಿನ ನವೋಮಿ ಒಸಾಕಾ ಕೂಡ ದ್ವಿತೀಯ ಸುತ್ತು ತಲುಪಿದ್ದಾರೆ. ಅವರು ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ 6-2, 7-5 ಅಂತರದ ಗೆಲುವು ಕಂಡರು.