Advertisement

ಸಾರ್ವಜನಿಕ ಹಿತಾಸಕ್ತಿ ರಿಟ್‌ ಅರ್ಜಿ

08:15 PM Nov 03, 2019 | Lakshmi GovindaRaju |

ಒಬ್ಬ ವ್ಯಕ್ತಿ, ಸಾರ್ವಜನಿಕರ ಆಸಕ್ತಿಗಳಿಗೆ ಧಕ್ಕೆಯುಂಟಾಗಿದೆ ಎಂದು ಸಾರ್ವಜನಿಕ ಹಿತದೃಷ್ಟಿಯಿಂದ ರಿಟ್‌ ಅರ್ಜಿಗಳನ್ನು ಹಾಕಬಹುದು. ಉದಾಹರಣೆಗೆ ಸಂಪೂರ್ಣವಾಗಿ ವಾಸದ ಮನೆಗಳೇ ಇರುವ ಪ್ರದೇಶದಲ್ಲಿ ಮದ್ಯದ ಅಂಗಡಿಯೊಂದನ್ನು ಸ್ಥಾಪಿಸಲು ಅಬಕಾರಿ ಇಲಾಖೆಯು ವ್ಯಾಪಾರಿಯೊಬ್ಬನಿಗೆ ಅನುಮತಿ ಕೊಟ್ಟರೆ ಅಂಥ ಆಜ್ಞೆಯನ್ನು ಅಥವಾ ಅನುಮತಿಯನ್ನು ಆ ಪ್ರದೇಶದ ಯಾವನೇ ವ್ಯಕ್ತಿ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

Advertisement

ಇದರಲ್ಲಿ ಆ ವ್ಯಕ್ತಿಗೆ ವೈಯಕ್ತಿಕವಾದ ಯಾವುದೇ ಆಸಕ್ತಿ ಇರುವುದಿಲ್ಲ. ಬೆಂಗಳೂರಿನ ಹಲವು ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ನಿವೃತ್ತ ಪ್ರೊಫೆಸರ್‌ಗಳು ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಶಾಲೆಗಳಿಗೆ ಮಾತ್ರ ಶಿವರಾಮ ಕಾರಂತರು ಬರೆದ “ಓದುವ ಆಟ’ ಪುಸ್ತಕಗಳ ಸರಣಿಯನ್ನು ಪಠ್ಯವನ್ನಾಗಿ ನಿಗದಿಪಡಿಸಿದುದರ ವಿರುದ್ಧ ರಿಟ್‌ ಅರ್ಜಿ ಸಲ್ಲಿಸಿ ಸರ್ಕಾರ ಆ ಪಠ್ಯವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದುದನ್ನು ಇಲ್ಲಿ ಉಲ್ಲೇಖೀಸಬಹುದು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳ ಸಂಖ್ಯೆ ಮತ್ತು ಹರವು ವಿಸ್ತರಿಸುತ್ತಾ ಹೋಗುತ್ತಿದೆ. ಸರ್ಕಾರದ ಇಲಾಖೆಗಳ್ಳೋ, ಸಾರ್ವಜನಿಕ ಪ್ರಾಧಿಕಾರಗಳ್ಳೋ ಕಾನೂನನ್ನು ಅತಿಕ್ರಮಿಸಿದರೆ, ಇಲ್ಲವೇ ದಬ್ಟಾಳಿಕೆ, ಅನ್ಯಾಯ, ಶೋಷಣೆ ಇಂಥ ಕೃತ್ಯಗಳಲ್ಲಿ ತೊಡಗಿದ್ದರೆ, ಇವುಗಳ ದುಷ್ಪರಿಣಾಮಕ್ಕೆ ಸಿಕ್ಕಿ ನಲುಗಿದ ಸಮೂಹ ಅಥವಾ ಜನಗಳ ಪರವಾಗಿ ಉಚ್ಚ ನ್ಯಾಯಾಲಯಗಳಲ್ಲಿ ಅಥವಾ ಪರಮೋಚ್ಛ ನ್ಯಾಯಾಲಯದಲ್ಲಿ ರಿಟ್‌ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ.

ಅನುಚ್ಛೇದ 226ರ ಅಡಿಯಲ್ಲಿ ಉಚ್ಛ ನ್ಯಾಯಾಲಯಗಳು ಮತ್ತು ಅನುಚ್ಛೇದ 32ರ ಕೆಳಗೆ ಸರ್ವೋಚ್ಛ ನ್ಯಾಯಾಲಯವು ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ರಿಟ್‌ಗಳನ್ನು, ಆದೇಶಗಳನ್ನು ಅಥವಾ ಪ್ರತಿಬಂಧಿಕಾಜ್ಞೆಗಳನ್ನು ಹೊರಡಿಸಬಹುದು. ಬಡವರು, ವಿಚಾರಣಾಧೀನ ಬಂಧಿಗಳು, ಶೋಷಿತ ಸ್ತ್ರೀಯರು, ಜೀತದಾಳುಗಳು, ಅಸಂಘಟಿತ ಕಾರ್ಮಿಕರು, ಅನುಸೂಚಿತ ಜಾತಿ ಮತ್ತುಬುಡಕಟ್ಟಿಗೆ ಸೇರಿದ ಜನಗಳು, ಇಂಥ ಗುಂಪಿನ ಜನರ ಸಮಸ್ಯೆಗಳಿಗೆ ಉಚ್ಛ ನ್ಯಾಯಾಲಯಗಳು ಮತ್ತು ಸರ್ವೋಚ್ಛ ನ್ಯಾಯಾಲಯ ಅನುಭೂತಿಯಿಂದ ಸ್ಪಂದಿಸಿ ಸೂಕ್ತವಾದ ಆಜ್ಞೆ, ಆದೇಶಗಳನ್ನು ಹೊರಡಿಸುತ್ತಿವೆ.

ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳು ಶುಲ್ಕವಿಲ್ಲದೆಯೇ ದೂರುಗಳನ್ನು , ಅರ್ಜಿಗಳನ್ನು ಸ್ವೀಕರಿಸಿವೆ. ತೊಡಕಿನ ವಿಧಿಗಳನ್ನು ಮನ್ನಾ ಮಾಡಿವೆ. ಕುಂದು ಕೊರತೆಗಳನ್ನು ನಿವೇದಿಸಿಕೊಂಡ ಪತ್ರಗಳನ್ನೇ ರಿಟ್‌ ಅರ್ಜಿಗಳೆಂದು ಪರಿಗಣಿಸಿವೆ. ಇದರಿಂದಾಗಿ ಅರ್ಜಿದಾರನ “ಪ್ರಶ್ನಿಸುವ ಸ್ಥಾನ'(ಲೋಕಸ್‌ ಸ್ಟಾಂಡಿ) ಎನ್ನುವ ಪರಿಕಲ್ಪನೆಗೆ ಹೊಸ ವಿಷದೀಕರಣ, ಅರ್ಥ ಸಿಕ್ಕ ಹಾಗೆ ಆಗಿದೆ. ಆ ಮೊಕದ್ದಮೆಗಳ ಮೂಲಕ ಸಾರ್ವಜನಿಕರ ಹಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಿಕ ಮಧ್ಯಪ್ರವೇಶವನ್ನು ಕೋರಲು ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿದೆ.

Advertisement

ಹೀಗಾಗಿ ಸರ್ಕಾರದ ಮತ್ತು ಅದರ ಎಲ್ಲ ನಿಯೋಗಗಳ ಚಟುವಟಿಕೆಗಳ ಮೇಲೆ ನ್ಯಾಯಾಲಯಗಳು ನಿಸ್ಸಹಾಯಕರೂ, ಸೌಲಭ್ಯವಂಚಿತರೂ ಆದ ಜನಸಾಮಾನ್ಯರಿಗೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯವನ್ನು ದೊರಕಿಸಿಕೊಡುವ ಸಾಧನಗಳಾಗಿವೆ. ಈ ರಿಟ್‌ ಅರ್ಜಿಗಳನ್ನು ಹಾಕಲು ಯಾವುದೇ ಇತಿಮಿತಿಗಳಿಲ್ಲ. ಅರ್ಜಿಯ ವಸ್ತು ಅಥವಾ ವಿಷಯಸಾರ್ವಜನಿಕರ ಹಿತರಕ್ಷಣೆಯ ಉದ್ದೇಶವನ್ನು ಹೊಂದಿದ್ದರೆ ಸಾಕು. ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಸಾರ್ವಜನಿಕ ಹಿತಾಸಕ್ತಿಯ ಸೋಗಿನಲ್ಲಿ ವೈಯಕ್ತಿಕ ಹಿತವನ್ನು ಮುಂದೆ ಮಾಡುವ ಅಥವಾ ವೈಯಕ್ತಿಕ ಹಿತವನ್ನು ಕೋರುವ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.

* ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

Advertisement

Udayavani is now on Telegram. Click here to join our channel and stay updated with the latest news.

Next