ಬೆಂಗಳೂರು: ವಿಶ್ವವಿದ್ಯಾನಿಲಯ ಧನ ಆಯೋಗ (ಯುಜಿಸಿ) ನಿಯಮಗಳನ್ವಯ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಿಸಬೇಕು ಎಂದು ಕೆಲವು ಪ್ರಾಧ್ಯಾಪಕರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಕೇಂದ್ರದ ಅನುದಾನ ಪಡೆಯುತ್ತಿರುವ ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಯುಜಿಸಿ ನಿಯಮಗಳನ್ನು ಜಾರಿಗೊಳಿಸಬಹುದು ಎಂದು ಆದೇಶ ನೀಡಿದೆ.
ಈ ಕುರಿತು ರಾಜ್ಯ ಸರಕಾರಿ ಅಧೀನದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನಗಳ ಡೀನ್ ಡಾ| ಆರ್. ಎನ್ .ಭಾಸ್ಕರ್, ಬೆಂಗಳೂರಿನ ವಿ.ಎಸ್. ಡೆಂಟಲ್ ಕಾಲೇಜಿನ ಪ್ರೊಫೆಸರ್‌ಗಳಾದ ಎ.ಎಂ.ಶೈಲಜಾ ಮತ್ತು ಡಿ.ಆರ್. ಅರ್ಜುನಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಯುಜಿಸಿ ರಚಿಸಿದ್ದ ವೇತನ ಅನುದಾನ ಆಯೋಗದ ವರದಿಯನ್ನು ಯಥಾವತ್ತಾಗಿ ಒಪ್ಪಿರುವ ಕೇಂದ್ರ ಸರಕಾರ, ಅದನ್ನು ಜಾರಿಗೊಳಿಸಿದೆ. ಆದರೆ ಕರ್ನಾಟಕ ಸಹಿತ ಹಲವು ರಾಜ್ಯಗಳು ಸೇವೆಯ ನಿವೃತ್ತಿ ವಯೋಮಿತಿ ಹೆಚ್ಚಳ ಮಾಡದಿರಲು ನಿರ್ಧರಿಸಿದವು, ಆದರೆ ವೇತನ ಆಯೋಗದ ವರದಿಯ ಇತರ ಅಂಶಗಳನ್ನು ಜಾರಿಗೊಳಿಸಿವೆ ಎಂದು ನ್ಯಾಯಪೀಠ ಹೇಳಿದೆ.
ಯುಜಿಸಿಯ ವೇತನ ಆಯೋಗದ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸದಿದ್ದರೂ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಯುಜಿಸಿಯ ನಿಯಮಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕರ್ನಾಟಕ ಸರಕಾರದ ಮೂಲಕವೇ ಯೋಜನೆಯನ್ನು ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಆದರೆ ಖಾಸಗಿ ಅನುದಾನರಹಿತ ವಿವಿಗಳು ಹಾಗೂ ಕಾಲೇಜುಗಳ ಮೇಲೆ ಯುಜಿಸಿಗೆ ಯಾವುದೇ ಹಿಡಿತವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಯುಜಿಸಿ 2010ರ ಜೂನ್ 30 ಮತ್ತು 2018ರ ಜು.18ರಂದು ಹೊರಡಿಸಿದ್ದ ನಿಯಮದಂತೆ ತಮ್ಮ ನಿವೃತ್ತಿ ವಯಸ್ಸನ್ನು 65ಕ್ಕೆ ಹೆಚ್ಚಿಸಬೇಕು. ಈ ಕುರಿತಂತೆ ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಕೂಡ ನಿರ್ಣಯ ಕೈಗೊಂಡಿದ್ದು ಅದನ್ನು ಜಾರಿಗೊಳಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.