Advertisement

ಮುದ್ದಿನ ಬೆಕ್ಕಿನ ಜಾಣ್ಮೆ

04:39 PM Mar 15, 2018 | Sharanya Alva |

ಜಯನಗರದಲ್ಲಿ ಒಂದು ಪುಟ್ಟಕುಟುಂಬವಿತ್ತು. ಮನೆಯ ಯಜಮಾನನೇ ಕುಟುಂಬಕ್ಕೆ ಆಸರೆಯಾಗಿದ್ದ. ಹೀಗಿರುವಾಗ ಯಜಮಾನ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದನು. ಆಗ ಜಮೀನಿನ ಕೆಲಸ ನೋಡಿಕೊಳ್ಳಲು ಯಾರೂ ಇಲ್ಲದಂಥ ಪರಿಸ್ಥಿತಿ ತಲೆದೋರುತ್ತದೆ. ಮನೆಯಲ್ಲಿ ಕೂಡಿಟ್ಟಿದ್ದ ಆಹಾರದ ದಾಸ್ತಾನು ಮುಗಿಯುತ್ತಾ ಬಂದಾಗ ಮನೆಯೊಡತಿಗೆ ಅದೇ ದೊಡ್ಡ ಚಿಂತೆಯಾಗಿಬಿಡುತ್ತದೆ. ಆ ಮನೆಯಲ್ಲಿ ಒಂದು ಪುಟ್ಟ ಬೆಕ್ಕು ಇತ್ತು. 

Advertisement

ತುಂಬಾ ಸೋಮಾರಿ ಅದು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಹಾಲು- ಮೊಸರು ಇತ್ಯಾದಿಗಳನ್ನ ಕದ್ದುತಿಂದು ದವಸ ಧಾನ್ಯಗಳಿದ್ದ ಕೋಣೆಯಲ್ಲಿ ಮಲಗುತ್ತಿತ್ತು. ಅದು ಗಡದ್ದಾಗಿ ತಿಂದು ಮಲಗಿರುವ ಹೊತ್ತಿನಲ್ಲಿ ಇಲಿಗಳ ಸೈನ್ಯ ಆಹಾರವನ್ನು ಇಷ್ಟಿಷ್ಟೇ ಖಾಲಿ ಮಾಡುತ್ತಿತ್ತು. ಮನೆಯ ಬಡತನದ ಪರಿಸ್ಥಿತಿ ಬೆಕ್ಕಿಗೂ ತಟ್ಟಿತು. ಎಂದಿನಂತೆ ಈಗ ಅಡುಗೆ ಮನೆಯಲ್ಲಿ ಹಾಲು- ಮೊಸರು ಇರುತ್ತಿರಲಿಲ್ಲ. ಹೀಗೆ ಹಸಿವಿನಿಂದ ಮೀಯಾಂವ್‌ ಎಂದು ಕೂಗುತ್ತಾ ಬೆಕ್ಕು ಮನೆ ತುಂಬಾ ಅಡ್ಡಾಡತೊಡಗಿತು.

ಒಂದು ದಿನ ಬೆಕ್ಕಿಗೆ ಇಲಿಗಳ ಸೈನ್ಯ ಎದುರಾಯಿತು. ಇಲಿಗಳಿಗೆ ಬೆಕ್ಕನ್ನು ಕಂಡರೆ ಭಯವಿರಲಿಲ್ಲ. ಏಕೆಂದರೆ ಇಷ್ಟು ದಿನ ಅದು ಒಂದೇ ಒಂದು ಇಲಿಯನ್ನೂ ಹಿಡಿದಿರಲಿಲ್ಲ. ಅಡುಗೆ ಮನೆಯಿಂದ ಹಾಲು- ಮೊಸರು ಕದ್ದು ತಿಂದು  ಹಾಯಾಗಿದ್ದಿದ್ದರಿಂದ ಇಲಿಗಳೂ ಇದೂ ಸಸ್ಯಾಹಾರಿ
ಬೆಕ್ಕು ಎಂದು ತಿಳಿದು ನಿಶ್ಚಿಂತೆಯಿಂದ ಇದ್ದವು. ಈ ಸ್ವಾತಂತ್ರ್ಯವನ್ನೇ ಬಳಸಿಕೊಂಡ ಬೆಕ್ಕು ತನ್ನ ಹೊಟ್ಟೆ ತುಂಬಿಸಲು ಇಲಿಗಳ ಮೊರೆ ಹೋಯಿತು. ತನಗೆ ಪ್ರತಿನಿತ್ಯ ಹಾಲು ತಂದುಕೊಡಬೇಕೆಂದು ಅಪ್ಪಣೆ ಹೊರಡಿಸಿತು. ಇಲಿಗಳು ಒಪ್ಪಿಕೊಂಡವು.

ಒಪ್ಪಂದದಂತೆ ಪ್ರತಿ ನಿತ್ಯ ಮೂರು ಇಲಿಗಳು ಹಿತ್ತಲಿನಲ್ಲಿ ಹಾಲು ತಂದಿಟ್ಟು ಹೋಗುತ್ತಿದ್ದವು. ಬೆಕ್ಕು ಬಾಯಿ ಚಪ್ಪರಿಸಿ ಸುಮ್ಮನಿರುತ್ತಿತ್ತು. ಮೂರು ದಿನ ಸುಮ್ಮನಿದ್ದ ಬೆಕ್ಕು ನಾಲ್ಕನೇ ದಿನದಿಂದ ಇಲಿಗಳನ್ನು ಹಿಡಿಯಲು ಪ್ರಾರಂಭಿಸಿತು. ಮಿಕ್ಕ ಇಲಿಗಳಿಗೆ ಅನುಮಾನವೇ ಬರಲಿಲ್ಲ. ವಾರಗಳ ಕಾಲ ಬೆಕ್ಕಿನ ಉಪಾಯ ಮುಂದುವರಿದಾಗ ಇಲಿಗಳ ಸಂಖ್ಯೆ ಕಡಿಮೆಯಾಗತೊಡಗಿತು. ಇದರಿಂದ ಮಿಕ್ಕ ಇಲಿಗಳಿಗೆ ಅನುಮಾನ ಬರತೊಡಗಿತು. ಆದರೆ ಅಷ್ಟರಲ್ಲಾಗಲೇ ಬರೀ ಬೆರಳೆಣಿಕೆಯಷ್ಟು ಇಲಿಗಳು ಮಾತ್ರ ಉಳಿದಿದ್ದವು.

ಬೆಕ್ಕಿನ ಉಪಾಯ ಮನೆಯವರಿಗೂ ಗೊತ್ತಾಯಿತು. ಎಲ್ಲರೂ ಬೆಕ್ಕನ್ನು ಹೊಗಳಿ ಮುದ್ದಾಡಿದರು. ಬೆಕ್ಕಿನಿಂದಾಗಿ ದಾಸ್ತಾನಿನಲ್ಲಿ ತಿಂಗಳಿಗಾಗುವಷ್ಟು ಇದ್ದ ಆಹಾರ ಇಲಿಯ ಪಾಲಾಗುವುದು ತಪ್ಪಿತ್ತು. ಅಷ್ಟರಲ್ಲಿ ಮನೆಯ ಯಜಮಾನನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು. ಮನೆಯ ಪರಿಸ್ಥಿತಿ ಉತ್ತಮವಾಗಿ ಬೆಕ್ಕಿಗೆ ಮತ್ತೆ ಯಥೇಚ್ಚವಾಗಿ ಹಾಲು- ಮೊಸರು ಸಿಗತೊಡಗಿತು. 

Advertisement

*ಮಧುಕುಮಾರ್‌ ಬಿಳಿಚೋಡು
ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next