Advertisement

Pet Show: ಸಿಲಿಕಾನ್‌ ಸಿಟಿಯಲ್ಲಿ ಲಲನೆಯರಂತೆ ಹೆಜ್ಜೆ ಹಾಕಿದ ಶ್ವಾನಗಳು

10:41 AM Sep 18, 2023 | Team Udayavani |

ಬೆಂಗಳೂರು: ಪ್ರಾಣಿಗಳೆಂದರೆ ಬಹಳಷ್ಟು ಜನರಿಗೆ ಎಲ್ಲಿಲ್ಲದ ಪ್ರೀತಿ. ನಗರದ ಜಯ ಮಾಹಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪೆಟ್‌ ಶೋನಲ್ಲಿ ಅಪರೂಪ ತಳಿಯ ಶ್ವಾನ ಹಾಗೂ ಬೆಕ್ಕುಗಳ ರ್‍ಯಾಂಪ್‌ ವಾಕ್‌ ನೋಡುಗರ ಕಣ್ಮನ ಸಳೆಯುತ್ತಿತ್ತು.

Advertisement

ಸಾಕು ಪ್ರಾಣಿಗಳ ಬೃಹತ್‌ ದತ್ತು ಸ್ವೀಕಾರ ಅಭಿಯಾನ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಆಯೋಜಿಸಿದ್ದ ಪೆಟ್‌ ಶೋನಲ್ಲಿ ಒಂದಕ್ಕಿಂತ ಒಂದು ಸಿಂಗಾರಗೊಂಡು ಮುದ್ದಾಗಿ ಕಾಣುತ್ತಿರುವ ಶ್ವಾನ ಹಾಗೂ ಬೆಕ್ಕುಗಳು ರ್‍ಯಾಂಪ್‌ ಮೇಲೆ ಲಲನೆಯರಂತೆ ಹೆಜ್ಜೆ ಹಾಕುತ್ತಿರುವುದು ನೋಡುಗರ ಕಣ್ಣು ಸೆಳೆಯಿತು.

ರ್‍ಯಾಂಪ್‌ ವಾಕ್‌!: ನಗರದ ವಿವಿಧ ಭಾಗಗಳಿಂದ 45ಕ್ಕೂ ಅಧಿಕ ವಿವಿಧ ತಳಿಯ ಶ್ವಾನಗಳು ಶೋನಲ್ಲಿ ಭಾಗವಹಿಸಿವೆ. ಮುದೋಳ ನಾಯಿ ಸೇರಿದಂತೆ ಜರ್ಮನ್‌ ಶಫರ್ಡ್‌, ರಾಟ್‌ ವೇಲರ್‌, ಡಾಬರ್‌ ಮ್ಯಾನ್‌, ಇಂಗ್ಲಿಷ್‌ ಕ್ವಾಕರ್‌, ಗೋಲ್ಡನ್‌ ರಿಟ್ರೀವರ್‌, ರಾಜಪಾಳಿ, ಕನ್ನಿ, ಕಾರ್ವಾನಾ ಶ್ವಾನಗಳು ಹಾಗೂ ರಾಗ್ದಾಲ್‌, ಬಿರ್ಮನ್‌ , ಬಾಂಬೆ , ಹಿಮಾಲಯನ್‌, ಸೊಮಾಲಿ, ಪರ್ಸಿಯನ್‌, ಮೈನೆ ಕೂನ್‌, ಬೆಂಗಾಲ್‌ ಮತ್ತು ಇಂಡಿಮೌ ತಳಿಯ ಬೆಕ್ಕುಗಳು ಪೆಟ್‌ ಶೋನಲ್ಲಿ ಭಾಗವಹಿಸಿವೆ.

ಹಬ್ಬದ ವಾತಾವರಣ: ಪೆಟ್‌ ಶೋ ಕೇವಲ ಶ್ವಾನ, ಬೆಕ್ಕು ಜತೆಗೆ ಸಾಕು ಪ್ರಾಣಿಗಳಷ್ಟೇ ಮಾತ್ರವಲ್ಲದೇ ಅವುಗಳ ಮಾಲೀಕರಿಗೂ ವಿಶೇಷ ಮೆರಗು ನೀಡಿದೆ. ಪ್ರೇಕ್ಷಕರು ಅವರನ್ನು ಸಾಕು ಪ್ರಾಣಿಗಳ ಮಾಲೀಕ ರನ್ನು ಹುಡುಕುತ್ತಿರುವ ದೃಶ್ಯ ಕಂಡು ಬಂತು. ಅವರಲ್ಲಿ ಇದು ಯಾವ ತಳಿಯದು? ಎಲ್ಲಿಂದ ತಂದು ಸಾಕಿದ್ದು? ಇದರ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇದಕ್ಕೆ ಏನು ಆಹಾರ ನೀಡುತ್ತೀರಿ ಎಂಬ ಪ್ರಶ್ನೆಗಳ ಸರಮಾಲೆಯನ್ನೇ ಶ್ವಾನ ಪ್ರಿಯರು ಇಡುತ್ತಿದ್ದರು. ಮಾಲೀಕರು ಕೇಳಿದವರಿಗೆಲ್ಲರಿಗೂ ನಗು, ನಗುತ್ತಲೇ ಉತ್ತರಿಸುತ್ತಿದ್ದದು ವಿಶೇಷವಾಗಿತ್ತು.

ಬೀದಿ ಶ್ವಾನ ದತ್ತು!: ಕಾರ್ಯ ಕ್ರಮದಲ್ಲಿ ವಿಶೇಷವಾಗಿ ಬೀದಿ ನಾಯಿ ಹಾಗೂ ಬೆಕ್ಕುಗಳ ದತ್ತು ಸ್ವೀಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 200 ಬೀದಿ ನಾಯಿ ಹಾಗೂ 150 ಬೆಕ್ಕುಗಳನ್ನು ದತ್ತು ಸ್ವೀಕಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಜತೆಗೆ ಇದೇ ವೇಳೆ ಪಶುವೈದ್ಯರಿಂದ ಪ್ರಾಣಿಗಳ ಆರೋಗ್ಯ ತಪಾಸಣೆ ಒಳಪಡಿಸಲಾ ಯಿತು. ಇದೇ ವೇಳೆ ಸಾಕು ಪ್ರಾಣಿಗಳಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

Advertisement

ಸೆಲ್ಫಿ- ಐಸ್‌ಕ್ರೀಮ್‌: ಪ್ರತಿಯೊಂದು ಸಾಕು ಪ್ರಾಣಿಗಳನ್ನು ವಿಭಿನ್ನವಾಗಿ ರೆಡಿ ಮಾಡಿಕೊಂಡು ಬಂದಿದ್ದು, ಸ್ಪರ್ಧೆಗೂ ತಯಾರಿ ನಡೆಸಿ ಮತ್ತೆ ಅವುಗಳಿಗೆ ಮೇಕಪ್‌ ಮಾಡಿ ಸಿದ್ಧಪಡಿಸುವ ದೃಶ್ಯ ಕೂಡ ಕಂಡು ಬಂತು. ಪ್ರೇಕ್ಷಕರು ಅವರ ಜತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಹಾಗೂ ಬಿಸಿಲಿನಿಂದ ತತ್ತರಿಸಿದ ಶ್ವಾನಗಳಿಗೆ ಮಾಲೀಕರು ಐಸ್‌ಕ್ರೀಮ್‌ ತಿನ್ನಿಸುತ್ತಿರುವ ದೃಶ್ಯಗಳು ಕಂಡು ಬಂತು.

ಪೆಟ್‌ ಶೋನಲ್ಲಿ ಅಪರೂಪ ತಳಿ ಶ್ವಾನಗಳು, ಬೆಕ್ಕುಗಳು ಹಾಗೂ ಇತರೆ ಸಾಕು ಪ್ರಾಣಿಗಳು ಬಂದಿವೆ. ಇವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಸೌಜನ್ಯ, ಗಂಗಾನಗರ.

ಕಳೆದ 2 ವರ್ಷದಿಂದ ಮನೆಯಲ್ಲಿ ಜರ್ಮನ್‌ ಶಫರ್ಡ್‌ ಸಾಕುತ್ತಿದ್ದೇನೆ. ಅನೇಕ ಬಾರಿ ನಗರದ ಹೊರಗೆ ನಡೆಯುವ ಪೆಟ್‌ ಶೋಗಳಲ್ಲಿ ಭಾಗವಹಿಸುತ್ತಿದ್ದೆ. ಇದೇ ಮೊದಲ ಬಾರಿಗೆ ಮನೆ ಸಮೀಪದಲ್ಲಿ ಹಮ್ಮಿಕೊಂಡ ಈ ಪೆಟ್‌ ಶೋನಲ್ಲಿ ಭಾಗವಹಿಸಿದ್ದೇನೆ. ಇದರಿಂದ ನನಗೆ ಸಾಕು ಪ್ರಾಣಿಗಳನ್ನು ಯಾವ ರೀತಿಯಾಗಿ ನೋಡಿಕೊಳ್ಳಬೇಕು ಎನ್ನುವುದು ತಿಳಿದು ಬರುತ್ತದೆ. – ಭರತ್‌ ವಿ.ಎನ್‌., ವಸಂತ ನಗರ.

Advertisement

Udayavani is now on Telegram. Click here to join our channel and stay updated with the latest news.

Next