ಬೆಂಗಳೂರು: ಸಮರದ ಅಮರ ಕಲಿಗಳಿಗೆ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೇತೃತ್ವದ “ಸಮರ್ಪಣ-2019′ ತಂಡ, ವಿವಿ ಕ್ಯಾಂಪಸ್‌ನಲ್ಲಿ ಯೋಧರ ಕುಟುಂಬದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಪಿಇಎಸ್ ವಿವಿ ಕುಲಾಧಿಪತಿ ಡಾ. ಎಂ.ಆರ್. ದೊರೆಸ್ವಾಮಿ, ಭಾರತೀಯ ವಿಜ್ಞಾನ ಸಂಸ್ಥೆಯ ಹೈಪರ್‌ಸಾನಿಕ್ಸ್ ಕೇಂದ್ರದ ಸ್ಥಾಪಕ ಅಧ್ಯಕ್ಷ ಡಾ.ಗೋಪಾಲನ್ ಜಗದೀಶ್ ಹಾಗೂ ಅಪರಾಧ ತನಿಖಾ ದಳದ ವರಿಷ್ಠಾಧಿಕಾರಿ ಡಾ.ಎಸ್.ಡಿ.ಶರಣಪ್ಪ ಅವರು 15 ಹುತಾತ್ಮ ಯೋಧರ ಕುಟುಂಬ ಸದಸ್ಯರನ್ನು ಸನ್ಮಾನಿಸುವ ಮೂಲಕ ಮೂರು ದಿನಗಳ ಸಮರ್ಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ, ಮಾ.24ರಂದು ವಿವಿ ಹಮ್ಮಿಕೊಂಡಿದ್ದ “ಸಮರ್ಪಣ ಓಟ’ ಮ್ಯಾರಥಾನ್‌ನಲ್ಲಿ 4500 ವಿದ್ಯಾರ್ಥಿಗಳು ಹಾಗೂ 400 ಸೈನಿಕರು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ಪಿಇಎಸ್ ವಿವಿಯಿಂದ ದತ್ತು: 2015ರ ಕೇರಳದ ಕೋಳಿಕ್ಕೋಡ್ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ರಕ್ಷಿಸಲು ಹೋಗಿ ಜೀವ ತೆತ್ತ ಹಾಸನದ ಮೋಹಿದ್ದೀನ್ ಅವರ 5 ವರ್ಷದ ಮಗಳನ್ನು ಪಿಇಎಸ್ ವಿವಿ ದತ್ತು ತೆಗೆದುಕೊಂಡು ಆಕೆಯ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಿದೆ ಎಂದರು.
ಡಾ.ಗೋಪಾಲನ್ ಜಗದೀಶ್ ಅವರು ಮಾತನಾಡಿ, ಭಾರತೀಯ ಸಮಾಜದ ಕುಟುಂಬ ಪದ್ಧತಿ ಹಾಗೂ ಮೌಲ್ಯಯುತ ಸಂಸ್ಕಾರದಿಂದ ಇಂತಹ ಕಾರ್ಯಕ್ರಮ ಆಯೋಜಿಸಲು ಸಾಧ್ಯ. ಇದರೊಂದಿಗೆ ರಕ್ಷಣಾ ಕ್ಷೇತ್ರಕ್ಕೆ ಅನುಕೂಲವಾಗುವ ಆವಿಷ್ಕಾರಗಳನ್ನು ಕೈಗೊಳ್ಳುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.