Advertisement

ಮುಖವಾಡ ಕಳಚಿದ ಮುಷರ್ರಫ್

10:08 AM Dec 01, 2017 | |

ಜಗತ್ತಿಗೆ ಕಂಟಕವಾಗಿರುವ ಉಗ್ರವಾದವನ್ನು ನೀರೆರೆದು, ಕೈತುತ್ತು ತಿನ್ನಿಸಿ ಪೋಷಿಸುತ್ತಿರುವುದು ಅಲ್ಲಿನ ರಾಜಕೀಯ ವ್ಯವಸ್ಥೆ ಎನ್ನುವುದಕ್ಕೆ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್ ಅವರೇ ಬಲವಾದ ಪುರಾವೆ ಒದಗಿಸಿದ್ದಾರೆ. ಸಂದರ್ಶನವೊಂದರಲ್ಲಿ ಮುಷರ್ರಫ್ ಹೇಳಿರುವ ಮಾತುಗಳು ಉಗ್ರವಾದ ಪಾಕಿಸ್ಥಾನದ ರಾಜನೀತಿಯ ಅಂಗ ಎಂಬ ಭಾರತದ ಆರೋಪವನ್ನು ಸಂಶಯಾತೀತವಾಗಿ ಸಾಬೀತುಪಡಿಸಿದೆ. ಉಗ್ರ ಸಂಘಟನೆಗಳಾದ ಲಷ್ಕರ್‌-ಎ-ತಯ್ಯಬ ಮತ್ತು ಅದರ ಇನ್ನೊಂದು ಮುಖವಾಗಿರುವ ಜಮಾತ್‌-ಉದ್‌-ದಾವಾವನ್ನು ನಾನೇ ಪೋಷಿಸಿ ಬೆಳೆಸಿದೆ ಎಂದು ಯಾವುದೇ ನಾಚಿಕೆ, ಭೀತಿ ಇಲ್ಲದೆ ಟಿವಿ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ ಮುಷರ್ರಫ್. ಕಾಶ್ಮೀರದಲ್ಲಿ ಭಾರತದ ಸೇನೆಯನ್ನು ಹತ್ತಿಕ್ಕುವ ಸಲುವಾಗಿಯೇ ಉಗ್ರರನ್ನು ಬೆಂಬಲಿಸುತ್ತಿದ್ದೆ ಮತ್ತು ಮುಂದೆಯೂ ಬೆಂಬಲಿಸುತ್ತೇನೆ ಎಂಬ ದಾಷ್ಟéìದ ಮಾತುಗಳನ್ನು ಕೂಡ ಆಡಿದ್ದಾರೆ. ಇದರಿಂದ ಅಧಿಕಾರದಲ್ಲಿರುವಾಗ ಮುಷರ್ರಫ್ ಭಾರತದ ಜತೆಗೆ ನಡೆಸಿದ್ದ ದ್ವಿಪಕ್ಷೀಯ ಸಂಬಂಧ ವರ್ಧನೆ ಮತ್ತು ಶಾಂತಿಯ ಮಾತುಕತೆಗಳೆಲ್ಲ ಬರೀ ಕಪಟ ನಾಟಕಗಳಾಗಿದ್ದವು. ಈ ಮಾಜಿ ಸರ್ವಾಧಿಕಾರಿಯ ಮನಸ್ಸಿನಲ್ಲಿದ್ದ ಲೆಕ್ಕಾಚಾರಗಳೆಲ್ಲ ಬೇರೆಯೇ ಆಗಿತ್ತು. ಭಾರತ ಕೊಟ್ಟ ಸಕಲ ಗೌರವ, ಮರ್ಯಾದೆಗಳನ್ನು ಅನುಭವಿಸುತ್ತಲೇ ಅವರು ಬೆನ್ನ ಹಿಂದಿನಿಂದ ಚೂರಿ ಹಾಕುವ ಕುರಿತು ಚಿಂತಿಸುತ್ತಿದ್ದರು ಎನ್ನುವುದನ್ನು ಅವರೇ ಒಪ್ಪಿಕೊಂಡಂತಾಗಿದೆ. 

Advertisement

ಪಾಕಿಸ್ಥಾನದ ಉಗ್ರರಿಗೆ ಅಲ್ಲಿನ ಸರಕಾರ, ಸೇನೆ ಮತ್ತು ಗುಪ್ತಚರ ಪಡೆ ಸರ್ವ ನೆರವುಗಳನ್ನು ನೀಡುತ್ತಿದೆ ಎನ್ನುವ ವಿಷಯ ಹೊಸದೇನಲ್ಲ. ಭಾರತ ಹಿಂದಿನಿಂದಲೂ ಇದನ್ನು ಹೇಳುತ್ತಾ ಬಂದಿದೆ ಹಾಗೂ ಈಗೀಗ ಭಾರತದ ಸತತ ಪ್ರಯತ್ನದಿಂದಾಗಿ ಇಡೀ ಜಗತ್ತಿಗೆ ಇದು ಅರ್ಥವಾಗಿದೆ. ಆದರೆ ಪಾಕಿಸ್ಥಾನದ ರಾಜಕೀಯ ನಾಯಕ, ದಂಗೆಯ ಮೂಲಕ ಅಧಿಕಾರವನ್ನು ವಶಪಡಿಸಿಕೊಂಡು ವರ್ಷಗಳ ಕಾಲ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಿದ ಮುಷರ್ರಫ್ ಅದನ್ನೀಗ ಬಹಿರಂಗವಾಗಿ ಒಪ್ಪಿಕೊಂಡು ಅಷ್ಟರಮಟ್ಟಿಗೆ ಭಾರತದ ವಾದವನ್ನು ಎತ್ತಿ ಹಿಡಿದಿದ್ದಾರೆ. ಕಳೆದ ವರ್ಷ ಪಾಕಿಸ್ಥಾನ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಅನ್ವರ್‌ ಜಹೀರ್‌ ಜಮಾಲಿ ಅವರು ಕೂಡ ದೇಶದ ಕೆಲವು ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ ಉಗ್ರರಿಗೆ ಬೆಂಬಲ ನೀಡುತ್ತಿವೆ ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.  2008ರಲ್ಲಿ ಮುಂಬಯಿ ಮೇಲಾದ ಭಯೋತ್ಪಾದಕ ದಾಳಿಯೂ ಸೇರಿದಂತೆ ಪಾಕ್‌ ಉಗ್ರರು ಎಸಗಿದ ಹತ್ತಾರು ಉಗ್ರ ಕೃತ್ಯಗಳಿಗೆ ಸಂಬಂಧಿಸಿದಂತೆ ಭಾರತ ಮೂಟೆಗಟ್ಟಲೆ ಪುರಾವೆಗಳನ್ನು ನೀಡಿದ್ದರೂ ಪಾಕ್‌ ಸರಕಾರ ಅವುಗಳನ್ನು ಮೂಲೆಗೆಸೆದು ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿ ಉಗ್ರರನ್ನು ಮೆರೆಯಲು ಬಿಟ್ಟಾಗಲೇ ಉಗ್ರರಿಗೆ ಅಲ್ಲಿ ರಾಜಾಶ್ರಯವಿದೆ ಎನ್ನುವುದು ಭಾರತಕ್ಕೆ ಅರ್ಥವಾಗಬೇಕಿತ್ತು. ಆದರೆ ನಮ್ಮ ಸರಕಾರ ಮುಷರ್ರಫ್ ಸುರಿಸಿದ ಮೊಸಳೆ ಕಣ್ಣೀರನ್ನು ನಿಜವೆಂದು ನಂಬಿ ಮತ್ತೆ ಮತ್ತೆ ಶಾಂತಿ ಮಂತ್ರ ಪಠಿಸುತ್ತಾ ಕಾಲಹರಣ ಮಾಡಿದ ಕಾರಣ ಇಂದು ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಜಾಗತಿಕ ಒತ್ತಡ ತಾಳಲಾರದೆ ಸಯೀದ್‌, ಲಖೀÌಯಂತಹ ಕಡುಪಾತಕಿಗಳನ್ನು ಕೆಲ ದಿನಗಳ ಮಟ್ಟಿಗೆ ಬಂಧನದಲ್ಲಿಡುವ ನಾಟಕವಾಡಿ ಮತ್ತೆ ಬಿಡುಗಡೆಗೊಳಿಸುತ್ತಿರುವುದಕ್ಕೆ ಅಲ್ಲಿನ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಸಯೀದ್‌, ಅಜರ್‌ನಂತಹ ಉಗ್ರರು ಸದಾ ಕಾಶ್ಮೀರಕ್ಕೆ ಉಗ್ರರನ್ನು ಛೂ ಬಿಟ್ಟು ರಕ್ತದೋಕುಳಿಯನ್ನು ಹರಿಸುತ್ತಿರಬೇಕೆನ್ನುವುದೇ ಅಲ್ಲಿನ ಸರಕಾರದ ಇಚ್ಚೆಯಾಗಿದೆ.  ಉಗ್ರರನ್ನು ಕೆಟ್ಟ ಉಗ್ರರು ಮತ್ತು ಒಳ್ಳೆಯ ಉಗ್ರರು ಎಂದು ಮೊದಲು ವರ್ಗೀಕರಿಸಿದ ಮಹಾನುಭಾವ ಈ ಮುಷರ್ರಫ್. ಭಾರತ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಿಗೆ ಉಪಟಳ ನೀಡುವವರು ಒಳ್ಳೆಯ ಉಗ್ರರು ಮತ್ತು ಪಾಕಿಸ್ಥಾನದ ಮೇಲೆಯೇ ದಾಳಿ ಮಾಡುವವರು ಕೆಟ್ಟ ಉಗ್ರರು ಎನ್ನುವುದು ಅವರ ನೀತಿಯಾಗಿತ್ತು. ದುರದೃಷ್ಟವೆಂದರೆ ನಮ್ಮ ದೇಶದ ಕೆಲವು ರಾಜಕಾರಣಿಗಳು ಮುಷರ್ರಫ್ರ ಎಡಬಿಡಂಗಿ ವಾದವನ್ನು ಒಪ್ಪಿಕೊಂಡು ಚಪ್ಪಾಳೆ ತಟ್ಟಿದ್ದರು.  

ಪಾಕಿಸ್ಥಾನವೀಗ ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರದ ಬದಲಾಗಿ ಉಗ್ರರಿಂದಲೇ ಆಳಲ್ಪಡುವ ದೇಶವಾಗುವತ್ತ ನಡೆಯುತ್ತಿದೆ. ಲಷ್ಕರ್‌ ಮುಖಂಡ ಹಾಫಿಜ್‌ ಸಯೀದ್‌ ರಾಜಕೀಯ ಪಕ್ಷ ಸ್ಥಾಪಿಸಿಕೊಂಡು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ತಯಾರಿಯಲ್ಲಿದ್ದಾನೆ. ಸಮಾಜ ಸೇವೆಯ ಸೋಗಿನ ಮೂಲಕ ಸಾಕಷ್ಟು ಜನಬೆಂಬಲವನ್ನೂ ಗಳಿಸಿರುವ ಅವನು ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರುವ ಸಾಧ್ಯತೆಗಳನ್ನು ಮನಗಂಡಿರುವ ಮುಷರ್ರಫ್ ಅವನ ಸಖ್ಯ ಮಾಡಿಕೊಂಡು ಮತ್ತೂಮ್ಮೆ ಅಧಿಕಾರ ಅನುಭವಿಸುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಅವನ ಉಗ್ರವಾದಕ್ಕೆ ಬೆಂಬಲ ಮುಂದುವರಿಸುವ ಮಾತುಗಳನ್ನಾಡುತ್ತಿದ್ದಾರೆ. ಪಾಕಿಸ್ಥಾನದ ಉಗ್ರವಾದ ಭಾರತಕ್ಕೆ ಮಾತ್ರವಲ್ಲದೆ ಅಫ್ಘಾನಿಸ್ಥಾನ, ಬಾಂಗ್ಲಾದೇಶ ಸೇರಿ ನೆರೆಹೊರೆಯ ಎಲ್ಲ ದೇಶಗಳಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಾಜಕೀಯದ ಕೃಪೆಯಲ್ಲಿ ನಡೆಯುತ್ತಿರುವ ಈ ಹಿಂಸಾವಾದವನ್ನು ಕೊನೆಗಾಣಿಸಲು ಅತ್ಯಂತ ಕಠಿನ ನಿರ್ಧಾರ ಕೈಗೊಳ್ಳಲು ಇದು ಸಕಾಲ.

Advertisement

Udayavani is now on Telegram. Click here to join our channel and stay updated with the latest news.

Next