ಪೆರುವಾಯಿ: ಪೆರುವಾಯಿ ಗ್ರಾಮಸಭೆ ಬೆಳಗ್ಗೆ 10.30ಕ್ಕೆ ನಿಗದಿ ಯಾಗಿತ್ತು. ಆದರೆ 11ರ ತನಕವೂ ನೋಡಲ್ ಅಧಿಕಾರಿ ಆಗಮಿಸಿರಲಿಲ್ಲ. ಕೆಲವು ಇಲಾಖಾಧಿಕಾರಿಗಳೂ ಬರಲಿಲ್ಲ. ಗ್ರಾಮಸ್ಥರು ಬಂದು ಅಧಿಕಾರಿಗಳನ್ನು ಕಾಯ ಬೇಕೇ ಎಂದು ಆಕ್ರೋಶದಿಂದ ಪ್ರಶ್ನಿಸಿದ ನಾಗರಿಕರು, ಅಧಿಕಾರಿಗಳು ಹಾಜರಾಗುವ ದಿನವೇ ನಿಗದಿಪಡಿಸಿ ಗ್ರಾಮಸಭೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ಪೆರುವಾಯಿ ಶ್ರೀ ರಾಜರಾಜೇಶ್ವರೀ ಭಜನ ಮಂದಿರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿದರು.
ಪೆರುವಾಯಿ ಗ್ರಾಮಸಭೆ ಬಗ್ಗೆ ಗ್ರಾಮಸ್ಥರಿಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ. ಒಂದು ದಿನ ಹಿಂದೆ ಸದಸ್ಯರಿಗೂ ನೋಟಿಸ್ ಕಳುಹಿಸಲಾಗಿದೆ. ಪಂ. ಅಭಿವೃದ್ಧಿ ಅಧಿಕಾರಿಯವರೂ ಸಮಯಕ್ಕೆ ಹಾಜರಾಗಲಿಲ್ಲ ಎಂದು ದೂರಿದರು.
ತಡವಾಗಿ ಬಂದ ಪಂ. ಅಭಿವೃದ್ಧಿ ಅಧಿಕಾರಿ ಅಶೋಕ್ ಮಾತನಾಡಿ, ಕಳೆದ 6 ವರ್ಷಗಳಿಂದ ಇದೇ ಪಂ.ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಡವಾಗಿ ಬಂದರೂ ಸಭೆಯಲ್ಲಿ ಸಮಸ್ಯೆ ಆಗಲಿಲ್ಲ. ಸಭೆಗೆ ಬಾರದ ಅಧಿಕಾರಿಗಳ ಬಗ್ಗೆ ಈ ಹಿಂದೆಯೂ ತಾ| ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈಗಲೂ ಮಾಹಿತಿ ನೀಡಿ ಶೋಕಾಸ್ ನೋಟಿಸ್ ನೀಡುವಂತೆ ಕೋರಲಾಗುವುದು ಎಂದರು.
ನೋಡಲ್ ಅಧಿಕಾರಿ ಮಹೇಶ್ ಮಾತನಾಡಿ, ಕಚೇರಿಗೆ ತೆರಳಿ ಸಭೆಗೆ ಆಗಮಿಸುವಾಗ ತಡವಾಗಿದೆ. ಗ್ರಾಮಸಭೆಗೆ ತಯಾರಿ ನಡೆಸಬೇಕಾದ್ದು ನಮ್ಮ ಕರ್ತವ್ಯ ಎಂದರು. ಬಳಿಕ ಗ್ರಾ.ಪಂ. ಅಧ್ಯಕ್ಷ ರಾಲ್ಫ್ ಡಿ’ಸೋಜಾ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು.
ಸಭೆಗೆ ಬಹಿಷ್ಕಾರ
ಗ್ರಾಮಸ್ಥರೊಬ್ಬರು ಸೋಲಾರ್ ಬೀದಿ ದೀಪ ಅಳವಡಿಕೆ ಬಗ್ಗೆ ಮಾಹಿತಿ ನೀಡಲು ವಿನಂತಿಸಿದರು. ಈ ಬಗ್ಗೆ ನೋಡಲ್ ಅಧಿಕಾರಿ ಜತೆ ಚರ್ಚಿಸುತ್ತಿದ್ದ ವೇಳೆ ಪೊಲೀಸರು ಮಧ್ಯಪ್ರವೇಶಿಸಿದರು. ಪೊಲೀಸರು ಧಾರ್ಮಿಕ ಕೇಂದ್ರದ ಒಳಗೆ ಪಾದರಕ್ಷೆ ಹಾಕಿಕೊಂಡು ಬಂದರೆಂದು ಗದ್ದಲ ಆರಂಭವಾಯಿತು. ಪೊಲೀಸರು ಅನುಚಿತವಾಗಿ ನಡೆದುಕೊಂಡರು ಎಂದು ಆರೋಪಿಸಿದ ವಿಹಿಂಪ ಹಾಗೂ ಬಜರಂಗದಳ ಬೆಂಬಲಿತರು ಸಭೆಗೆ ಬಹಿಷ್ಕಾರ ಹಾಕಿ ತೆರಳಿದರು.