ಪರ್ತ್: ಟೀಂ ಇಂಡಿಯಾದ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಗಳನ್ನು ಕಾಡಿದ್ದರು. ತನ್ನ ಬೆಂಕಿಯುಗುಳುವ ಬೌಲಿಂಗ್ ನಿಂದ ಆಸೀಸ್ ಬ್ಯಾಟರ್ ಗಳಿಗೆ ಸಂಕಷ್ಟ ತಂದಿತ್ತಿದ್ದರು. 30 ರನ್ ನೀಡಿ ಐದು ವಿಕೆಟ್ ಪಡೆದಿದ್ದರು.
ಈ ಬೌಲಿಂಗ್ ಸಾಧನೆಯಿಂದ ಆಸ್ಟ್ರೇಲಿಯಾ ತಂಡವು 104 ರನ್ ಗಳಿಗೆ ಆಲೌಟಾಗಿತ್ತು. ಭಾರತ ತಂಡವು 46 ರನ್ ಮುನ್ನಡೆ ಸಾಧಿಸಿತ್ತು.
ಬುಮ್ರಾ ಅವರ ಬೌಲಿಂಗ್ ದಾಳಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಇದೇ ವೇಳೆ ಅವರ ಬೌಲಿಂಗ್ ಶೈಲಿ ಬಗ್ಗೆಯೂ ಹಲವು ಅನುಮಾನ ವ್ಯಕ್ತಪಡಿಸಿದ್ದರು.
ಬುಮ್ರಾ ಅವರ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. 2022 ರಲ್ಲಿ, ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಹಸ್ನೇನ್ ಶಂಕಿತ ಕ್ರಮಕ್ಕಾಗಿ ವರದಿಯಾದ ನಂತರ ಅಭಿಮಾನಿಗಳು ಬುಮ್ರಾ ಚಕ್ಕಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಬುಮ್ರಾ ಮೇಲಿನ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮತ್ತು ಹೆಸರಾಂತ ಬೌಲಿಂಗ್ ಕೋಚ್ ಇಯಾನ್ ಪಾಂಟ್, ಭಾರತದ ವೇಗಿಗಳ ಕ್ರಮವನ್ನು ಏಕೆ ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ವಿವರಿಸಿದರು.
“ನೀವು ಅವನ ತೋಳನ್ನು ಮಣಿಕಟ್ಟಿನಿಂದ ಮೊಣಕೈಗೆ ನೇರವಾಗಿ ನೋಡಬಹುದು. ಲಂಬಕ್ಕಿಂತ ಮೇಲಿರುವಾಗ ಮೊಣಕೈಯು 15 ಡಿಗ್ರಿಗಳಷ್ಟು ಹಿಂದೆ ಬಾಗಬಾರದು ಎಂಬುದು ನಿಯಮವಾಗಿದೆ. ನೀವು ಅವನ ತೋಳಿನ ಮುಂದಕ್ಕೆ ಬಾಗುವಿಕೆಯನ್ನು ಸ್ಪಷ್ಟವಾಗಿ ನೋಡಬಹುದು, ಇದು ಹೈಪರ್ ಎಕ್ಸ್ಟೆನ್ಶನ್ ಆಗಿದೆ. ಇದು ಹೈಪರ್-ಮೊಬೈಲ್ ಕೀಲುಗಳನ್ನು ಹೊಂದಿರುವ ಜನರಿಗೆ (ಮುಂದಕ್ಕೆ ಬೆಂಡ್) ಅನುಮತಿಸಲಾಗಿದೆ” ಎಂದು ಪಾಂಟ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.