ಪರ್ತ್: ಇಲ್ಲಿನ “ಆಪ್ಟಸ್ ಸ್ಟೇಡಿಯಂ’ನಲ್ಲಿ ನ. 22ರಂದು ಭಾರತ – ಆಸ್ಟ್ರೇಲಿಯ ತಂಡಗಳು 2024-25ರ ಬೋರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ನಾಂದಿ ಹಾಡಲಿವೆ. ಆತಿಥೇಯ ಆಸೀಸ್ ಬಲಿಷ್ಠ ಪಡೆಯನ್ನು ಹೊಂದಿದ್ದು, ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ. ಆದರೆ ಭಾರತ ಅವಳಿ ಆಘಾತಕ್ಕೆ ಸಿಲುಕಿದೆ. ನ್ಯೂಜಿಲ್ಯಾಂಡ್ ವಿರುದ್ಧ ತವರಲ್ಲೇ ಅನುಭವಿಸಿದ ವೈಟ್ವಾಶ್ ಹಾಗೂ ಗಾಯಾಳುಗಳ ಚಿಂತೆ.
ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಲಭ್ಯರಿಲ್ಲದೇ ಇರುವುದರಿಂದ ಪರ್ತ್ನಲ್ಲಿ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಆರಂಭಕಾರ ಅಭಿಮನ್ಯು ಈಶ್ವರನ್ ಮತ್ತು ಪೇಸ್ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಟೆಸ್ಟ್ ಪದಾರ್ಪಣೆಯ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಯಶಸ್ವಿ ಜೈಸ್ವಾಲ್ ಜತೆ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸ ಬಹುದು ಎಂಬುದು ಆರಂಭದ ಲೆಕ್ಕಾ ಚಾರವಾಗಿತ್ತು. ಆದರೆ ಗಿಲ್ ಕೂಡ ಗೈರಾಗಿರುವುದರಿಂದ ರಾಹುಲ್ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸುವುದು ತಂಡದ ಯೋಜನೆ ಯಾಗಿದೆ. ಆಗ ಸ್ಪೆಷಲಿಸ್ಟ್ ಆರಂಭಕಾರ ಅಭಿಮನ್ಯು ಈಶ್ವರನ್ ಇನ್ನಿಂಗ್ಸ್ ಆರಂಭಿಸಬೇಕಾಗುತ್ತದೆ. ಆದರೆ “ಎ’ ತಂಡಗಳ ಸರಣಿಯಲ್ಲಿ ಅಭಿಮನ್ಯು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲ ರಾಗಿದ್ದರು. 4 ಇನ್ನಿಂಗ್ಸ್ಗಳಲ್ಲಿ ಇವರ ಒಟ್ಟು ಗಳಿಕೆ ಬರೀ 36 ರನ್ ಆಗಿತ್ತು.
ಸರ್ಫರಾಜ್ -ಜುರೆಲ್ ಸ್ಪರ್ಧೆ
ತಂಡದ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಮತ್ತು ಧ್ರುವ ಜುರೆಲ್ ನಡುವೆ ಸ್ಪರ್ಧೆಯೊಂದು ಕಂಡುಬಂದಿದೆ. ಜುರೆಲ್ ದ್ವಿತೀಯ “ಎ’ ಟೆಸ್ಟ್ನಲ್ಲಿ ಕ್ರಮವಾಗಿ 80 ಹಾಗೂ 68 ರನ್ ಬಾರಿಸಿದ್ದರು. ಸರ್ಫರಾಜ್ ನ್ಯೂಜಿಲ್ಯಾಂಡ್ ವಿರುದ್ಧ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಬಳಿಕ ಕ್ಲಿಕ್ ಆಗಿಲ್ಲ. ಮೂಲತಃ ಕೀಪರ್ ಆಗಿರುವ ಜುರೆಲ್ ಅವರನ್ನು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಅಥವಾ ಇಬ್ಬರಿಗೂ ಅವಕಾಶ ಲಭಿಸುವ ರೀತಿಯಲ್ಲಿ ತಂಡವನ್ನು “ಸೆಟ್’ ಮಾಡುವ ಯೋಜನೆಯೂ ಇದೆ.
ರಾಣಾ-ರೆಡ್ಡಿ ರೇಸ್
ಪರ್ತ್ ಪಿಚ್ ಬೌನ್ಸಿ ಆಗಿರುವುದ ರಿಂದ ಪೇಸ್ ಬೌಲಿಂಗ್ ಆಲ್ರೌಂಡರ್ ಒಬ್ಬರ ಆವಶ್ಯಕತೆ ಭಾರತಕ್ಕಿದೆ. ಇಲ್ಲಿ ರೇಸ್ನಲ್ಲಿರುವ ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಇಬ್ಬರೂ ಹೊಸಬರು. ಇನ್ನೂ ಟೆಸ್ಟ್ ಕ್ಯಾಪ್ ಧರಿಸಿಲ್ಲ. ಮೂಲಗಳ ಪ್ರಕಾರ ನಿತೀಶ್ ಕುಮಾರ್ ರೆಡ್ಡಿ ಆಯ್ಕೆ ರೇಸ್ನಲ್ಲಿ ತುಸು ಮುಂದಿದ್ದಾರೆ.
3ನೇ ಪೇಸರ್ ಯಾರು?
ಬುಮ್ರಾ ಮತ್ತು ಸಿರಾಜ್ ಅವರಿಗೆ ಜೋಡಿಯಾಗಲಿರುವ 3ನೇ ಪೇಸ್ ಬೌಲರ್ ಯಾರು ಎಂಬ ಪ್ರಶ್ನೆ ಯೊಂದಿದೆ. ಇಲ್ಲಿ ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ಇದ್ದಾರೆ. ಕಳೆದೆ ರಡು ಟೆಸ್ಟ್ ಸರಣಿಗಳಲ್ಲಿ ಆಕಾಶ್ ದೀಪ್ ಆಡಿದ ಕಾರಣ ಅವರೇ ಮುಂದು ವರಿಯುವ ಸಾಧ್ಯತೆ ಹೆಚ್ಚು.
ಇನ್ನು ಸ್ಪಿನ್ ವಿಭಾಗ. ಅಶ್ವಿನ್ ಮತ್ತು ಜಡೇಜ ಅವರಲ್ಲಿ ಒಬ್ಬರಷ್ಟೇ ಅವಕಾಶ ಪಡೆಯಲಿದ್ದಾರೆ. ಅಂದಹಾಗೆ 2018ರ ಪರ್ತ್ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಳ್ಳಿ… ಭಾರತದ ಆಡುವ ಬಳಗದಲ್ಲಿ ಸ್ಪಿನ್ನರ್ಗಳೇ ಇರಲಿಲ್ಲ!