ಹುಬ್ಬಳ್ಳಿ: ಮಕ್ಕಳಿಗೆ ಪಠ್ಯದ ಜೊತೆಗೆ ಕಲೆಗಳಲ್ಲಿ ಆಸಕ್ತಿ ಮೂಡಿಸಿದಾಗ ಸರ್ವಾಂಗೀಣ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆರ್.ಎಂ. ಗೋಗೇರಿ ಹೇಳಿದರು. ನೆಹರು ಮೈದಾನದಲ್ಲಿ ವಿಶ್ವ ಕನ್ನಡ ಬಳಗ ಆಯೋಜಿಸಿದ್ದ ಕನ್ನಡ ಜಾನಪದ, ಸಾಂಸ್ಕೃತಿಕ ಹಾಗೂ ದೇಶಿ ಕ್ರೀಡೆಗಳ ಬೃಹತ್ ಸಮಾವೇಶದಲ್ಲಿ ಮಕ್ಕಳ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಆಸಕ್ತಿಗನುಗುಣವಾಗಿ ಸಾಹಿತ್ಯ, ಸಂಗೀತ, ಚಿತ್ರಕಲೆಯನ್ನೂ ಕಲಿಸಬೇಕು. ಪಾಲಕರು ಹಾಗೂ ಶಿಕ್ಷಕರು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕೊಡುಗೆ ನೀಡಬೇಕು ಎಂದರು. ಮಕ್ಕಳು ಭಾಷಣ ಹಾಗೂ ರಂಗಭೂಮಿಯಿಂದ ಶಿಸ್ತು, ಧೈರ್ಯ, ಸಂವಹನ ಕಲೆ ಕರಗತ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಕಾವ್ಯಾಸಕ್ತ ಮಕ್ಕಳಿಗೆ ಕಾವ್ಯ ರಚನೆಯ ಕಮ್ಮಟಗಳನ್ನು ಸಂಘಟಿಸಬೇಕು. ಇಂಥ ಸಮಾವೇಶಗಳು ಮಕ್ಕಳಲ್ಲಿ ಸಾಹಿತ್ಯಾಭಿಮಾನ ಮೂಡಿಸುವಲ್ಲಿ ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಒಂದು ಮಗುವಿಗೂ ಇನ್ನೊಂದು ಮಗುವಿಗೂ ಹೋಲಿಕೆ ಬೇಡ. ಕೆಲವು ಪುಷ್ಪಗಳು ಸುವಾಸನೆ ಬೀರಿದರೆ ಇನ್ನು ಕೆಲ ಪುಷ್ಪಗಳು ಮಕರಂದ ನೀಡುತ್ತವೆ.
ಇನ್ನು ಕೆಲವು ಹೂವುಗಳು ತಮ್ಮ ಸೌಂದರ್ಯದಿಂದ ಮಂತ್ರಮುಗ್ಧಗೊಳಿಸುತ್ತವೆ ಎಂದರು. ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು. ಕೆಲವು ಮಕ್ಕಳು ಸ್ವರಚಿತ ಕವನ ವಾಚನ ಮಾಡಿದರೆ, ಕೆಲವು ಮಕ್ಕಳು ವಿವಿಧ ವಿಷಯಗಳ ಕುರಿತು ಭಾಷಣ ಮಾಡಿದರು. ಗಂಗಾಧರ ನಂದಿ ಮಕ್ಕಳ ಗೋಷ್ಠಿಗೆ ಚಾಲನೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ, ಪ್ರೊ| ಕೆ.ಎಸ್. ಕೌಜಲಗಿ, ಶರಣಪ್ಪ ಕೊಟಗಿ, ಸಮಾವೇಶದ ಸರ್ವಾಧ್ಯಕ್ಷ ಡಾ| ಸಂಗಮೇಶ ಹಂಡಗಿ, ಪ್ರಭಾ ವಡ್ಡಿನ, ಲಿಂಗರಾಜ ರಾಮಾಪುರ ಇದ್ದರು. ಮಕ್ಕಳಿಗೆ ವ್ಯಾಪಾರ-ವಹಿವಾಟು ತಿಳಿಸುವ ಉದ್ದೇಶದಿಂದ ಮಕ್ಕಳ ಸಂತೆ ಆಯೋಜಿಸಲಾಗಿತ್ತು. ಸಂತೆಯಲ್ಲಿ ಮಕ್ಕಳು ಹಣ್ಣು, ತರಕಾರಿ ಮಾರಾಟ ಮಾಡಿದರು.