Advertisement

ಕಾರ್ಯಾಗಾರಗಳಿಂದ ವ್ಯಕ್ತಿತ್ವ ವಿಕಸನ

10:41 PM Sep 17, 2019 | mahesh |

ವ್ಯಕ್ತಿ ಬದುಕನ್ನು ರೂಪಿಸುವುದರಲ್ಲಿ ಶಿಕ್ಷಣಕ್ಕೆ ಪ್ರಮುಖ ಪಾತ್ರವಿದೆ. ವಿದ್ಯಾರ್ಥಿ ಜೀವನದಲ್ಲಿ ನಾವೇನು ಕಲಿಯುತ್ತೇವೆಯೋ ಅದು ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಕಾರಣ ಶಿಕ್ಷಣ ಸಂಸ್ಥೆಗಳು ಅನೇಕ ರೀತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತವೆ. ಕಾರ್ಯಾಗಾರಗಳು ಪಠ್ಯಕ್ಕೆ ಸಂಬಂಧಿಸಿದ್ದಾಗಿರಬಹುದು ಅಥವಾ ಬದುಕನ್ನು ರೂಪಿಸುವ ಬಗೆ ಹೇಗೆ ಎಂಬ ಕುರಿತಾಗಿರಬಹುದು. ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ.

Advertisement

ಶಿಕ್ಷಣ ವ್ಯಕ್ತಿಯೋರ್ವನ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ ಕೇವಲ ಪದವಿ, ರ್‍ಯಾಂಕ್‌ ಸಾಕಾಗುವುದಿಲ್ಲ. ಅಂಕಗಳೊಂದಿಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪುಸ್ತಕಗಳಲ್ಲಿ ಇರುವ ಮಾಹಿತಿಯಿಂದ ಶಾಲಾ ಕಾಲೇಜುಗಳ ಪರೀಕ್ಷೆಗಳನ್ನು ಎದುರಿಸಬಹುದು. ಆದರೆ ಸಾಮಾನ್ಯ ಜ್ಞಾನವಿದ್ದರೆ ಎಲ್ಲ ವಿಧದ ಪರೀಕ್ಷೆಗಳನ್ನು ಎದುರಿಸಬಹುದು.

ಶಿಕ್ಷಣದೊಂದಿಗೆ ಅತ್ಯುತ್ತಮ ಸಾಧನೆಯೊಂದಿಗೆ ಆತ್ಮವಿಶ್ವಾಸವಿದ್ದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಶೈಕ್ಷಣಿಕ ಕಾಲಘಟ್ಟದಲ್ಲಿ ಪಠ್ಯದ ಜತೆಗೆ ಇನ್ನಿತರ ಚಟುವಟಿಕೆಗಳಲ್ಲಿ ನಮ್ಮನ್ನು ಹೆಚ್ಚು ಸಕ್ರಿಯರಾಗಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿದ್ದಲ್ಲಿ ವಿದ್ಯಾರ್ಥಿಗಳು ಕ್ರಿಯಾತ್ಮಕ ಯೋಚನೆಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳ ಜ್ಞಾನ ಹಾಗೂ ಬೌದ್ಧಿಕಮಟ್ಟ ವೃದ್ಧಿಸಲು ಶಿಕ್ಷಣ ಸಂಸ್ಥೆಗಳು ನಡೆಸುವ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳು ಹೆಚ್ಚು ಸಹಕಾರಿಯಾಗಲಿದೆ. ಅಂತಹ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸವಾಗುತ್ತದೆ.

ಕೌಶಲಾಭಿವೃದ್ಧಿಗೆ ಸಹಕಾರಿ
ವಿದ್ಯಾರ್ಥಿಗಳಿದ್ದಾಗ ಪುಸ್ತಕ, ಅಂಕ, ಪರೀಕ್ಷೆಗಳ ಕಡೆಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆ ಅವಧಿಯಲ್ಲಿ ಪುಸ್ತಕ ಹೊರತುಪಡಿಸಿದ ಮಾಹಿತಿಯನ್ನು ಪಡೆದುಕೊಳ್ಳುವ ಬಗ್ಗೆ ಚಿಂತಿಸುವುದಿಲ್ಲ. ಇದರಿಂದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವಲ್ಲಿ ಎಡವುತ್ತೇವೆ. ಹಾಗಾಗಿ ಶಿಕ್ಷಣ ಸಂಸ್ಥೆ ಅಥವಾ ಇನ್ಯಾವುದೇ ಸಂಸ್ಥೆಗಳು ಆಯೋಜಿಸುವ ವಿವಿಧ ಬಗೆಯ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಕಾರ್ಯಾಗಾರಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಆಯೋಜಿಸಲಾಗಿರುತ್ತದೆ. ಅವರಿಗೆ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಹೆಚ್ಚು ಮಾಹಿತಿ ಇರುತ್ತದೆ. ಅವರು ಆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಸುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದು ವಿದ್ಯಾರ್ಥಿಗಳ ಆದ್ಯತೆಗಳಲ್ಲೊಂದಾಗಿರುತ್ತದೆ.

ಕಾರ್ಯಾಗಾರಗಳ ವಿಷಯಕ್ಕೆ ಆದ್ಯತೆ ನೀಡಿ
ಕಾರ್ಯಾಗಾರ ಎಂದಾಗ ಹಲವಾರು ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ.ಆ ಸಂದರ್ಭದಲ್ಲಿ ನಮಗೆ ಅವಶ್ಯವಿರುವ ವಿಷಯಗಳ ಕಾರ್ಯಾಗಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಕಾನೂನು ಕಲಿಯುವ ವಿದ್ಯಾರ್ಥಿಗಳು ಕಾನೂನು ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದ ಆಯೋಜಿಸಲಾಗುವ ಕಾರ್ಯಾಗಾರದಲ್ಲಿ ಭಾಗವಹಿಸಬೇಕಾಗುತ್ತದೆ. ನಮಗೆ ಅವಶ್ಯವಿರುವ ವಿಷಯಗಳ ಬಗೆಗಿನ ಕಾರ್ಯಾಗಾರಗಳಿಗೆ ಮಾತ್ರ ಹೆಚ್ಚು ಗಮನ ನೀಡಬೇಕಾಗುತ್ತದೆ.

Advertisement

ವಿವಿಧ ಕಾರ್ಯಾಗಾರಗಳಿಂದ ಜ್ಞಾನಾಭಿವೃದ್ಧಿ
ವೇಗವಾಗಿ ಬೆಳೆಯುತ್ತಿರುವ ಜೌದ್ಯೋಗಿಕ ರಂಗದಲ್ಲಿ ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳಾಗುತ್ತಿರುತ್ತವೆ. ಅದಕ್ಕಾಗಿ ನಮ್ಮ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿ ದೆಸೆಯಿಂದಲೇ ಚಿಂತನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ವಿವಿಧ ಕಾರ್ಯಾಗಾರಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ ಮಾಡುವುದರಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾವಸ್ಥೆಯಲ್ಲಿ ಆಯಾಯ ಪಠ್ಯಕ್ಕೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗತ್ತದೆ. ಇದು ಅವರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕಾಲೇಜು ಹಂತಗಳಲ್ಲಿ ವಿವಿಧ ಬಗೆಯ ಕಾರ್ಯಾಗಾರಗಳನನ್ನು ಆಯೋಜಿಸಲಾಗುತ್ತದೆ. ಇದು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ ಗೆ ಹಾಗೂ ಭವಿಷ್ಯದ ದೃಷ್ಟಿಯಿಂದ ಸಹಕಾರಿಯಾಗುತ್ತದೆ. ಕಾರ್ಯಾಗಾರಗಳನ್ನು ಕಾಲೇಜು ಮಟ್ಟ, ಜಿಲ್ಲಾಮಟ್ಟ, ರಾಜ್ಯ, ರಾಷ್ಟ್ರಮಟ್ಟ ಎಂಬುದಾಗಿ ವಿಂಗಡಿಸಲಾಗಿರುತ್ತದೆ. ಅದರಲ್ಲಿ ಭಾಗವಹಿಸುವುದರಿಂದ ಅರ್ಹ ಸಂಪನ್ಮೂಲ ವ್ಯಕ್ತಿಗಳಿಂದ ಆವಶ್ಯಕ ಮಾಹಿತಿಗಳು ಲಭಿಸುತ್ತವೆ. ಅದು ನಮ್ಮ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗುತ್ತದೆ.

ವಿವಿಧ ಕಾರ್ಯಾಗಾರಗಳು
ಕಾಲೇಜಿನ ವಿವಿಧ ಕ್ಲಬ್‌ಗಳ ವತಿಯಿಂದ ಅದಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಒಂದು ವಿಷಯದ ಕುರಿತಾದ ಜ್ಞಾನ ನೀಡುತ್ತದೆ. ಅದರೊಂದಿಗೆ ವಿದ್ಯಾರ್ಥಿಗಳನ್ನು ರಚನಾತ್ಮಕ ಕಾರ್ಯಗಳಲ್ಲಿ ಪ್ರೇರೇಪಿಸುತ್ತದೆ. ದ್ವಿತೀಯ ಪಿಯುಸಿ ಬಳಿಕ ಮುಂದೇನು? ಎಂಬ ಕಾರ್ಯಾಗಾರವನ್ನು ಶೈಕ್ಷಣಿಕ ಸಂಸ್ಥೆಗಳು ಅಥವಾ ಇನ್ನಿತರ ಸಂಸ್ಥೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತದೆ. ಅಂತೆಯೇ ಕಾನೂನು ಕಾರ್ಯಾಗಾರ, ವೃತ್ತಿಪರ ಕಾರ್ಯಾಗಾರ, ಚಿತ್ರಕಲಾ ಕಾರ್ಯಾಗಾರ, ಕಂಪ್ಯೂಟರ್‌ ಮಾಹಿತಿ ಕಾರ್ಯಾಗಾರ ಸೇರಿದಂತೆ ಹಲವಾರು ಕಾರ್ಯಾಗಾರಗಳ ಆಯೋಜನೆಯಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳು ತಮಗೆ ಅವಶ್ಯವಿರುವ ಮಾಹಿತಿಯನ್ನು ಪಡೆದುಕೊಂಡು ತಮ್ಮ ಯೋಚನೆಗಳನ್ನು ಕ್ರಿಯಾತ್ಮಕವಾಗಿ ಬದಲಾಯಿಸಿಕೊಳ್ಳಬಹುದು.

 ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next