Advertisement

ಆಲೋಚನೆಯಂತೆ ವ್ಯಕ್ತಿತ್ವ

12:19 AM Nov 18, 2019 | Sriram |

“ಯದ್ಭಾವಂ ತದ್ಭವತಿ’ ಎನ್ನುವಂತೆ ನಾವು ಯಾವಾಗಲೂ ಏನನ್ನು ಆಲೋಚಿಸುತ್ತಿರುತ್ತೇವೆಯೋ, ಹಾಗೆ ನಮ್ಮ ವ್ಯಕ್ತಿತ್ವವು ಕೂಡ ರೂಪುಗೊಳ್ಳುತ್ತದೆ. “ಈ ಪ್ರಪಂಚದಲ್ಲಿ ನಮ್ಮ ಕಣ್ಣಿಗೆ ಬೀಳುವ ಎಲ್ಲ ಕರ್ಮಗಳೂ, ಮಾನವ ಸಮಾಜದಲ್ಲಿ ಆಗುವ ಸಮಸ್ತ ಆಲೋಚನೆಗಳೂ, ನಮ್ಮ ಸುತ್ತಲೂ ನಡೆಯುವ ಕಾರ್ಯಗಳೂ ಕೂಡ ಆಲೋಚನೆಗಳ ಪ್ರದರ್ಶನ. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀವೋ ಅದರ ಬಗ್ಗೆ ಎಚ್ಚರದಿಂದಿರಿ’ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ನಾವು ಮಾಡುವ ಆಲೋಚನೆಗಳಿಂದ ನಮ್ಮ ಕರ್ಮವು ಪ್ರೇರೇಪಿತವಾಗಿರುತ್ತದೆ. ನಾವು ಮಾಡುವ ಕರ್ಮಗಳಿಂದ ಸಂಸ್ಕಾರ ಉಂಟಾಗುತ್ತದೆ. ಅದರಿಂದ ಚಾರಿತ್ರ್ಯವೂ ರೂಪುಗೊಳ್ಳುತ್ತದೆ. ಅದನ್ನೇ ನಾವು ವ್ಯಕ್ತಿತ್ವವೆಂದು ಕರೆಯುತ್ತೇವೆ. ನಮ್ಮ ಯಶಸ್ಸು, ಕೀರ್ತಿ-ಅಪಕೀರ್ತಿಗಳು ನಮ್ಮ ವ್ಯಕ್ತಿತ್ವದ ಮೇಲೆ ನಿರ್ಧಾರವಾಗಿರುತ್ತವೆ. ಆದ್ದರಿಂದ ಆಲೋಚನೆ, ಚಿಂತನೆಗಳಿಗೆ ತಕ್ಕಂತೆ ನಾವು ಕೆಲಸ-ಕಾರ್ಯಗಳನ್ನು ಮಾಡಲು, ವ್ಯವಹರಿಸಲು ಪ್ರಾರಂಭಿಸುತ್ತೇವೆ.

Advertisement

ಅನುಕೂಲ ಪರಿಸ್ಥಿತಿ ಉಂಟಾದಾಗ ಅಥವಾ ನಾವು ಸುಮ್ಮನೆ ಕುಳಿತಾಗ ನಮಗರಿವಿಲ್ಲದೆಯೇ ನಮ್ಮ ಆಲೋಚನೆಯು ಮನಸ್ಸಿನಲ್ಲಿ ಮೂಡುತ್ತದೆ. ಅದು ಒಳ್ಳೆಯ ಆಲೋಚನೆ ಅಥವಾ ಕೆಟ್ಟ ಆಲೋಚನೆಯಾಗಿರಬಹುದು. ಉದಾಹರಣೆಗೆ ರಾಮ ರಾವಣರು. ರಾವಣನು ಮಹಾಭಕ್ತ, ವೀರ, ಶೂರನಾಗಿದ್ದರೂ ಅವನು ಮಾಡಿದ ತಪ್ಪು ಆಲೋಚನೆಗಳಿಂದ ಅವನ ಕರ್ಮ, ಸಂಸ್ಕಾರ, ಚಾರಿತ್ರ್ಯವು ದುಷ್ಟತನದಿಂದ ಕೂಡಿಕೊಂಡಿತ್ತು. ಅವನ ತಪ್ಪು ಕೆಲಸಗಳು ಅವನಿಗೆ ಅಪಕೀರ್ತಿಯನ್ನು ತಂದಿತು. ಕುಲವನ್ನು, ಸ್ವಜನರನ್ನೂ ನಾಶಪಡಿಸಿತು. ಆದರೆ ಶ್ರೀರಾಮಚಂದ್ರನು ಮಾಡಿದ ಒಳ್ಳೆಯ ಆಲೋಚನೆಗಳಿಂದ ಅವನ ಚಿಂತನೆ, ಸಂಸ್ಕಾರ, ಚಾರಿತ್ರ್ಯ ಮತ್ತು ವ್ಯಕ್ತಿತ್ವವು ರತ್ನದಂತೆ ಶೋಭಿಸಿತು. ಅವನ ಕುಲ, ದೇಶಕ್ಕೆ ಮೆರಗನ್ನು, ಕೀರ್ತಿಯನ್ನು ತಂದಿತು. ಆದ್ದರಿಂದ ನಾವು ಸದಾ ಒಳ್ಳೆಯ ಚಿಂತನೆಗಳನ್ನು ಮಾಡಬೇಕು. ಅದರಿಂದ ನಮಗೂ ಒಳಿತು, ಸಮಾಜಕ್ಕೂ ಒಳಿತು.

ನಮ್ಮ ಮೊಬೈಲ್‌ಗೆ ಹಾಳಾಗಬಾರದೆಂದು ಸ್ಕ್ರೀನ್‌ಗಾರ್ಡ್‌ನ್ನು ಹಾಕಿ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ. ಆದರೆ ದುರದೃಷ್ಟವೆಂದರೆ ನಮ್ಮ ಜೀವನವನ್ನು, ವ್ಯಕ್ತಿತ್ವವನ್ನು ರೂಪಿಸುವ ಆಲೋಚನೆಗಳ, ಚಿಂತನೆಗಳ ಕುರಿತು ನಾವು ಎಚ್ಚರದಿಂದಿಲ್ಲ. ಎಲ್ಲ ರೀತಿಯ ಅನುಪಯೋಗಿ ವಸ್ತುಗಳನ್ನು ಎಸೆಯುವ ಹಾಗೆ, ಅಜಾಗರೂಕತೆಯಿಂದ ನಮ್ಮ ಮನಸ್ಸಿಗೆ ಬೇಕಾದ, ಬೇಡವಾದ ಆಲೋಚನೆಗಳನ್ನು ತುಂಬಿ, ಮನಸ್ಸನ್ನು ಕಸದಬುಟ್ಟಿಯನ್ನಾಗಿ ಮಾಡಿಕೊಳ್ಳುತ್ತಿದ್ದೇವೆ. ಪ್ರತಿಫ‌ಲವಾಗಿ ಮಾನಸಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಕಾಯಿಲೆಗಳಿಂದ ಮನುಕುಲವು ನರಳುತ್ತಿದೆ. ಆಲೋಚನೆಯ ಮಹತ್ವವನ್ನು ತಿಳಿಯಲು ಇತಿಹಾಸದ ಪುಟಗಳೇ ಜ್ವಲಂತ ಸಾಕ್ಷಿ. ಒಂದು ನಿರ್ದಿಷ್ಟ ಆಲೋಚನೆ, ಮಾನವನನ್ನು, ಮನುಕುಲವನ್ನು ಹಾಗೂ ನಾಗರಿಕತೆಯನ್ನು ಮುನ್ನಡೆಸುತ್ತದೆ.

ಐನ್‌ಸ್ಟಿàನ್‌ನ ಉದಾತ್ತ ಚಿಂತನೆ
ನಮ್ಮ ದೇಹಕ್ಕೆ ಏನಾದರೂ ಆದರೆ ಅಳುತ್ತೇವೆ. ದೇಹ ಸುಖ,ಇಂದ್ರಿಯ ಸುಖಕ್ಕೆ ಬೆಲೆ ಕೊಡುತ್ತೇವೆ. ಅದಕ್ಕಿಂತಲೂ ಹೆಚ್ಚಿನ ಸಂತೋಷವನ್ನು ಪಡೆಯಲಾಗುವುದಿಲ್ಲ. ನಾವು ಮನಸ್ಸು, ಬುದ್ಧಿ ಎಂದು ಆಲೋಚಿಸಿದಾಗ, ಭಾವನೆಗಳಿಗೆ, ನೂತನ ಆವಿಷ್ಕಾರಗಳಿಗೆ, ಸಾಧನೆಗೆ ಬೆಲೆ ಕೊಡುತ್ತೇವೆ. ಉದಾ: ಆಲ್ಬರ್ಟ್‌ ಐನ್‌ಸ್ಟಿàನ್‌ ಒಮ್ಮೆ ದೊಡ್ಡ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಅವರ ಪತ್ನಿ ಐನ್‌ಸ್ಟಿàನ್‌ಗೆ, “ಏನು ಈ ಬಟ್ಟೆಯನ್ನು ಹಾಕಿಕೊಂಡು ಹೋಗುತ್ತಿದ್ದೀರಾ?! ಆ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಬರುತ್ತಿದ್ದಾರೆ’ ಎಂದಳು. ಐನ್‌ಸ್ಟಿàನ್‌, “ಏಕೆ ಈ ಬಟ್ಟೆಗೆ ಏನಾಗಿದೆ? ಅದೇನು ಹರಿದುಹೋಗಿಲ್ಲ, ಕೊಳೆಯೂ ಆಗಿಲ್ಲ. ಸ್ವಲ್ಪ ಹಳೆಯದು ಅಷ್ಟೇ. ನಾನೇನು ವೇಷಭೂಷಣ ಸ್ಪರ್ಧೆಗೆ ಹೋಗುತ್ತಿದ್ದೇನೆಯೇ? ನನ್ನ ಮಾತುಗಳನ್ನು ಕೇಳಲು ಜನರು ಬರುತ್ತಿದ್ದಾರೆ ಹೊರತು, ನನ್ನ ಬಟ್ಟೆಯನ್ನು ನೋಡಲು ಅಲ್ಲ,’ ಎಂದರು ಐನ್‌ಸ್ಟಿàನ್‌. ಅವರು ಇಂದ್ರಿಯ ಲೋಲು ಪತೆಗೆ ಬೆಲೆ ಕೊಡಲಿಲ್ಲ. ಏಕೆಂದರೆ ಅವರ ಮನಸ್ಸು, ಉನ್ನತವಾದ ಆಲೋಚನೆಗಳಲ್ಲಿ ನೆಲೆಸಿತ್ತು.

ಇನ್ನು ಯತಿಗಳು ಆತ್ಮ ಎಂಬ ಸತ್ಯವನ್ನು ಅರಿಯಲು ಪ್ರಯತ್ನಿಸುತ್ತಾರೆ. ಅವರ ಅರಿವು ಉನ್ನತ ಮಟ್ಟದಲ್ಲಿ ನೆಲಿಸಿರುವುದರಿಂದ ಜೀವನ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಒಮ್ಮೆ ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಹಿಮಾಲಯದಲ್ಲಿ ಓಡಾಡುತ್ತಿದ್ದರು. 2-3 ದಿವಸಗಳಿಂದ ಆಹಾರವಿಲ್ಲದೆ ಬಳಲಿದ್ದರು. ಹೀಗಿರುವಾಗ ಹುಲಿಯೊಂದು ತುಸು ದೂರದಲ್ಲಿ ಕಾಣಿಸಿಕೊಂಡಿತು. ಈಗ ಹೇಳಿ ಸಾಮಾನ್ಯರು ಇದ್ದಿದ್ದರೆ, ಭಯದಿಂದ ಕೂಗಿಕೊಳ್ಳುತ್ತಾ, ಓಡುತ್ತಿದ್ದರು. ಆದರೆ ಸ್ವಾಮೀಜಿ, “ಬಾ ಹುಲಿ. ನಾನು ಊಟವಿಲ್ಲದೆ ಹಸಿದಿದ್ದೇನೆ. ನೀನೂ ಹಸಿದಿರುವೆ. ಬಾ ನನ್ನ ಈ ದೇಹವನ್ನು ಸ್ವೀಕರಿಸು. ನಿನ್ನ ಹಸಿವಾದರೂ ನೀಗಲಿ’ ಎಂದು ಧ್ಯಾನಕ್ಕೆ ಕುಳಿತುಬಿಟ್ಟರು. ಈಗ ಹೇಳಿ ಇಂಥ ವರ್ತನೆ ಯಾರಿಂದ ಸಾಧ್ಯ. ಯಾರು ತಾನು ಆತ್ಮ ಎಂದು ಆಲೋಚಿಸುವವರಿಗೆ ಮಾತ್ರ ಇದು ಸಾಧ್ಯ.

Advertisement

ಕೈಗಾರಿಕೆ ಕ್ರಾಂತಿಯಿಂದ, ವಿಜ್ಞಾನ ಹಾಗೂ ತಂತ್ರಜ್ಞಾನದ ನೆರವಿನಿಂದ ಪಾಶ್ಚಾತ್ಯರು ಅನೇಕ ಆವಿಷ್ಕಾರಗಳನ್ನು ಮಾಡಿದರು. ಆ ಸಮಯದಲ್ಲಿ ವಿಜ್ಞಾನ-ತಂತ್ರಜ್ಞಾನಗಳಿಂದ ತಾನು ಏನನ್ನಾದರೂ ಸಾಧಿಸಬಲ್ಲ ಎಂಬ ಒಣ ಅಹಂ ಮನುಷ್ಯನಲ್ಲಿ ಬಂದಿತು. ದೇವರು, ಧರ್ಮ ಏಕೆ? ಎಂದ ದೇವರನ್ನೇ ತೊರೆದರು. ಆದರೆ ಅದೇ ಸಮಯದಲ್ಲಿ ವಿಶ್ವವೇ ಬೆಚ್ಚಿಸುವಂತೆ ಎರಡು ಮಹಾಯುದ್ಧಗಳು ನಡೆದವು. ಆಗ ಅವನ ಆಲೋಚನೆ, ನಂಬಿಕೆ, ಭಾವನೆಗಳು ಬದಲಾದವು. ಧರ್ಮ-ಆಧ್ಯಾತ್ಮದತ್ತ ಪ್ರಸಿದ್ಧ ವಿಜ್ಞಾನಿಗಳೂ ವಾಲಿದರು. ಹೀಗೆ ಆಲೋಚನೆಗಳು ದೇಶಗಳನ್ನು, ನಾಗರೀಕತೆಗಳನ್ನು ರೂಪಿಸುತ್ತವೆ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು,”ನಾಗರೀಕತೆಯು ನಮ್ಮ ಮನಸ್ಸಿನ ಅಭಿವ್ಯಕ್ತಿ’ ಎನ್ನುತ್ತಾರೆ. ಅಂದರೆ ನಮ್ಮ ಆಲೋಚನೆಗಳೇ ಅದಕ್ಕೆ ಮೂಲ ಕಾರಣ ಎಂದು. ಆದ್ದರಿಂದ ಮನಸ್ಸಿನಂತೆ ಮಹಾದೇವ, ಬಿತ್ತಿದಂತೆ ಬೆಳೆ ಸುಳ್ಳಲ್ಲ ಎಂದು ಹಿರಿಯರು ಹೇಳಿರುವುದು..

-  ಸ್ವಾಮಿ ಶಾಂತಿವ್ರತಾನಂದ,
ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next