ಕೊಪ್ಪಳ: ಮಹಾಮಾರಿ ಕೋವಿಡ್ 19 ವೈರಸ್ ಭೀತಿಯಿಂದ ದೇಶವೇ ಲಾಕ್‌ಡೌನ್ ಆಗಿದ್ದು, ಜನತೆಗೆ ದುಡಿಮೆ ಇಲ್ಲದಂತಾಗಿದೆ. ಇದರ ಮಧ್ಯೆಯೂ ಕೊಪ್ಪಳ ಜಿಪಂ ನರೇಗಾದಡಿ ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ವೈಯಕ್ತಿಕ ಕಾಮಗಾರಿ ನೀಡಲು ಮುಂದಾಗಿದೆ.
ಇಲ್ಲಿವರೆಗೂ 33,734 ಮಾನವ ದಿನಗಳ ಸೃಜನೆ ಮಾಡಿ ಕೆಲಸ ನೀಡಲು ಆರಂಭಿಸಿದೆ. ಕೊಪ್ಪಳ ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶ. ದುಡಿಮೆ ಇಲ್ಲದೆ ಜನತೆ ತುತ್ತಿನಚೀಲ ತುಂಬಿಸಿಕೊಳ್ಳಲು ದೂರದ ಊರುಗಳಿಗೆ ಗುಳೆ ಹೋಗುತ್ತಿದ್ದರು. ಆದರೆ ಗುಳೆ ಹೋಗಿದ್ದ 22 ಸಾವಿರ ಜನ ಕೋವಿಡ್ 19 ವೈರಸ್ ಭೀತಿಯಿಂದ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಈಗ ಜನತೆ ದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಇದನ್ನರಿತು ನರೇಗಾದಡಿ ಕೂಲಿಕಾರ್ಮಿಕರಿಗೆ ಕೆಲಸ ಕೊಡಲಾಗುತ್ತಿದೆ.
ಮಾನವ ದಿನ ಸೃಜನೆ: ಪ್ರತಿ ವರ್ಷ ಬೇಸಿಗೆ ವೇಳೆ ಜನತೆಗೆ ನರೇಗಾದಡಿ ಹೆಚ್ಚು ಕೆಲಸ ನೀಡಲಾಗುತ್ತಿತ್ತು. ಆದರೆ ಕೋವಿಡ್ 19 ದಿಂದ ಆರಂಭಿಕ ದಿನದಲ್ಲಿ ಕೆಲವೆಲ್ಲ ಸ್ಥಗಿತಗೊಂಡಿದ್ದವು. ಜನತೆ ಪರಿತಪಿಸುತ್ತಿರುವುದನ್ನು ಅರಿತು ಸರ್ಕಾರವು ಕೆಲವು ಮಾರ್ಗಸೂಚಿ ಅನ್ವಯ ಕೆಲಸ ನೀಡಲು ಮುಂದಾಗಿದೆ. ಕೊಪ್ಪಳ ಜಿಪಂ ಈ ವರೆಗೂ 33,734 ಮಾನವ ದಿನ ಸೃಜನೆ ಮಾಡಿ ಕೆಲಸ ನೀಡಲಾರಂಭಿಸಿದೆ.
ವೈಯಕ್ತಿಕ ಕಾಮಗಾರಿಗೆ ಆದ್ಯತೆ: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬ ಅವಶ್ಯವಾಗಿದೆ. ರೈತನು ಮನೆಯಲ್ಲಿ ಕುರಿ ದೊಡ್ಡಿ ನಿರ್ಮಾಣ, ದನದ ದೊಡ್ಡಿ ನಿರ್ಮಾಣ ಮಾಡಿಕೊಳ್ಳುವುದು. ಮನೆಯ ಬುನಾದಿ ತೆಗೆಯುವ ಕಾಮಗಾರಿ, ಇನ್ನೂ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣದಂತಹ ಕೆಲಸ ನೀಡಲಾಗುತ್ತಿದೆ. ಮನೆಯಲ್ಲಿನ 3-4 ಸದಸ್ಯರೇ ಈ ಕಾಮಗಾರಿಯನ್ನು ನಿರ್ವಹಿಸಲು ಸಾಧ್ಯವಾಗಲಿದೆ. ಇನ್ನೂ 1,284 ಮುಂದುವರಿದ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆ. ಬಹುಪಾಲು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಮಾಡಿಕೊಳ್ಳುವ ಕುಟುಂಬಕ್ಕೆ ಬುನಾದಿ ಸೇರಿ ಇತರೆ ಕೆಲಸ ನಿರ್ಮಾಣಕ್ಕೆ ನರೇಗಾದಡಿ ಕೆಲಸ ನೀಡಲಾಗುತ್ತಿದೆ. ಅವು ಮುಂದುವರಿದ ಕಾಮಗಾರಿಗಳಾಗಿವೆ.
ಸಮುದಾಯಿಕ ಕೆಲಸ ಸ್ಥಗಿತ: ಕೋವಿಡ್ 19 ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದೆ. ಲಾಕ್‌ಡೌನ್ ಘೋಷಣೆ ಮಾಡಿ ಮನೆಯಲ್ಲೇ ಇರಬೇಕು ಎಂಬ ಕಟ್ಟಾಜ್ಞೆ ಮಾಡಿದೆ. ಹಾಗಾಗಿ ಸಾಮುದಾಯಿಕವಾಗಿ ಕೆಲಸ ನೀಡಿದರೆ ತೊಂದರೆ ಎದುರಾಗಲಿದೆ ಎನ್ನುವುದನ್ನು ಅರಿತು ಜಿಲ್ಲಾ ಪಂಚಾಯತ್ ಗುಂಪು ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಕೆರೆಗಳ ಹೂಳೆತ್ತುವುದು. ಚೆಕ್‌ಡ್ಯಾಂ ಹೂಳೆತ್ತುವುದು, ಬದುಗಳ ಸಮತಟ್ಟು ಮಾಡುವಂತ ಕಾಮಗಾರಿಗಳು ಬಂದ್ ಮಾಡಲಾಗಿದೆ.
ಜನತೆ ಗುಂಪು ಸೇರದಂತ ಕಾಮಗಾರಿಗಳನ್ನೇ ನೀಡಲು ಜಿಪಂ ಯೋಜನೆ ರೂಪಿಸುತ್ತಿದೆ. ಅಲ್ಲದೇ ಕೈಲಸದ ಸ್ಥಳಗಳಲ್ಲೂ ಕೋವಿಡ್ 19 ಜಾಗೃತಿ ಮೂಡಿಸುತ್ತಿದೆ. ಒಟ್ಟಿನಲ್ಲಿ ಕೋವಿಡ್ 19 ಅಬ್ಬರದಿಂದ ಜನತೆಗೆ ದುಡಿಮೆ ಇಲ್ಲದಂತಾಗಿದೆ. ಇದ್ದರೂ ಅಲ್ಪಸ್ವಲ್ಪ ದುಡಿಮೆ ಮಾಡಿಕೊಳ್ಳಬೇಕಿದೆ.
ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸದ್ಯಕ್ಕೆ ಕೋವಿಡ್ 19 ವೈರಸ್ ನಿಯಂತ್ರಣಕ್ಕಾಗಿ ಸಾಮುದಾಯಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಹೊಲದ ಬದು ನಿರ್ಮಾಣದಂತಹ ಕಾಮಗಾರಿ ಮಾಡಿಕೊಳ್ಳಬಹುದು. ಇಲ್ಲಿವರೆಗೂ 33 ಸಾವಿರ ಮಾನವ ದಿನಗಳ ಸೃಜನೆ ಮಾಡಿದ್ದೇವೆ. ಕೆಲವೊಂದು ಮುಂದುವರಿದ ಕಾಮಗಾರಿಗಳು ನಡೆಯುತ್ತಿವೆ. –
ರಘುನಂದನ್ ಮೂರ್ತಿ, ಜಿಪಂ ಸಿಇಒ, ಕೊಪ್ಪಳ
-ದತ್ತು ಕಮ್ಮಾರ