Advertisement

ಕೋವಿಡ್ ತಡೆಗೆ ಕಾನೂನಿಗಿಂತ ವೈಯಕ್ತಿಕ ಸಂಯಮ ಮುಖ್ಯ

12:04 AM Apr 19, 2021 | Team Udayavani |

ಕೊರೊನಾ ಎರಡನೆಯ ಅಲೆ ವ್ಯಾಪಕವಾಗಿ ವಿಸ್ತರಣೆಯಾಗುತ್ತಿದ್ದು ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಕಳೆದೆರಡು ವಾರಗಳಿಂದ ಸೋಂಕು ಪೀಡಿತರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಲೇ ಸಾಗಿದ್ದು ಶನಿವಾರ ಒಂದೇ ದಿನ ದೇಶಾದ್ಯಂತ 2,61,500 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೋವಿಡ್‌ ಪೀಡಿತರ ಸಂಖ್ಯೆ 1,47, 88,109ಕ್ಕೆ ಏರಿದೆ. ಈ ಪೈಕಿ 18 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಸೇರಿವೆ. ಇದೇ ಶನಿವಾರದಂದು ಕೋವಿಡ್‌ನಿಂದಾಗಿ 1,501ಮಂದಿ ಸಾವನ್ನಪ್ಪಿದ್ದು ಕೋವಿಡ್‌ನಿಂದಾಗಿ ದೇಶದಲ್ಲಿ ಸಾವಿಗೀಡಾದವರ ಸಂಖ್ಯೆ 1,77,150ಕ್ಕೆ ಏರಿದೆ.

Advertisement

ಸತತ 39 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದೆ. ಇದಲ್ಲದೆ ಕಳೆದ 12 ದಿನಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ದುಪ್ಪಟ್ಟಾಗಿದ್ದು ಶೇ. 16.69ಕ್ಕೆ ತಲುಪಿದೆ.

ಒಂದೆಡೆಯಿಂದ ಕೊರೊನಾ ಸೋಂಕು ಹರಡುವಿಕೆಯ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಸಿಕೆ ನೀಡಿಕೆ ಪ್ರಕ್ರಿಯೆ ಭರದಿಂದ ಸಾಗಿದೆ. ವಿಶ್ವದಲ್ಲಿಯೇ ಅತ್ಯಂತ ಕ್ಷಿಪ್ರಗತಿಯಲ್ಲಿ ಲಸಿಕೆ ನೀಡಿಕೆ ಪ್ರಕಿಯೆ ಚಾಲ್ತಿಯಲ್ಲಿದೆ. ಮಾನವ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆತ ಕೊರೊನಾ ಸೋಂಕಿಗೆ ಒಳಗಾಗದಂತೆ ತಡೆಯುವ ನಿಟ್ಟಿನಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ. ಇದರ ನಡುವೆಯೇ ಕೋವಿಡ್‌ ಎರಡನೇ ಅಲೆ ವ್ಯಾಪಿಸುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕಿನ ಹರಡುವಿಕೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಂಬಂಧಿತ ರಾಜ್ಯಗಳಿಗೆ ಕೆಲವೊಂದು ಕಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸಲು ನಿರ್ದೇಶ ನೀಡಿದೆ. ಅದರಂತೆ ರಾಜ್ಯ ಸರಕಾರ ಈಗಾಗಲೇ ಕೆಲವೊಂದು ಕಠಿನ ಕ್ರಮಗಳನ್ನು ಜಾರಿಗೆ ತಂದಿದೆ. ಇದರ ಹೊರತಾಗಿಯೂ ರಾಜಧಾನಿ ಬೆಂಗಳೂರು ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗುತ್ತಿರುವುದ ರಿಂದ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಸರಕಾರ ಮುಂದಾಗಿದೆ.
ಎಲ್ಲ ಧಾರ್ಮಿಕ ಚಟುವಟಿಕೆಗಳು, ಸಾರ್ವಜನಿಕ ಸಭೆ, ಸಮಾರಂಭಗಳನ್ನು ರದ್ದುಗೊಳಿಸಲಾಗಿದ್ದರೆ ವಿವಾಹದಂತಹ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತಗಳಿಂದ ಪೂರ್ವಾನುಮತಿಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಅಷ್ಟು ಮಾತ್ರವಲ್ಲದೆ ಈಗಾಗಲೇ ಅನುಮತಿ ಪಡೆದು ನಿಗದಿಯಾಗಿರುವ ವಿವಾಹ ಮತ್ತಿತರ ಕಾರ್ಯಕ್ರಮಗಳನ್ನು ಅತ್ಯಂತ ಸರಳವಾಗಿ ಆಚರಿಸುವಂತೆ ಸರಕಾರ ಜನರಿಗೆ ಸಲಹೆ ನೀಡಿದೆ. ಆದರೆ ಇದೇ ವೇಳೆ ರಾಜಕೀಯ ಸಭೆ, ಸಮಾವೇಶಗಳಿಗೂ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿರುವ ಪ್ರದೇಶ ಗಳನ್ನು ಕಂಟೈನ್ಮೆಂಟ್‌ ವಲಯಗಳೆಂದು ಘೋಷಿಸುವುದರಿಂದ ಸಾಮುದಾಯಿಕ‌ವಾಗಿ ಸೋಂಕು ನಿರ್ವಹಣೆ ಸಾಧ್ಯ.

ಕಾನೂನುಗಳು ಎಷ್ಟೇ ಇದ್ದರೂ ನಾಗರಿಕರು ಇವುಗಳನ್ನು ಸ್ವಯಂ ಇಚ್ಛೆಯಿಂದ ಪಾಲಿಸದಿದ್ದರೆ ಈ ಕಾನೂನುಗಳ 100 ಪ್ರತಿಶತ ಜಾರಿ ಕಷ್ಟಸಾಧ್ಯ. ಎಷ್ಟೋ ನಾಗರಿಕರು ಸ್ವಯಂಪ್ರೇರಿತರಾಗಿ ತಾವೇ ಮನೆಯಿಂದ ಹೊರ ಹೋಗದೆ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಅನಗತ್ಯ ಪ್ರಯಾಣ, ಸಂಚಾರಕ್ಕೆ ಕಡಿವಾಣ ಹಾಕಿಕೊಂಡಿದ್ದಾರೆ. ಎಷ್ಟು ಅಗತ್ಯವೋ ಅಷ್ಟರ ಮಟ್ಟಿಗೆ ವ್ಯವಹಾರ ನಡೆಸಿ ಸುರಕ್ಷಿತವಾಗಿ ಬದುಕುವ ಕಲೆಯನ್ನು ಜನರು ಕರಗತ ಮಾಡಿಕೊಳ್ಳಬೇಕು. ಹೀಗೆ ತಮ್ಮ ತಮ್ಮ ಇತಿಮಿತಿಗಳಲ್ಲಿ ಕೊರೊನಾ ಸೋಂಕನ್ನು ಕಟ್ಟಿ ಹಾಕಲು ಸರ್ವಜನರ ಯೋಗದಾನ ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next