ನವದೆಹಲಿ: ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಮೊದಲ ಆದ್ಯತೆ ನೀಡಬೇಕು. ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಭೆಯಲ್ಲಿ ಮಾತನಾಡಿದ್ದಾರೆ.
ಪ್ರತಿದಿನ 10 ಜಾಮೀನು ಪ್ರಕರಣಗಳು ಮತ್ತು 10 ಪ್ರಕರಣ ವರ್ಗಾವಣೆ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. “ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ 13 ನ್ಯಾಯಪೀಠಗಳು ಇವೆ. ವಾರದ ಐದು ಕೆಲಸದ ದಿನಗಳಲ್ಲಿ ಒಟ್ಟು 650 ಪ್ರಕರಣಗಳ ವಿಚಾರಣೆ ನಡೆಸಬೇಕು. ಸದ್ಯ 3,000ಕ್ಕೂ ಹೆಚ್ಚು ಪ್ರಕರಣ ವರ್ಗವಣೆ ಅರ್ಜಿಗಳು ಬಾಕಿ ಇದ್ದು, ಚಳಿಗಾಲದ ರಜಾವಧಿಗೂ ಮೊದಲು ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿ, ತೀರ್ಪು ನೀಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ,’ ಎಂದು ನೂತನ ಸಿಜೆಐ ಹೇಳಿದರು.
ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆಗೊಳಿಸುವ ಹಕ್ಕನ್ನು ಸುಪ್ರೀಂ ಕೋರ್ಟ್ ಮಾತ್ರ ಹೊಂದಿದೆ. “ನ್ಯಾಯಪೀಠಗಳು ಮೊದಲು 10 ಪ್ರಕರಣ ವರ್ಗಾವಣೆ ಅರ್ಜಿಗಳು ಮತ್ತು ನಂತರ 10 ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ. ಬಳಿಕ ಉಳಿದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ,’ ಎಂದು ಅವರು ತಿಳಿಸಿದರು.