ಶಿವಮೊಗ್ಗ: ವೈಯಕ್ತಿಕ ಟೀಕೆ ಮಾಡುವುದನ್ನು ರಾಜಕಾರಣಿಗಳು ಬಿಡಬೇಕು. ಅಭಿವೃದ್ಧಿ ಬಿಟ್ಟು, ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಹುಚ್ಚರ ಬಗ್ಗೆ ಹೇಳುತ್ತಾ ಹೋದರೆ ದೇಶದಲ್ಲಿರುವ ಹುಚ್ಚಾಸ್ಪತ್ರೆ ರಾಜಕಾರಣಿಗಳಿಗೆ ಸಾಕಾವುದಿಲ್ಲ. ಈ ಹುಚ್ಚಾಟವನ್ನು ಎಲ್ಲಾ ರಾಜಕಾರಣಿ ಬಿಡಬೇಕು. ವೈಯಕ್ತಿಕ ಟೀಕೆ ಸರಿಯಲ್ಲ. ಒಬ್ಬೊಬ್ಬರ ಬಗ್ಗೆ ಮಾತಾನಾಡುವುದಕ್ಕೆ ಹೋದರೆ ಹುಚ್ಚರ ಸಂತೆಯಾಗುತ್ತದೆ. ನಾವೆಲ್ಲರೂ ರಾಮನ ಭಕ್ತರಾಗೋಣ. ರಾಮ ಯಾವ ಪಕ್ಷಕ್ಕೂ ಸೇರಿದವನಲ್ಲ ಎಂದರು.
ನಾವು ಕಾಂಗ್ರೆಸ್, ಬಿಜೆಪಿ ಎಂದು ಹೇಳುವುದು ಸರಿಯಲ್ಲ. ಟೀಕೆ, ಟಿಪ್ಪಣಿ ಮಾಡುವಾಗ ವೈಯಕ್ತಿಕ ಟೀಕೆ ಸರಿಯಲ್ಲ. ನಾನು ಈ ವಿಚಾರವನ್ನು ವಿರೋಧಿಸುತ್ತೇನೆ ಎಂದರು.
ಸಿದ್ದು ಮನಸಲ್ಲಿ ರಾಮನಿದ್ದಾನೆ: ಸಿದ್ದರಾಮಯ್ಯರೇ ನೀವು ದೈವ ಭಕ್ತರು. ನಿಮ್ಮ ಮನಸ್ಸಿನಲ್ಲಿ ದೇವರಿದ್ದಾರೆ. ನಿಮ್ಮ ಮನಸ್ಸಿನಲ್ಲಿ ರಾಮನಿದ್ದಾನೆ. ಹಾಗಾಗಿ ನೀವು ಒಂದು ಸಲ ರಾಮ ಮಂದಿರಕ್ಕೆ ಬರುತ್ತೇನೆ ಎನ್ನುವುದು, ಮತ್ತೊಂದು ಸಲ ಬರುವುದಿಲ್ಲ ಎಂದು ಹೇಳುವುದು ಬಿಡಿ. ನೀವು ರಾಮಮಂದಿರಕ್ಕೆ ಹೋಗುತ್ತೇನೆಂದು ಹೇಳಿಬಿಡಿ, ಆಗ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದರು.
ಖಾಸಗಿಯಾಗಿ ನಾನು ಸಿದ್ದರಾಮಯ್ಯರನ್ನು ನೋಡಿದ್ದೇನೆ. ಅವರಲ್ಲಿ ದೈವ ಭಕ್ತಿಯಿದೆ. ರಾಮಮಂದಿರಕ್ಕೆ ಹೋಗುತ್ತೇನೆಂದು ನೀವು ಒಂದು ಸಲ ಹೇಳಿಬಿಡಿ. ಆಗ ಎಲ್ಲಾ ಸರಿಹೋಗುತ್ತದೆ ಎಂದು ಸಿಎಂ ಗೆ ಸಲಹೆ ನೀಡಿದರು.