ಕೋಲಾರ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರವಾಸದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು
ವ್ಯಕ್ತಿಗತವಾಗಿ ಟೀಕೆ ಮಾಡಿರುವುದು ಸರಿಯಲ್ಲ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೋವಿಡ್-19 ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ರಾಜ್ಯದ ಹಿತ, ಜನತೆಯ ಹಿತದೃಷ್ಟಿ ಹಾಗೂ ಮಾನವೀಯತೆಯಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊವಿಡ್-19 ಎದುರಿಸಲು ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ಮತ್ತು ಸಲಹೆಯನ್ನು
ನೀಡಿ ಸರ್ಕಾರದ ಜೊತೆ ನಿಂತು ರಾಜ್ಯದಲ್ಲಿ ಕೊವಿಡ್ ನಿಯಂತ್ರಣಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಜೊತೆಗೆ ಪಕ್ಷದ ವತಿಯಿಂದ ಟಾಸ್ಕ್ ಫೋರ್ಸ್ ಸಮಿತಿ ಸೇರಿದಂತೆ ಅನೇಕ ಸಮಿತಿಗಳನ್ನು ನೇಮಕ ಮಾಡಿ ರಾಜ್ಯದ ಜನತೆಗೆ ನೆರವಾಗುವಂತಹ ಕೆಲಸವನ್ನೂ ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಡಿಕೆಶಿ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡಿರುವುದು ಸಚಿವ ಈಶ್ವರಪ್ಪಗೆ ಶೋಭೆ ತರುವಂತಹದಲ್ಲ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಹಿಂದೆ ಸಚಿವರಾಗಿದ್ದು, ಅವರ ಅನುಭವ ಮತ್ತು ಅವರಿಗೆ ಇರುವ ಮಾಹಿತಿಯನ್ನು ಹೇಳಿದ್ದಾರೆ. ಇದನ್ನು ಈಶ್ವರಪ್ಪ ಅವರು ಹೇಳಿಕೆಯನ್ನು ರಚನಾತ್ಮಕವಾಗಿ ತೆಗೆದುಕೊಳ್ಳಬೇಕೆ ಹೊರತು, ಈ ರೀತಿ ವೈಯಕ್ತಿಕವಾಗಿ ಟೀಕೆ ಮಾಡುವ ಸಂದರ್ಭ ಇದಾಗಿಲ್ಲ. ರಾಮನಗರ ವಿಚಾರವಾಗಿ ಡಿಕೆಶಿ ಮಾಡಿರುವ ಹೇಳಿಕೆ ಸರಿಯಾಗಿ ಇದೆ.
ಯಾವುದೇ ನಾಯಕರು ತಮ್ಮ ಸ್ವಂತ ಜಿಲ್ಲೆಯ ವಿಚಾರ ಬಂದಾಗ ಅವರ ಜಿಲ್ಲೆಗೆ ಆದ್ಯತೆ ನೀಡುತ್ತಾರೆ. ಇದನ್ನು ಕೂಡ ರಾಜಕೀಯವಾಗಿ ಟೀಕಿಸುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಈಶ್ವರಪ್ಪ ಅವರು ನೀಡಿರುವ ಹೇಳಿಕೆ ತಕ್ಷಣದಿಂದ ವಾಪಸ್ ಪಡೆಯಬೇಕೆಂದು ಸುದರ್ಶನ್ ಆಗ್ರಹಿಸಿದ್ದಾರೆ.