ಉಡುಪಿ: ಸುಮಾರು 40 ವರ್ಷಗಳ ಹಿಂದೆ ಉಡುಪಿಯ ಲಕ್ಷ್ಮೀಂದ್ರ ನಗರದ ರಸ್ತೆ ಬದಿ ಬಂದು ಬಿಡಾರ ಹೂಡಿ ಮಕ್ಕಳನ್ನು ಅಲ್ಲೇ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಬಾಗಲಕೋಟೆಯ ಯಲ್ಲಪ್ಪ ಮತ್ತು ಸಾವಿತ್ರಿ ಈಗ ಪರ್ಕಳ ಶೆಟ್ಟಿಬೆಟ್ಟಿನಲ್ಲಿ ಹೊಸ ಮನೆಯ ಸಂತಸದಲ್ಲಿದ್ದಾರೆ. ಇದಕ್ಕೆ ಕಾರಣ ಭಾರತೀಯ ಸೇನೆ…
ಆಗ ಅವರ ಮಗನಾಗಿ ಬೀದಿ ಬದಿ ಆಟವಾಡಿಕೊಂಡಿದ್ದ ಕೃಷ್ಣಪ್ಪ ಸೇನೆಗೆ ಸೇರಿ ಈಗ ಬೆಳೆದಿದ್ದಾರೆ. ಅಂಥ ಮಗನನ್ನು ಹೆತ್ತು ದೇಶಸೇವೆಗೆ ಅರ್ಪಿಸಿದ್ದಕ್ಕಾಗಿ ಯಲ್ಲಪ್ಪ ಮತ್ತು ಸಾವಿತ್ರಿಯವರನ್ನು ಸಾರ್ವಜನಿಕರು ಸಮ್ಮಾನಿಸುತ್ತಿದ್ದಾರೆ.
ಹೊಟ್ಟೆಯ ಹಿಟ್ಟಿಗೆ ಪತ್ರಿಕೆ ವಿತರಣೆ
ಬಡತನದಿಂದಾಗಿ ಯಲ್ಲಪ್ಪ, ಸಾವಿತ್ರಿಯವರು ಒಬ್ಬಳು ಮಗಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಮಗ ಮತ್ತು ಇನ್ನೊ ಬ್ಬಳು ಮಗಳನ್ನು ಮಾತ್ರ ಶಾಲೆಗೆ ಕಳುಹಿ ಸಿದರು. ಎಳವೆಯಿಂದಲೇ ತನ್ನ ಜವಾಬ್ದಾರಿಯನ್ನು ಅರಿತಿದ್ದ ಕೃಷ್ಣಪ್ಪ1996-97ರಿಂದ ಓದಲು ಮಾತ್ರವಲ್ಲದೆ ಮನೆಗೂ ಖರ್ಚಿಗೆ ಕೊಡಲು ‘ಉದಯ ವಾಣಿ’ ಮತ್ತು ಹಾಲಿನ ಪ್ಯಾಕೇಟ್‌ಗಳನ್ನು ಮನೆ ಮನೆಗೆ ವಿತರಿಸುತ್ತಿದ್ದರು. ಶೆಟ್ಟಿ ಬೆಟ್ಟಿನಲ್ಲಿ ಸರಕಾರಿ ಪ್ರೌಢಶಾಲೆ, ಹಿರಿ ಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿವರೆಗೆ ಓದಿದ ಕೃಷ್ಣಪ್ಪ ಕಂಪ್ಯೂಟರ್ ತರಬೇತಿ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದು ಆಲೋಚಿ ಸುತ್ತಿದ್ದಾಗ ಸೇನಾ ರ್ಯಾಲಿಯ ಸುದ್ದಿ ಕಿವಿಗೆ ಬಿತ್ತು. ಚಿತ್ರದುರ್ಗಕ್ಕೆ ಸೇನಾ ರ್ಯಾಲಿಗೆ ಹೋಗಿ ಮೊದಲ ಪರೀಕ್ಷೆಯಲ್ಲಿ ವಿಜಯಿ ಯಾಗಿ 2004ರಲ್ಲಿ ಸೇನೆ ಸೇರಿದರು.
ಕೃಷ್ಣಪ್ಪ ಸೇನೆಗೆ ಸೇರಿ 15 ವರ್ಷ ಗಳಾಗಿವೆ. ಜಮ್ಮು, ಝಾರ್ಖಂಡ್‌ನ ರಾಂಚಿ, ಹೈದರಾಬಾದ್, ಪಂಜಾಬ್‌ನ ಅಮೃತಸರದಲ್ಲಿ ಸೇವೆ ಸಲ್ಲಿಸುವ ಜತೆಗೆ ಸೈನಿಕರಿಗೆ ಕಠಿನ ಸವಾಲೊಡ್ಡುವ ಸಿಯಾಚಿನ್‌ನಲ್ಲಿಯೂ ಕಾರ್ಯನಿರ್ವಹಿಸಿ ದ್ದಾರೆ. ನಾಯಕ್ ದರ್ಜೆಯ ಕೃಷ್ಣಪ್ಪ ಅವರ ಈಗಿನ ಮುಖ್ಯ ಕೆಲಸ ಟೆಲಿಫೋನ್ ಆಪರೇಟರ್. ಕೃಷ್ಣಪ್ಪ ಪರ್ಕಳ ಶೆಟ್ಟಿಬೆಟ್ಟಿನಲ್ಲಿ ಮನೆ ನಿರ್ಮಿಸಿ ಇತ್ತೀಚಿಗಷ್ಟೇ ಗೃಹ ಪ್ರವೇಶ ಮಾಡಿದ್ದಾರೆ. ಶೆಟ್ಟಿಬೆಟ್ಟಿನಲ್ಲಿ ತಂದೆ, ತಾಯಿ, ಪತ್ನಿ ಗೌರಿ ಇದ್ದಾರೆ.
ಸಿಯಾಚಿನ್‌ನಲ್ಲಿ ಎರಡು ವರ್ಷ
ಸಿಯಾಚಿನ್‌ನಲ್ಲಿ – 45, -50 ಡಿಗ್ರಿ ಉಷ್ಣಾಂಶವಿರುತ್ತದೆ. ಇಲ್ಲಿ ಕೃಷ್ಣಪ್ಪ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಬೇಸ್ ಕ್ಯಾಂಪ್ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ಸಂದರ್ಭ ಕೃಷ್ಣಪ್ಪ ಇನ್ನೂ ಮೇಲ್ಭಾಗದಲ್ಲಿ ಕರ್ತವ್ಯದಲ್ಲಿದ್ದರು. ರಕ್ಷಣಾ ಸಚಿವರಾಗಿದ್ದಾಗ ಜಾರ್ಜ್ ಫೆರ್ನಾಂಡಿಸ್ ಕೂಡ ಇಲ್ಲಿಗೆ ಭೇಟಿ ನೀಡಿದ್ದರು. ಹನುಮಂತಪ್ಪ ಕೊಪ್ಪದ ಮಂಜು ಕುಸಿದು ಮೃತಪಟ್ಟದ್ದು ಇಲ್ಲಿಯೇ. ಕೃಷ್ಣಪ್ಪ ಅವರ ತಂಡ ಕಾರ್ಯನಿರ್ವಹಿಸಿದ ಬಳಿಕ ಹನುಮಂತಪ್ಪನವರ ತಂಡ ಅಲ್ಲಿ ಕರ್ತವ್ಯಕ್ಕಾಗಿ ಹೋಗಿದ್ದಾಗ ಆ ದುರ್ಘಟನೆ ಸಂಭವಿಸಿತ್ತು.
ಇನ್ನಷ್ಟು ಮಂದಿ ಸೇನೆ ಸೇರಬೇಕು
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಜನರು ಗೌರವದಿಂದ ಕಾಣುತ್ತಾರೆ. ಆದರೆ ನಮ್ಮ ಕರಾವಳಿಯವರು ಸೇನೆಗೆ ಹೆಚ್ಚಾಗಿ ಸೇರುತ್ತಿಲ್ಲ. ರಜೆಯಲ್ಲಿ ನಾನು ಊರಿಗೆ ಬಂದಾಗ ಸೇನೆಯ ಬಗೆಗೆ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸವನ್ನೂ ನೀಡುತ್ತೇನೆ.
-ಕೃಷ್ಣಪ್ಪ
ಆ ಕಷ್ಟ – ಈ ಸುಖ…
ನಾವು 40 ವರ್ಷಗಳ ಹಿಂದೆ ಉಡುಪಿಗೆ ಕೂಲಿಕಾರ್ಮಿಕರಾಗಿ ಬಂದೆವ್ರಿ. ಲಕ್ಷ್ಮೀಂದ್ರನಗರದಲ್ಲಿ ರಸ್ತೆ ಬದಿ ಇದ್ವಿ. ಮಕ್ಳನ್ನು ಅಲ್ಲೇ ಬಿಟ್ಟು ಕೂಲಿನಾಲಿ ಮಾಡ್ತಿದ್ದೆವ್ರಿ. ನಾಯಿ ಬಂದು ಅನ್ನ ತಿಂದು ಹೋದದ್ದೂ ಇದೇರಿ, ಆ ಥರ ಕಷ್ಟಪಟ್ಟೆವ್ರಿ. ಆಗ ಪೇಪರ್ ಮಾರಿ ತಿಂಗಳಿಗೆ 400 ರೂ. ದುಡೀತಿದ್ದ ನನ್ ಮಗ ಅದ್ರಲ್ಲಿ 200 ರೂ. ಮನೆಗೆ ಕೊಡ್ತಿದ್ದ. ಇದ್ದೊಬ್ಬ ಮಗ ಸೇನೆಗೆ ಸೇರ್ತೀನಿ ಅಂದಾಗ ಅಕ್ಷರ ತಿಳೀದ ನಾವು ಆಯ್ತೆಂದ್ವಿ. ಈಗ ಖುಷಿ ಆಗ್ತಿದೇರೀ. ಅವ ಇಲ್ಲದಾಗ ಶಾಲೆ ಕಾಣದ ನಮ್ಮನ್ನೂ ಕರೆದು ನಾಕ್ ಜನರ ಮುಂದೆ ಕುಳ್ಳಿರಿಸಿ ಸಮ್ಮಾನ ಮಾಡ್ದಾಗ ಖುಷೀಂದ ಕಣ್ಣಲ್ಲಿ ನೀರ್ ಬಂತ್ರಿ. ಈಗ ಮಗ ಹೊಸ ಮನೆನೂ ಕಟ್ಸ್ಯಾನ್ರಿ. ನಾವ್ ಅಲ್ಲೇ ಇದ್ದೀವಿ.
-ಯಲ್ಲಪ್ಪ- ಸಾವಿತ್ರಿ, ಕೃಷ್ಣಪ್ಪರ ತಂದೆ, ತಾಯಿ.
– ಮಟಪಾಡಿ ಕುಮಾರಸ್ವಾಮಿ