Advertisement
ಈ ವ್ಯಕ್ತಿ ಮುಂಬಯಿಯಿಂದ ಆಗಮಿಸಿದ ದಿನವೇ ಅನಾರೋಗ್ಯದಿಂದ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
Related Articles
Advertisement
ಮುಂಬಯಿನಿಂದ ಈ ಕುಟುಂಬ ತೆಕ್ಕೆಟ್ಟೆಗೆ ಆಗಮಿಸಿರುವ ವಿಚಾರ ತಿಳಿದು ಅನುಮಾನಗೊಂಡ ಸ್ಥಳಿಯರು ಈ ವಿಚಾರವನ್ನು ಸಂಬಂಧಪಟ್ಟ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಬಳಿಕ ಕೋವಿಡ್ ವಾರಿಯರ್ಸ್ ಅವರ ಮನೆಗೆ ಬಂದು ಸೂಕ್ತ ಮಾಹಿತಿಯನ್ನು ಕಲೆ ಹಾಕಿದ್ದರು. ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈ ವ್ಯಕ್ತಿ ಗುರುವಾರ ಸಾಯಂಕಾಲ 4.30ರ ವೇಳೆಗೆ ತನ್ನ ಮನೆಯಲ್ಲಿಯೇ ಅಸುನೀಗಿದ್ದಾರೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿಂದು 11 ಜನರಿಗೆ ಕೋವಿಡ್-19 ಸೋಂಕು ದೃಢ, ಓರ್ವ ಸಾವು
ಮೃತದೇಹವನ್ನು ಮನೆಯಲ್ಲೇ ಇರಿಸಿದ್ದರು: ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿದೆ. ಅದರಲ್ಲೂ ಮುಂಬಯಿ ಸಹಿತ ಹೊರ ಜಿಲ್ಲೆಗಳಿಂದ ಆಗಮಿಸಿದವರಿಂದ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ವಿಷಯ ಹೀಗಿದ್ದರೂ, ಮೃತ ವ್ಯಕ್ತಿ ಹಾಗೂ ಅವರ ಜತೆ ಮುಂಬಯಿ ನಗರದಿಂದ ಆಗಮಿಸಿದ ಪತ್ನಿ ಹಾಗೂ ಮಗಳ ಗಂಟಲು ದ್ರವದ ಮಾದರಿಯನ್ನು ತಪಾಸಣೆಗಾಗಿ ಲ್ಯಾಬ್ ಕಳುಹಿಸಲಾಗಿತ್ತು ಮಾತ್ರವಲ್ಲದೇ ವ್ಯಕ್ತಿಯ ಶವವನ್ನು ರಾತ್ರಿ ಪೂರ್ತಿ ಮನೆಯಲ್ಲೇ ಇರಿಸಲಾಗಿತ್ತು.
ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಈ ವ್ಯಕ್ತಿ ತನ್ನ ಕುಟುಂಬದವರ ಜೊತೆ ಮುಂಬಯಿನಿಂದ ತೆಕ್ಕಟ್ಟೆಗೆ ಆಗಮಿಸುತ್ತಿರುವ ವಿಷಯ ಇಲ್ಲಿನ ಕೆಲವೇ ಮಂದಿಗೆ ಮೊದಲೇ ತಿಳಿದಿತ್ತು ಎಂಬ ಮಾತುಗಳೂ ಇದೀಗ ಕೇಳಿಬರಲಾರಂಭಿಸಿದೆ. ಆದರೆ ಈ ಕುರಿತಾಗಿ ಯಾವುದೇ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಕುರಿತಾಗಿ ಗ್ರಾಮಸ್ಥರು ಇದೀಗ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ಈ ಘಟನೆ ಸುತ್ತಮುತ್ತಲಿನ ಪರಿಸರದ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಳಂಬವಾದ ಗಂಟಲು ದ್ರವ ಪರೀಕ್ಷೆ: ಜೂ.18 ರಂದು ಇಲ್ಲಿಗೆ ಆಗಮಿಸಿದ್ದ ಮೃತ ವ್ಯಕ್ತಿ ಹಾಗೂ ಅವರ ಪತ್ನಿ ಹಾಗೂ ಮಗಳ ಗಂಟಲು ದ್ರವ ಮಾದರಿಗಳನ್ನು ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿದೆ. ಆದರೆ ಈ ವರದಿ ಇನ್ನೂ ಬರದೇ ಇರುವುದರಿಂದ ಮತ್ತು ಅನಾರೋಗ್ಯಪೀಡಿತ ಈ ವ್ಯಕ್ತಿ ದಿಢೀರನೆ ಮೃತಪಟ್ಟಿರುವ ವಿಚಾರವನ್ನು ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ ಅವರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಬಳಿಕ ಈ ಮೃತದೇಹವನ್ನು ಇಂದು (ಶುಕ್ರವಾರ) ಉಡುಪಿಗೆ ರವಾನಿಸಲಾಗಿದೆ. ತುರ್ತುಸಭೆ: ಈ ಘಟನೆಯ ಕುರಿತು ಗ್ರಾಮಸ್ಥರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಕೋವಿಡ್ 19 ಕಾರ್ಯಪಡೆಯ ಸದಸ್ಯರು ಜೂ.19 ರಂದು ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ ಅವರ ಅಧ್ಯಕ್ಷತೆಯಲ್ಲಿ ತುರ್ತುಸಭೆ ಕರೆಯುವ ಮೂಲಕ ಮುಂದೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪಿಡಿಒ ಮಾಧವ, ಕಾರ್ಯದರ್ಶಿ ಚಂದ್ರ, ಆಶಾಕಾರ್ಯಕರ್ತರಾದ ಚಂದ್ರಕಲಾ, ಸುಹಾಸಿನಿ ಉಪಸ್ಥಿತರಿದ್ದರು.
ಮೃತ ವ್ಯಕ್ತಿಯ ಮನೆ ಸೀಲ್ ಡೌನ್: ಮೃತ ವ್ಯಕ್ತಿ ಅನಾರೋಗ್ಯಪೀಡಿತರಾಗಿದ್ದ ಕಾರಣ ಮತ್ತು ಈ ಕುಟುಂಬ ಕೋವಿಡ್ 19 ಹಾಟ್ ಸ್ಪಾಟ್ ಮುಂಬಯಿಯಿಂದ ಆಗಮಿಸಿದ್ದ ಕಾರಣ ಈ ಮನೆಯನ್ನು ಜಿಲ್ಲಾಡಳಿತ ಇದೀಗ ಸೀಲ್ ಡೌನ್ ಮಾಡಿದೆ. ಮೃತ ವ್ಯಕ್ತಿಯ ಪತ್ನಿ ಮತ್ತು ಮಗಳು ಈ ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದು ಅವರ ತಪಾಸಣಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಮನೆ ಸೀಲ್ ಡೌನ್ ಸಂದರ್ಭದಲ್ಲಿ ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ, ಆಶಾ ಕಾರ್ಯಕರ್ತೆಯರಾದ ಚಂದ್ರಕಲಾ, ಸುಹಾಸಿನಿ, ಕೋಟ ಪೊಲೀಸ್ ಸಿಬಂದಿ ರಾಜು ಮತ್ತಿತರರು ಉಪಸ್ಥಿತರಿದ್ದರು.