Advertisement

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

02:44 PM Dec 02, 2021 | Team Udayavani |

ಬೆಂಗಳೂರು : ನಗರದಲ್ಲಿ ಫುಡ್ ಡೆಲಿವರಿ ಬಾಯ್ ಒಬ್ಬರು ರಸ್ತೆ ಗುಂಡಿಯಿಂದಾಗಿ ಟ್ರಕ್‌ಗೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಸಂಚಾರ ಪೊಲೀಸರು ಬಿಬಿಎಂಪಿ ಎಇಇ ವಿರುದ್ಧವೇ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Advertisement

ಅಪಘಾತಕ್ಕೆ ಬಲಿಯಾದವರನ್ನು 21 ವರ್ಷದ ಅಜೀಂ ಅಹ್ಮದ್ ಎಂದು ಗುರುತಿಸಲಾಗಿದೆ. ಥಣಿಸಂದ್ರ ಬಳಿ ಅಪಘಾತ ಸಂಭವಿಸಿದ್ದು, ರಸ್ತೆ ಗುಂಡಿಯಿಂದಾಗಿ ಅಜೀಂ ರಸ್ತೆಗೆ ಬಿದ್ದಿದ್ದಾರೆ. ಅತಿವೇಗದಲ್ಲಿ ಬಂದ ಲಾರಿಯೊಂದು ಅವರ ಬಲಗೈ ಮತ್ತು ಕಾಲಿನ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗಳಾಗಿ, ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ) ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಬಿಎಂಪಿಯ ಎಇಇ ಸವಿತಾ ಅವರನ್ನು ಪೊಲೀಸರು ಬಂಧಿಸಿ ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ, ‘ಬಿಬಿಎಂಪಿ ಎಇಇ ಸವಿತಾ ಅವರು ನಿರ್ಲಕ್ಷಿಸಿ ರಸ್ತೆ ಗುಂಡಿಗಳನ್ನು ತುಂಬದೇ ಬಿಟ್ಟಿದ್ದರಿಂದ ವ್ಯಕ್ತಿ ಮೃತಪಟ್ಟಿರುವುದು ಪತ್ತೆಯಾಗಿದೆ. ಸುಪ್ರೀಂ ಕೋರ್ಟ್ ನಿಯಮಗಳ ಆಧಾರದ ಮೇಲೆ ಎಇಇ ಸವಿತಾ (34) ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ ಎಂದರು.

Advertisement

ಪ್ರಕರಣದಲ್ಲಿ ಟ್ರಕ್ ಚಾಲಕನನ್ನು ಎರಡನೇ ಆರೋಪಿ ಎಂದು ಹೆಸರಿಸಲಾಗಿದ್ದು, ಪೊಲೀಸರು ಆತನನ್ನು ಸೆಕ್ಷನ್ 279 (ಸಾರ್ವಜನಿಕ ದಾರಿಯಲ್ಲಿ ದುಡುಕಿನ ಚಾಲನೆ ) ಮತ್ತು ಭಾರತೀಯ ಮೋಟಾರು ವಾಹನಗಳ ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ 304(ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಸಾರ್ವಜನಿಕ ಮಾರ್ಗ ಅಥವಾ ಮಾರ್ಗದಲ್ಲಿ ಅಡಚಣೆ ಮಾಡಿದ ಕಲಂ  ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.

ಹೆಚ್ಚುವರಿಯಾಗಿ, ರಸ್ತೆಯ ಗುತ್ತಿಗೆ ಪಡೆದ ಗುತ್ತಿಗೆದಾರನನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ. ಗುತ್ತಿಗೆದಾರರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದಾಗ ಅಜೀಮ್ ಆಹಾರವನ್ನು ತಲುಪಿಸಲು ಹೋಗುತ್ತಿದ್ದರು. ಪೌರಕಾರ್ಮಿಕರ ನಿರ್ಲಕ್ಷ್ಯವೇ ಅವರ ಸಾವಿಗೆ ರಸ್ತೆ ಗುಂಡಿಯ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next