Advertisement

ಪೆರ್ಮುದೆ ವಿಶೇಷ ಗ್ರಾಮ ಸಭೆ

12:28 PM Dec 29, 2017 | Team Udayavani |

ಪೆರ್ಮುದೆ: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪೆರ್ಮುದೆ ಹಾಗೂ ಕುತ್ತೆತ್ತೂರು ಗ್ರಾಮಗಳ 829 ಎಕ್ರೆ ಜಾಗ ಎಂಆರ್‌ಪಿಎಲ್‌ನ 3ನೇ ಹಂತದ ಭೂಸ್ವಾಧೀನದಲ್ಲಿ ಬರುವ ಕಾರಣ ಇಲ್ಲಿನ ಉದ್ಯೋಗ ಖಾತರಿ ಯೋಜನೆಯಡಿ ಕೇವಲ 8 ಕಾಮಗಾರಿಗಳು ನಡೆದಿದೆ. ಕೃಷಿ ಭೂಮಿಯನ್ನು ಬಂಜರು ಭೂಮಿಯೆಂದು ಹೇಳಲಾಗುತ್ತಿದೆ. ನಮಗೆ ನೀರು, ರಸ್ತೆ ಬೇಕು. ಕಿಂಡಿ ಅಣೆಕಟ್ಟು ಕಟ್ಟಲು ಈಗ ಸಮಸ್ಯೆಯಾಗಿದೆ ಎಂದು ವಿಶೇಷ ಗ್ರಾಮ ಸಭೆಯಲ್ಲಿ ಜನರು ಅಲವತ್ತುಕೊಂಡಿದ್ದಾರೆ.

Advertisement

ಪೆರ್ಮುದೆ ಗ್ರಾಮ ಪಂಚಾಯತ್‌ ನ 2017-18ನೇ ಸಾಲಿನ ದ್ವಿತೀಯ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನ ವಿಶೇಷ ಗ್ರಾಮ ಸಭೆಯು ಪೆರ್ಮುದೆ ಗ್ರಾ.ಪಂ. ಸಭಾಭವನದಲ್ಲಿ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇಲಾಖೆ ನಿರ್ವಹಣೆ ಮಾಡಲಿ
ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಿಂಡಿ ಅಣೆಕಟ್ಟು ಕಟ್ಟಲಾಗಿದೆ. ಈಗ ಅದಕ್ಕೆ ಹಲಗೆ ಹಾಕಲು ಈಗ ಹಲಗೆಯೇ ಇಲ್ಲ. ಇದರ ನಿರ್ವಹಣೆಯನ್ನು ಇಲಾಖೆ ಮಾಡಬೇಕು. ಇಲ್ಲದಿದ್ದಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ತೋಟಾಗಾರಿಕೆ ಇಲಾಖೆ ಗೈರು
ಗ್ರಾಮ ಸಭೆಗೆ ತೋಟಾಗಾರಿಕೆ ಇಲಾಖೆಯವರು ಬರುವುದಿಲ್ಲ. ಬಂದರೂ 5 ನಿಮಿಷ ಬಂದು ಭಾಷಣ ಕೊಟ್ಟು ಹೋಗುತ್ತಾರೆ. ಇಲಾಖೆಯವರು ಸಭೆಗೆ ಬರಬೇಕೆಂದು ಈ ಹಿಂದೆ ಹಲವು ಬಾರಿ ಮನವಿ ಮಾಡಲಾಗಿದೆ ಎಂದು ಸಭೆಯಲ್ಲಿ ಗ್ರಾಮಸ್ಥರು ತಿಳಿಸಿದರು. ನೋಡಲ್‌ ಅಧಿಕಾರಿ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರಾಜಣ್ಣ ಮಾತನಾಡಿ, ಸಾರ್ವಜನಿಕರಿಗೆ ಮಾಹಿತಿ, ಕುಂದು ಕೊರತೆಗಳ ಬಗ್ಗೆ ಚರ್ಚಿಸುವ ಸಭೆ ಇದಾಗಿದೆ. ತಪ್ಪು ಮಾಡಿದರೆ ಇಲ್ಲಿ ಶಿಕ್ಷೆ ಇದೆ. ಹಣ ದುರಪಯೋಗ ಮಾಡಬಾರದೆಂಬ ಉದ್ದೇಶ ಈ ಯೋಜನೆಯದ್ದು ಎಂದರು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸರೋಜಾ ಮಾತನಾಡಿ, ಪೆರ್ಮುದೆ ಹಾಗೂ ಕುತ್ತೆತ್ತೂರು ಗ್ರಾಮಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಅಗತ್ಯ. ಜನರು ಇದಕ್ಕಾಗಿ ಸಹಕರಿಸಬೇಕು ಎಂದರು.

ಯೋಜನೆ ಮಾಹಿತಿ
ತಾಲೂಕು ಸಂಯೋಜಕ ರೋಹಿತ್‌ ಕುಮಾರ್‌ ಕೈಗೊಂಡ ಯೋಜನೆಯ ಬಗ್ಗೆ ಮಾಹಿತಿ ನೀಡಿ, 4ದಿನಗಳಲ್ಲಿ ಪರಿಶೋಧನೆ ಕಾರ್ಯ ನಡೆದಿದೆ. ಪೆರ್ಮುದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 159ಮಂದಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬಗಳಿವೆ. ಅದರಲ್ಲಿ 137 ಮಂದಿ ಸಕ್ರಿಯಾಗಿದ್ದಾರೆ. 8 ಕಾಮಗಾರಿಗಳು ನಡೆದಿವೆ. 5 ಗ್ರಾ.ಪಂ.ಗೆ ಸಂಬಂಧಿಸಿದ್ದು. 3 ತೋಟಗಾರಿಕೆ ಇಲಾಖೆ ಸಂಬಂಧಿಸಿದ್ದು. ಒಟ್ಟು 1,47,108 ರೂ.ವೆಚ್ಚವಾಗಿದೆ. 484ದಿನಗಳು ಗ್ರಾಮ ಪಂಚಾಯತ್‌ ಗೆ, 134 ದಿನ ತೋಟಗಾರಿಕೆಗೆ ಸಂಬಂಧ ಪಟ್ಟವುಗಳು. ಉದ್ಯೋಗ ಚೀಟಿ ಪರಿಷ್ಕರಣೆ ಆಗಿಲ್ಲ. ಕಾಮಗಾರಿಯ ಆರಂಭ ಹಾಗೂ ಮುಕ್ತಾಯ ಬಗ್ಗೆ ನಮೂದಿಸಿಲ್ಲ.ಕೆಲಸ ಮಾಡುವವರ ಪೋಟೋ ತೆಗೆಸಿಲ್ಲ ಎಂದರು. ಎಂಜಿನಿಯರ್‌ ರಾಜಕುಮಾರ್‌ ಯೋಜನೆಯ ಮಾಹಿತಿ ನೀಡಿದರು.

Advertisement

ಜಿ.ಪಂ.ಸದಸ್ಯೆ ವಸಂತಿ ಕಿಶೋರ್‌, ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಕಿಶೋರ್‌ ಕೋಟ್ಯಾನ್‌, ಗ್ರಾಮ ಪಂಚಾಯತ್‌ ಸದಸ್ಯರು, ಸಂಪನ್ಮೂಲ ವ್ಯಕ್ತಿ ರೇಖಾಮಣಿ, ಸಂಧ್ಯಾಲಕ್ಷ್ಮೀ ಉಪಸ್ಥಿತರಿದ್ದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಸನಬ್ಬ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

ಉದ್ಯೋಗ ಖಾತರಿಯಲ್ಲಿ ನಷ್ಟ
1ಲಕ್ಷ ರೂ. ವೆಚ್ಚದಲ್ಲಿ ಬಾವಿಗಾಗಿ ಕ್ರಿಯಾಯೋಜನೆಯನ್ನು ಉದ್ಯೋಗ ಖಾತರಿಯಲ್ಲಿ ಮಾಡಿದ್ದು, ಕೆಲಸ ಮಾಡಿದರೂ ಎಂಜಿನಿಯರ್‌ ಪರಿಶೀಲನೆಗೆ ಬಾರದೆ. ಕೇವಲ 9ಸಾವಿರ ರೂ. ಸಿಕ್ಕಿದೆ. ಮುಂದೆ ಬಾವಿ ಅಳ ಮಾಡಲು ಸಾಧ್ಯವಾಗದೆ ತಾಯಿಯ ಅಭರಣವನ್ನು ಅಡವಿಟ್ಟಿದ್ದೇನೆ. ಈ ಸಮಸ್ಯೆಗೆ ಎಂಜಿನಿಯರ್‌ ಅವರೇ ಕಾರಣ. ಕ್ಲಪ್ತಸಮಯದಲ್ಲಿ ಎಂಜಿನಿಯರ್‌ ಗಳು ಗ್ರಾಮ ಪಂಚಾಯತ್‌ಗೆ ತಿಳಿಸಿ ಪರಿಶೀಲನೆ ಮಾಡಬೇಕು ಎಂದು ಉದ್ಯೋಗ ಖಾತರಿಯಲ್ಲಿ ಬಾವಿ ಅಗೆಯಲು ತಯಾರಾದ ಯುವಕ ಸಂಕಷ್ಟಕ್ಕೆ ಸಿಲುಕಿದ ಘಟನೆಯನ್ನು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next