Advertisement

ಅಗತ್ಯ ವಸ್ತು ಅಂಗಡಿಗಳಿಗೆ ಅನುಮತಿ

05:55 PM Apr 30, 2020 | mahesh |

ರಾಮನಗರ: ಲಾಕ್‌ಡೌನ್‌ ಸಡಿಲಿಕೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ರಾಮನಗರ ಹೊರತು ಪಡಿಸಿ ಉಳಿದ ತಾಲೂಕುಗಳಲ್ಲಿ ನೆರೆಹೊರೆ ಅಂಗಡಿಗಳು ತೆರೆಯಲು ಜಿಲ್ಲಾಡಳಿತ ಅನುಮತಿ ಕೊಟ್ಟಿದೆ. ಆದರೆ ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸುವಂತಿಲ್ಲ ಎಂದು ಡೀಸಿ ಬುಧವಾರ ಆದೇಶಿಸಿದ್ದಾರೆ.

Advertisement

ರಾಜ್ಯ ಸರ್ಕಾರ ಮಂಗಳವಾರ ಹಸಿರು ವಲಯದಲ್ಲಿ ಕೆಲವಷ್ಟು ವಿನಾಯ್ತಿ ಘೋಷಿಸಿ, ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಜಿಲ್ಲೆಯ ನೆರೆಹೊರೆಯ ಜಿಲ್ಲೆಗಳು ರೆಡ್‌ ಮತ್ತು ಆರೆಂಜ್‌ ಜೋನ್‌ನಲ್ಲಿದ್ದು ಸೋಂಕು ಜಿಲ್ಲೆಗೂ ಹರಡುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ ಕೈಗಾರಿಕೆಗಳ ಆರಂಭಕ್ಕೆ ಅನುಮತಿ ಕೊಟ್ಟಿರಲಿಲ್ಲ. ಜಿಲ್ಲಾಡಳಿತ ಈ ನಿಯಮ ಜಾರಿಗೊಳಿಸಿದೆ.

ಅಂಗಡಿಗಳಿಗೆ ಅನುಮತಿ: ರಾಮನಗರ ವ್ಯಾಪ್ತಿ ಹೊರತುಪಡಿಸಿ ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಲ್‌ಗಳು ಮತ್ತು ಬೃಹತ್‌ ಅಂಗಡಿ ಮಳಿಗೆ ಹೊರತುಪಡಿಸಿ ಶಾಪ್‌ ಅಂಡ್‌ ಎಸ್ಟಾಬ್ಲಿಷ್‌ ಮೆಂಟ್‌ ಆಕ್ಟ್ ಅಡಿಯಲ್ಲಿ ನೋಂದಾಯಿತ ವಾಗಿರುವ ನೆರೆಹೊರೆ ಅಂಗಡಿಗಳು, ಒಂಟಿ ಅಂಗಡಿಗಳನ್ನು ಮತ್ತು ವಸತಿ ಸಮುಚ್ಚಯದ
ಅಂಗಡಿಗಳನ್ನು ತೆರೆಯಬಹುದಾಗಿದೆ.

ನಿಯಮಗಳು ಪಾಲನೆಯಾಗಲಿ: ರಾಮನಗರ ಹೊರತು ಪಡಿಸಿ ಇತರೆಡೆ ತೆರೆಯುವ ಅಂಗಡಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಸಬೇಕು. ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿನ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸರ್ಕಾರ ಏಪ್ರಿಲ್‌ 28ರಂದು ಹೊರೆಡಿಸಿರುವ ಆದೇಶವನ್ನೇ ಅನುಸರಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಫ‌ರ್‌ ಜೋನ್‌ಗೆ ಜಿಲ್ಲಾ ಕೇಂದ್ರ: ವಿನಾಯ್ತಿ ಇಲ್ಲ
ಬೆಂಗಳೂರು ಪಾದರಾಯನಪುರ ಗಲಭೆಕೋರರು ಜಿಲ್ಲಾ ಕಾರಾಗೃಹದಲ್ಲಿದ್ದ ವೇಳೆ ಅವರ ಪೈಕಿ ಐವರಿಗೆ ಕೊರೊನಾ ಸೋಂಕು ಪತ್ತಯಾಗಿದ್ದರಿಂದ ಜಿಲ್ಲಾಡಳಿತ ಕಾರಾಗೃಹವನ್ನು ಮತ್ತು ಸುತ್ತಮುತ್ತಲ 1 ಕಿಮಿ ವ್ಯಾಪ್ತಿಯನ್ನು ಕಂಟೈನ್‌ಮೆಂಟ್‌ ಜೋನ್‌ ಎಂದು ಘೋಷಿಸಿದೆ. ಕಂಟೈನ್‌ಮೆಂಟ್‌ ಜೋನ್‌ನಿಂದ 5 ಕಿ.ಮೀ. ಸುತ್ತಳತೆ ಯಲ್ಲಿ ಬಫ‌ರ್‌ ಜೋನ್‌ ಎಂದು ಘೋಷಿಸಿರುವುದರಿಂದ ಜಿಲ್ಲಾ ಕೇಂದ್ರ ರಾಮನಗರಕ್ಕೆ ಲಾಕ್‌ಡೌನ್‌ ವಿನಾಯ್ತಿ ಸಿಕ್ಕಿಲ್ಲ. ಹಾಲಿ ಇರುವಂತೆ ದೈನಂದಿನ ಅಗತ್ಯ ವಸ್ತುಗಳನ್ನು ಪೂರೈಸುವ ಅಂಗಡಿಗಳನ್ನು ಹೊರತು ಪಡಿಸಿ ಇತರೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಆದೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next