Advertisement

ಕಿರುತೆರೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿ

04:19 AM Jun 11, 2020 | Lakshmi GovindaRaj |

ಬೆಂಗಳೂರು: ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡುವಂತೆ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಕಲಾವಿದರು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಅವರಲ್ಲಿ ಮನವಿ ಮಾಡಿದ್ದಾರೆ.

Advertisement

ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್‌, ಲಕ್ಷ್ಮೀ ದೇವಮ್ಮ, ಬಿ.ಎಲ್. ಮಂಜುಳಾ, ಗಣೇಶ್‌ ರಾವ್‌, ಬೆಂಗಳೂರು ನಾಗೇಶ್‌, ಶೋಭಾ ರಾಘವೇಂದ್ರ  ಇತರರು ಬುಧವಾರ ಅಶ್ವತ್ಥ ನಾರಾಯಣ ಅವರನ್ನು ಭೇಟಿಯಾಗಿದ್ದರು. ಕಿರುತೆರೆ ಚಿತ್ರೀಕರಣ ಆರಂಭಗೊಂಡರೂ ಕೆಲವು ನಿರ್ಬಂಧ ಇರುವುದರಿಂದ ಕಲಾವಿದರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ಕಲಾವಿದರ ಸಮಸ್ಯೆಗಳನ್ನು ಆಲಿಸಿದ ಡಾ. ಅಶ್ವತ್ಥನಾರಾಯಣ, ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದು  ಎಂದು ಭರವಸೆ ನೀಡಿದರು. ಲಾಕ್‌ಡೌನ್‌ ಹಿನ್ನಲೆಯಲ್ಲಿ ಸುಮಾರು 2 ತಿಂಗಳ ಕಾಲ ಸ್ಥಗಿತಗೊಂಡಿದ್ದ ಕಿರುತೆರೆ ಚಿತ್ರೀಕರಣ ಮತ್ತೆ ಆರಂಭವಾಗಿರುವುದು ಸಂತಸದ ವಿಷಯ. ಆದರೆ, 60 ವರ್ಷ ಮೇಲ್ಪಟ್ಟವರಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು  ಅವಕಾಶ ಇಲ್ಲದಿರುವುದರಿಂದ ಹಿರಿಯ ಕಲಾವಿದರಿಗೆ ಸಂಪಾದನೆ ಇಲ್ಲ.

ಇದರಿಂದ ದಿನಸಿ, ಮನೆ ಬಾಡಿಗೆ, ಔಷಧಿಗೆ ಹಣ ಇಲ್ಲದೆ ಪರದಾಡುವಂತಾಗಿದೆ. ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂಬುದು ಹಿರಿಯ ಕಲಾವಿದರ  ಮನವಿ. ತಮಿಳುನಾಡು, ಆಂಧ್ರಪ್ರದೇಶದ ಹಿರಿಯ ಕಲಾವಿದರಿಗೆ ಮಾಸಾಶನ ದೊರೆಯುತ್ತಿದೆ. ಕರ್ನಾಟಕದಲ್ಲೂ ಹಿರಿಯ ಕಲಾವಿದರು ಮತ್ತು ತಂತ್ರಜ್ಞರಿಗೆ ಮಾಸಾಶನ ದೊರೆಯುವಂತಾಗಬೇಕು ಎಂದು ಕಲಾವಿದರು ಮನವಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next