Advertisement
ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ತಲಾ ಐದು ಸಾವಿರ 4-ಸ್ಟ್ರೋಕ್ ಮತ್ತು ಎಲೆಕ್ಟ್ರಿಕ್ ಆಟೋಗಳ ಕಾರ್ಯಾಚರಣೆಗೆ ಅನುಮತಿ ನೀಡಲು ಒಪ್ಪಿಗೆ ಸೂಚಿಸಿದ್ದು, ಈ ಪೈಕಿ ಇದೇ ಮೊದಲ ಬಾರಿಗೆ ಸಾವಿರ ಪಿಂಕ್ ಆಟೋಗಳಿಗೆ ಪರ್ಮಿಟ್ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಆ್ಯಪ್ ಆಧಾರಿತ ಪಿಂಕ್ ಕ್ಯಾಬ್‌ಗಳಂತೆಯೇ ಇನ್ಮುಂದೆ ಮಹಿಳೆಯರಿಗಾಗಿ ಮೀಸಲಿರುವ ಮಹಿಳಾ ಮಣಿಗಳೇ ಓಡಿಸುವ ಆಟೋಗಳು ರಸ್ತೆಗಿಳಿಯಲಿವೆ.
Related Articles
Advertisement
ಇವೆಲ್ಲವುಗಳಿಗೂ “ಲಾಸ್ಟ್ ಮೈಲ್ ಕನೆಕ್ಟಿವಿಟಿ’ ಅತ್ಯಗತ್ಯ. ಈ ಸೇವೆಯನ್ನು ಕಲ್ಪಿಸುವಲ್ಲಿ ಆಟೋಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ, ಈಗಾಗಲೇ ಅಧಿಕೃತ ಮತ್ತು ಅನಧಿಕೃತವಾಗಿ ಸಾಕಷ್ಟು ಆಟೋಗಳು ಕಾರ್ಯಾಚರಣೆ ಮಾಡುತ್ತಿವೆ. ಹೀಗಿರುವಾಗ ಮತ್ತಷ್ಟು ಆಟೋಗಳು ರಸ್ತೆಗಿಳಿದರೆ ತಮಗೆ ತೊಂದರೆ ಆಗಲಿದೆ ಎಂದು ಆಟೋ ಚಾಲಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಅನುಕೂಲ: “ಮೆಟ್ರೋ ಈಗ ಜನಪ್ರಿಯಗೊಳ್ಳುತ್ತಿದೆ. ಮೆಟ್ರೋ ನಿಲ್ದಾಣದ ಒಂದು ಕಿ.ಮೀ.ಗಿಂತ ಕಡಿಮೆ ಅಂತರ ಇರುವ ಸುತ್ತಲಿನ ಪ್ರದೇಶಕ್ಕೆ ಆ್ಯಪ್ ಆಧಾರಿತ ಟ್ಯಾಕ್ಸಿಗಳ ಅವಲಂಬನೆ ಕಷ್ಟ. ಕಾಲ್ನಡಿಗೆಯಲ್ಲಿ ಹೋಗಲು ಎಷ್ಟೋ ಕಡೆಗಳಲ್ಲಿ ಬೀದಿದೀಪಗಳಾಗಲಿ ಮತ್ತು ಸಮರ್ಪಕ ಫುಟ್‌ಪಾತ್‌ಗಳು ಇಲ್ಲ.
ಪರಿಸ್ಥಿತಿ ಹೀಗಿರುವಾಗ ಮಹಿಳೆಯರು, ವೃದ್ಧರಿಗೆ ಮನೆ ತಲುಪುವುದು ಇನ್ನೂ ಕಷ್ಟ. ನಗರದಲ್ಲಿ ಈಗ ಲಾಸ್ಟ್ ಮೈಲ್ ಕನೆಕ್ಟಿವಿಟಿ ದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಆಟೋಗಳಿಗೆ ಪರ್ಮಿಟ್ ನೀಡುವುದು ಸ್ವಾಗತಾರ್ಹ ಎಂದು ಕ್ಲೀನರ್ ಪ್ಲಾಟ್‌ಫಾರಂ ಬೆಂಗಳೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಯೋಗೇಶ್ ಅಭಿಪ್ರಾಯಪಡುತ್ತಾರೆ.
ಇದರ ಜತೆಗೆ ಪ್ರಾಧಿಕಾರವು “ಶೇರ್ಡ್ ಆಟೋ’ ಸೇವೆಗೂ ಅವಕಾಶ ಕಲ್ಪಿಸಬೇಕು. ಅಷ್ಟೇ ಯಾಕೆ, ನಮ್ಮಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಹಾಗೂ ಹೊರ ವಲಯದಲ್ಲಿ ಮತ್ತು ರಾತ್ರಿ ವೇಳೆಯಲ್ಲಿ ಆಟೋಗಳಲ್ಲಿ ಶೇರ್ಡ್ ಆಟೋ ಸೇವೆ ಇದೆ. ಪ್ರಯಾಣಿಕರಿಗೆ ಇದರಿಂದ ಅನುಕೂಲವಿದೆ ಎನ್ನುತ್ತಾರೆ.
ಪರ್ಮಿಟ್ ನೀಡಿದ್ದಕ್ಕೆ ಆಕ್ಷೇಪ: ಪರ್ಮಿಟ್ ಇರುವುದು 1.25 ಲಕ್ಷ. ಆದರೆ, ನೋಂದಣಿಗೊಂಡ ಆಟೋಗಳ ಸಂಖ್ಯೆ 1.75 ಲಕ್ಷ! ಈ ಮಧ್ಯೆ ಆ್ಯಪ್ ಆಧಾರಿತ 80 ಸಾವಿರ ಟ್ಯಾಕ್ಸಿಗಳು ಕಾರ್ಯಾಚರಣೆ ಮಾಡುತ್ತಿವೆ. ಮೆಟ್ರೋ ಕೂಡ ಬಂದಿರುವುದರಿಂದ ಈಗಿರುವ ಆಟೋಗಳೇ ಖಾಲಿ ಓಡಾಡುತ್ತಿವೆ. ಅಂತಹದ್ದರಲ್ಲಿ ಮತ್ತೆ ಹತ್ತು ಸಾವಿರ ಆಟೋಗಳಿಗೆ ಪರ್ಮಿಟ್ ಕೊಡುವುದು ಎಷ್ಟು ಸಮಂಜಸ?
ನಿತ್ಯ ಒಂದು ಆಟೋ ಸರಾಸರಿ 80-100 ಕಿ.ಮೀ. ಕಾರ್ಯಾಚರಣೆ ಮಾಡುತ್ತಿದ್ದು, 800-1,000 ರೂ. ಆದಾಯ ಬರುತ್ತಿದೆ. ಅದರಲ್ಲಿ ಸಿಎನ್‌ಜಿ ಅಥವಾ ಎಲ್‌ಪಿಜಿಗೆ 500-600 ರೂ. ಖರ್ಚಾಗುತ್ತದೆ. ಉಳಿಯುವ ಲಾಭ 400-500 ರೂ. ಇಷ್ಟರಲ್ಲಿ ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು ಎಂದು ಆಟೋರಿಕ್ಷಾ ಡ್ರೈವರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸ್ಥಗಿತಗೊಂಡಿದ್ದು ಯಾವಾಗ?: 2015ರಿಂದ ನಗರದಲ್ಲಿ ಆಟೋಗಳ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಸಮರ್ಪಕ ಸಾರಿಗೆ ವ್ಯವಸ್ಥೆ ಇದ್ದ ಮಹಾನಗರಗಳಲ್ಲಿ ಹೀಗೆ ಆಟೋ ಪರ್ಮಿಟ್‌ಗಳನ್ನು ನಿರ್ಬಂಧಿಸಲು ಕೇಂದ್ರದ ಮೋಟಾರು ವಾಹನ ಕಾಯ್ದೆಯಲ್ಲೂ ಅವಕಾಶ ಇದೆ. ಆ ಕಾಯ್ದೆಯ ಪ್ರಕಾರ 2015ರಲ್ಲಿ ಪರ್ಮಿಟ್‌ಗಳ ವಿತರಣೆ ಸ್ಥಗಿತಗೊಳಿಸಲಾಗಿತ್ತು.
ಆದರೆ, 2018ರ ಮಾರ್ಚ್‌ನಲ್ಲಿ 30 ಸಾವಿರ ಆಟೋಗಳಿಗೆ ಪರ್ಮಿಟ್ ನೀಡಲು ಅವಕಾಶ ಕಲ್ಪಿಸಲಾಯಿತು. ಅದರ ಮುಂದುವರಿದ ಭಾಗವಾಗಿ ಈಗ ಮೊದಲ ವರ್ಷದಲ್ಲಿ 10 ಸಾವಿರ ಪರ್ಮಿಟ್ ನೀಡಲು ನಿರ್ಧರಿಸಲಾಗಿದೆ. ಈ ಮಧ್ಯೆ ಈಚೆಗೆ ಟು-ಸ್ಟ್ರೋಕ್ ಆಟೋಗಳಿಗೆ ಹೇರಲಾಗಿದ್ದ ನಿಷೇಧವನ್ನೂ ಹಿಂಪಡೆದಿರುವ ಸಾರಿಗೆ ಇಲಾಖೆ, ಕೇವಲ ಡೀಸೆಲ್ ಆಧಾರಿತ ಆಟೋಗಳನ್ನು ನಿಷೇಧಿಸಿದೆ.
ಪಿಂಕ್ ಆಟೋಗೆ ಪಾಲಿಕೆ ಪ್ರೋತ್ಸಾಹ: ಪಿಂಕ್ ಆಟೋಗಳನ್ನು ಬಿಬಿಎಂಪಿ ಸಹ ಪ್ರೋತ್ಸಾಹಿಸುತ್ತಿದ್ದು, ಈ ಸಂಬಂಧ ಆಟೋ ಖರೀದಿಗೆ ಕಳೆದ ಬಜೆಟ್‌ನಲ್ಲಿ 75 ಸಾವಿರ ರೂ. ಸಬ್ಸಿಡಿ ಘೋಷಿಸಿದೆ. ಆದರೆ, ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ. ಪಿಂಕ್ ಆಟೋ ಓಡಿಸಲು ಚಾಲಕಿಯರು ಚಾಲನಾ ಪರವಾನಗಿ ಮತ್ತು ಸಾರಿಗೆ ಇಲಾಖೆ ನೀಡುವ ಬ್ಯಾಚ್ ಹೊಂದಿದ್ದರೆ ಸಾಕು ಎಂದು ಪ್ರಾಧಿಕಾರದ ಮೂಲಗಳು ಸ್ಪಷ್ಟಪಡಿಸಿವೆ. ಇದರಿಂದ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಜತೆಗೆ ಮಹಿಳೆಯರ ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶ ಕೂಡ ದೊರೆಯಲಿದೆ.
ಯಾವ್ಯಾವ ಆಟೋಗಳಿಗೆ ಎಷ್ಟು ಪರ್ಮಿಟ್?-4,000 ಎಲೆಕ್ಟ್ರಿಕ್
-4,000 ಸಾಮಾನ್ಯ 4-ಸ್ಟ್ರೋಕ್
-500 ಪಿಂಕ್ ಎಲೆಕ್ಟ್ರಿಕ್
-500 ಪಿಂಕ್ 4-ಸ್ಟ್ರೋಕ್
-10,000 ಒಟ್ಟಾರೆ ಪರ್ಮಿಟ್ * ವಿಜಯಕುಮಾರ ಚಂದರಗಿ