ಹಾವೇರಿ: ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ಜೂ. 8 ರಿಂದ ದೇವಸ್ಥಾನ, ಚರ್ಚ್, ಮಸೀದಿ ತೆರೆಯಲು ಅವಕಾಶ ನೀಡಿದ್ದು ಜಿಲ್ಲೆಯ ಎಲ್ಲ ಧಾರ್ಮಿಕ ಕೇಂದ್ರಗಳು ಬಾಗಿಲು ತೆರೆಯಲು ಸಿದ್ಧತೆ ನಡೆಸಿವೆ.
ಬ್ಯಾಡಗಿ ತಾಲೂಕು ಕದರಮಂಡಲಗಿ ಆಂಜನೇಯ, ರಾಣಿಬೆನ್ನೂರು ತಾಲೂಕು ದೇವರಗುಡ್ಡದ ಮಾಲತೇಶ, ಚೌಡದಾನಯ್ಯಪುರ,ಸವಣೂರು ತಾಲೂಕಿನ ಕಾರಡಗಿ ವೀರಭದ್ರೇಶ್ವರ, ಹಾನಗಲ್ಲ ತಾಲೂಕಿನ ತಾರಕೇಶ್ವರ, ಶಿಶುನಾಳದ ಶರೀಫಗಿರಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ದೇವರ ದರ್ಶನಕ್ಕೆ ಬರುವ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಗುರುತು ಹಾಕುವುದು, ದೇವಸ್ಥಾನ ಆವರಣದ ಸ್ವಚ್ಛತೆ, ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ದೇವಸ್ಥಾನದ ಒಳಗೆ ಪ್ರವೇಶಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲು ಸಿಬ್ಬಂದಿ ನೇಮಕ ಮಾಡಿಕೊಂಡಿವೆ. ಜಿಲ್ಲೆಯ ಬಹುತೇಕ ಪ್ರವಾಸಿತಾಣಗಳು ಪ್ರವಾಸಿಗರ ಪ್ರವೇಶಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ಜಿಲ್ಲಾಡಳಿತದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿವೆ. ಶಿಗ್ಗಾವಿ ತಾಲೂಕಿನ ಗೊಟಗೋಡಿ ಉತ್ಸವ್ ರಾಕ್ ಗಾರ್ಡನ್ ಬಾಗಿಲು ತೆರೆಯಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಾಗಿಲು ತೆರೆಯಲು ಜಿಲ್ಲಾಧಿಕಾರಿಯವರಿಂದ ಇನ್ನೂ ಅಧಿಕೃತ ಆದೇಶ ಬಂದಿಲ್ಲ.
ಆದೇಶ ಬರುತ್ತಿದ್ದಂತೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎನ್ನುತ್ತಾರೆ ಗಾರ್ಡನ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ದಾಸನೂರ. ಕಾಗಿನೆಲೆ ಹಾಗೂ ಬಾಡದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಥರ್ಮಲ್ ಸ್ಕ್ರೀನಿಂಗ್ ಯಂತ್ರ ಸಹ ತರಿಸಿಕೊಳ್ಳಲಾಗುತ್ತಿದ್ದು ಜಿಲ್ಲಾಡಳಿತದ ಆದೇಶ ಬರುತ್ತಿದ್ದಂತೆ ಜೂ. 9ರ ಬಳಿಕ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ತಿಳಿಸಿದ್ದಾರೆ.
ಜೂ. 8 ರಿಂದ ಭಕ್ತರ ದರ್ಶನಕ್ಕಾಗಿ ಸ್ವಚ್ಛತೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳ ಪಾಲನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿಶೇಷ ಪೂಜೆ, ತೀರ್ಥ, ಪ್ರಸಾದ ವಿತರಣೆ ಇರುವುದಿಲ್ಲ. ಕೇವಲ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡುವಂತೆ ತಹಶೀಲ್ದಾರ್‌ರಿಂದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದೇವೆ. –
ಡಿ.ಸಿ. ಕುಲಕರ್ಣಿ, ಅಧ್ಯಕ್ಷರು, ಕದರಮಂಡಲಗಿ ಆಂಜನೇಯ ದೇವಸ್ಥಾನ ಕದರಮಂಡಲಗಿ ದೇವಸ್ಥಾನ ಸಮಿತಿ.