Advertisement

ಜಗಳೂರು ತಾಲೂಕಲ್ಲಿ ಕೊಳವೆಬಾವಿ ಕೊರೆಸಲು ಅನುಮತಿ ಕಡ್ಡಾಯ

12:24 PM Apr 29, 2017 | |

ದಾವಣಗೆರೆ: ಇನ್ನು ಮುಂದೆ ಜಗಳೂರು ತಾಲೂಕಿನಲ್ಲಿ ಕೊಳವೆ ಬಾವಿ ಕೊರೆಯಿಸಲು ಸಂಬಂಧಿತ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದರು. ಜಗಳೂರು ತಾಲೂಕಿನಾದ್ಯಂತ ಅಂತರ್ಜಲ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಇದೆ.

Advertisement

ಮೇಲಾಗಿ ಆ ಪ್ರದೇಶ ಗಟ್ಟಿ ಪ್ರದೇಶ ಅಲ್ಲ. ಹಾಗಾಗಿ ಕೊಳವೆಬಾವಿ ಕೊರೆಯಿಸಲು ಅನುಮತಿ ಪಡೆಯುವುದ ಕಡ್ಡಾಯ ಮಾಡಲಾಗಿದೆ. ಅಂತರ್ಜಲ ನೀರು ಪ್ರಾಧಿಕಾರದ ಜಿಲ್ಲಾ ಸಮಿತಿಯಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆದ ನಂತರವೇ ಕೊಳವೆಬಾವಿ ಕೊರೆಸಬೇಕು. ಜಗಳೂರು ತಾಲೂಕು ಹೊರತುಪಡಿಸಿ ಇತರೆ ತಾಲೂಕಿನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಈಚೆಗೆ ಬೆಳಗಾವಿ ಜಿಲ್ಲೆಯ ಝುಂಜರವಾಡದಲ್ಲಿ ಸಂಭವಿಸಿದ ಕೊಳವೆ ಬಾವಿ ದುರಂತದ ಹಿನ್ನೆಲೆಯಲ್ಲಿ ವಿಫಲಗೊಂಡ ಕೊಳವೆಬಾವಿ ಸರಿಯಾಗಿ ಮುಚ್ಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಿಫಲ ಕೊಳವೆಬಾವಿ ಮುಚ್ಚದಿದ್ದಲ್ಲಿ ಆ ಕೊಳವೆಬಾವಿ ಮಾಲೀಕರು ಮತ್ತು ಬೋರ್‌ವೆಲ್‌ ಏಜೆನ್ಸಿಯವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಕೊಳವೆಬಾವಿ ಕೊರೆಸಿದಾಗ ವಿಫಲಗೊಂಡಲ್ಲಿ ಮುಚ್ಚಲು  ಸಾಧ್ಯವಾಗುತ್ತದೆ. ಕೊಳವೆಬಾವಿ ಕೊರೆಸಿ, ಎಷ್ಟೋ ವರ್ಷದ ನಂತರ ವಿಫಲವಾದಲ್ಲಿ ಸಂಬಂಧಿತ ಜಮೀನು, ತೋಟದ ಮಾಲಿಕರದ್ದೇ ಮುಚ್ಚಿಸುವ ಜವಾಬ್ದಾರಿ. ಕೊಳವೆ ಬಾವಿ ವಿಫಲಗೊಂಡಿದ್ದರೂ ಕೇಸಿಂಗ್‌ ಪೈಪ್‌ ಇದ್ದಲ್ಲಿ ತೊಂದರೆ ಆಗುವುದಿಲ್ಲ.

ಕೇಸಿಂಗ್‌ ಪೈಪ್‌ ತೆಗೆದ ನಂತರ ಸರಿಯಾದ ಕ್ರಮದಲ್ಲಿ ಮುಚ್ಚದಿದ್ದಲ್ಲಿ ತೊಂದರೆ ಆಗುತ್ತದೆ. ವಿಫಲ ಕೊಳವೆ ಬಾವಿ ಸರಿಯಾಗಿ ಮುಚ್ಚುವ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 30 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ, 51 ಗ್ರಾಮದಲ್ಲಿ ಖಾಸಗಿಯವರ ಕೊಳವೆಬಾವಿ ಬಾಡಿಗೆಗೆ ಪಡೆದು, ನೀರು ಪೂರೈಸಲಾಗುತ್ತಿದೆ.

Advertisement

ಸಮಸ್ಯೆ ಇರುವ ಕಡೆ ನೀರು ಪೂರೈಕೆ ಬಗ್ಗೆ ನಿಗಾ ವಹಿಸಲು ಹೊಸ ಆ್ಯಪ್‌ ಸಿದ್ಧಪಡಿಸಲಾಗಿದೆ. ಟ್ಯಾಂಕರ್‌ಗಳಿಗೆ ಅಳವಡಿಸಿರುವ ಜಿಪಿಎಸ್‌ ಮೂಲಕ ಯಾವಾಗ, ಯಾವ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದಾವಣಗೆರೆ ನಗರದಲ್ಲಿ 26 ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ಖಾಸಗಿಯವರು ಅತಿ ಹೆಚ್ಚಿನ ದರಕ್ಕೆ ನೀರು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್‌ಗಳಿಗೆ ದರ ನಿಗದಿ ಮಾಡುವಂತೆ  ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಟ್ಯಾಂಕರ್‌ಗೆ ಇಂತಿಷ್ಟು ಎಂದು ದರ ನಿಗದಿಪಡಿಸುವುದರಿಂದ ಜನರಿಂದ ಹೆಚ್ಚಿನ ಹಣ ಕೇಳುವುದು ತಪ್ಪಿದಂತಾಗುತ್ತದೆ.

ದರ ನಿಗದಿ ಮಾಡಿದ ನಂತರವೂ ಹೆಚ್ಚಿನ ಹಣ ಕೇಳಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಕುಂದುವಾಡ ಕೆರೆಯ ಪಂಪ್‌ಹೌಸ್‌ ನಿಂದ ಸೀಮೆಎಣ್ಣೆ ಸಾಗಿಸುವ ಟ್ಯಾಂಕರ್‌ ಮೂಲಕ ನೀರು ಕೊಂಡೊಯ್ಯಲಾಗುತ್ತಿದೆ ಎಂಬ ವಿಷಯ ಮಾಧ್ಯಮದವರ ಮೂಲಕ ಗೊತ್ತಾಗಿದೆ.

ಟ್ಯಾಂಕರ್‌ ಬಿಟ್ಟು ಬೇರೆಯವರಿಗೆ ನೀರು ಸಾಗಿಸಲು ಅವಕಾಶ ಇಲ್ಲ. ಸೀಮೆಎಣ್ಣೆ ಟ್ಯಾಂಕರ್‌ನಲ್ಲಿ ನೀರು ಸಾಗಾಣಿಕೆ ಮಾಡುತ್ತಿರುವರ  ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸುದ್ದಿಗೋಷ್ಠಿಯಲ್ಲಿದ್ದ ಮಹಾನಗರಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ ಅವರಿಗೆ ಸೂಚಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next