ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಯಾವುದೇ ರೀತಿಯ ಕೊಳವೆ ಬಾವಿ ಕೊರೆಯುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದೇ ಕೊಳವೆಬಾವಿ ಕೊರೆಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೀವ ಹಾನಿ ಆಗದಂತೆ ಅಗತ್ಯ ಇರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿವಕುಮಾರ ತಾಕೀತು ಮಾಡಿದ್ದಾರೆ.
ಗುರುವಾರ ನಗರದ ಜಿ.ಪಂ. ಸಭಾಂಗಣದಲ್ಲಿ ಜರುಗಿದ ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಕೃಷ್ಣಾ ಭಾಗ್ಯ ಜಲನಿಗಮ ಹಾಗೂ ವಿವಿಧ ನಿಗಮಗಳು ಮತ್ತು ಕೊಳವೆ ಬಾವಿ ಕೊರೆಸುವ ಯಂತ್ರಗಳ ಮಾಲೀಕರ ಸಭೆಯಲ್ಲಿ ಅವರು ಹಲವು ಸಲಹೆ ಸೂಚನೆ ನೀಡಿದರು. ಅನುಮತಿ ಇಲ್ಲದೇ ಕೊಳವೆ ಬಾವಿ ಕೊರೆದಲ್ಲಿ ಕೊಳವೆಬಾವಿ ಕೊರೆಯುವ ಯಂತ್ರವನ್ನು ಶಾಶ್ವತವಾಗಿ ಜಫ್ತಿ ಮಾಡುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿ ತಿಂಗಳು ಕೊರೆಸಿದ ಕೊಳವೆ ಬಾವಿಗಳ ಕುರಿತು ಆಯಾ ಗ್ರಾ.ಪಂ. ಪಿಡಿಒಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ನೋಡಲ್ ಅಧಿಕಾರಿಯಾಗಿರುವ ತಾ.ಪಂ. ಇ.ಒ ಅವಬರಿಗೆ ವರದಿ ನೀಡಬೇಕು. ಪ್ರತಿಯೊಂದು ಕೊಳವೆ ಬಾವಿ ಕುರಿತು ಸೂಕ್ತ ದಾಖಲೆ ಹಾಗೂ ಛಾಯಾಚಿತ್ರಸಹಿತ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಹೊರ ರಾಜ್ಯದಿಂದ ಆಗಮಿಸುವ ಕೊಳವೆ ಬಾವಿ ಕೊರೆಯುವ ಯಂತ್ರದ ಮಾಲೀಕರೂ ನೋಂದಣಿ ಮಾಡಿಸಿಕೊಂಡು, ಕೊಳವೆ ಬಾವಿ ಕೊರೆಯಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪರವಾನಗಿ ಇಲ್ಲದೇ ಜಿಲ್ಲೆಗೆ ಅನಧಿಕೃತವಾಗಿ ಪ್ರವೇಶ ಬೋರ್‌ವೆಲ್ ವಾಹನಗಳ ಮೇಲೆ ನಿಗಾ ಇಡಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ 6 ಚೆಕ್‌ಪೋಸ್ಟ್ ನಿಯಂತ್ರಿಸುವಂತೆ ಸೂಚಿಸಿದರು. ಕೊಳವೆ ಬಾವಿ ಕೊರೆಸುವ ಕುರಿತಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಹಾಯಕ ಅಭಿಯಂತರರು, ಪಿಡಿಒಗಳು ತಪ್ಪದೇ ಅನುಮತಿ ಪಡೆಯಬೇಕು. ನಿರ್ಲಕ್ಷ್ಯ ತೋರಿದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.
ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಸುವ ಹಾಗೂ ವಿಫಲ ಕೊಳವೆ ಬಾವಿಗಳಿಂದ ಜೀವ ಜಹಜಾನಿ ತಡೆಯುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿದ್ದುಕೊಂಡು, ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕು. ಕುಂದು-ಕೊರತೆಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 08352-277941ಗೆ ಸಂಪರ್ಕಿಸಿ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು. ಜಿ.ಪಂ. ಸಿಇಒ ಎಂ. ಸುಂದರೇಶಬಾಬು ಮಾತನಾಡಿ, ಕೊಳವೆ ಬಾವಿ ಕೊರೆಯಿಸುವ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ರಿಂಗ್ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸಿ ಕೊಳವೆ ಬಾವಿ ಕೊರೆಸುವ ಅನುಮತಿ ಮತ್ತು ಸಮರ್ಪಕ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು.
ಮಾಹೆಯಾನ ವರ್ಷವಾರು, ಪ್ರಗತಿ ಮಾಹಿತಿಯನ್ನು ಸಂಗ್ರಹಿಸಿ ಸಲ್ಲಿಸಲು ತಿಳಿಸಿದ ಅವರು, ಎಲ್ಲ ಪಿಡಿಒಗಳು ಈ ವಿಷಯದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖಾಧಿಕಾರಿಗಳು, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ವಿವಿಧ ರಿಂಗ್ ಮಾಲೀಕರು ಇತರೆ ಅಧಿಕಾರಿಗಳು ಇದ್ದರು
ಕೊಳವೆ ಬಾವಿ ಕೊರೆಸುವ ಮುನ್ನ ಹಾಗೂ ಕೊರೆಸಿದ ನಂತರ ಸರ್ವೋತ್ಛ ನ್ಯಾಯಾಲಯ, ಸರ್ಕಾರದ ಮಾರ್ಗಸೂಚಿಯಂತೆ ನಿಯಮ ಪಾಲನೆ ಕಡ್ಡಾಯ. ಕೊಳವೆ ಬಾವಿ ಕೊರೆಯುವ ಮುನ್ನ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕೊಳವೆ ಬಾವಿಗೆ ಅನುಮತಿ ನೀಡಿದ ಬಳಿಕ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು.
ಕೊಳವೆ ಬಾವಿ ಕೊರೆದ ನಂತರ ಕೇಸಿಂಗ್ ಪೈಪ್ ಅಳವಡಿಸಿ, ಮುಚ್ಚಳಿಕೆ ಅಳವಡಿಸಬೇಕು. ಕೊಳವೆ ಬಾವಿ ವಿಫವಾಗಿದೆ ಎಂದು ಕೇಸಿಂಗ್ ಪೈಪ್ ತೆಗೆದು, ವಿಫಲ ಕೊಳವೆ ಬಾವಿಯನ್ನು ಮುಚ್ಚದೇ ಬಿಡುವಂತಿಲ್ಲ. ತಪ್ಪಿದ್ದಲ್ಲಿ ಆಯಾ ಬೋರ್‌ವೆಲ್ ಯಂತ್ರದ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಿ, ಪ್ರಕರಣ ದಾಖಲಿಸುವಾಗಿ ಜಿಲ್ಲಾಧಿಕಾರಿ ಎಚ್ಚರಿಸಿದರು.