Advertisement

21ರಿಂದ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ?

04:56 PM Sep 05, 2020 | Suhan S |

ಕಾರವಾರ: ಜಿಲ್ಲೆಯಲ್ಲಿ ಷರತ್ತುಬದ್ದ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿಸಲು ಸಂಬಂಧಿತ ಇಲಾಖೆಗಳಿಗೆ ಸೂಚನೆ ನೀಡಿದೆ. ಜಿಲ್ಲಾಡಳಿತವೂ ಮರಳು ಗಣಿಗಾರಿಕೆಗೆ ನಿಯಮಾನುಸಾರ ಅನುಮತಿ ನೀಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯುವುದನ್ನು ಪುನಾರಂಭಿಸುವ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ 12 ಮಾರ್ಚ 2020ರಂದು ನೀಡಿರುವ ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರದ ಷರತ್ತಿನಂತೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಮಳೆಗಾಲದ ಅವಧಿಯಲ್ಲಿ ನಿಷೇಧವಿತ್ತು. ಮುಂಗಾರು ಮಳೆಯ ಸಮಯದಲ್ಲಿ ಮೀನು ಮತ್ತು ಇತರೆ ಜಲಚರಗಳು ಮೊಟ್ಟೆ ಇಡುವ ಹಾಗೂ ಸಂತಾನೋತ್ಪತ್ತಿ ಸಮಯವಾದ್ದರಿಂದ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ನದಿಪಾತ್ರಗಳಲ್ಲಿ ಮರಳು  ದಿಬ್ಬಗಳಿಂದ ಮರಳನ್ನು ತೆಗೆಯುವಿಕೆ ಮತ್ತು ಸಾಗಾಣಿಕೆಯನ್ನು 8 ಜೂನ್‌ 2020ರಿಂದ ಸ್ಥಗಿತಗೊಳಿಸಲಾಗಿತ್ತು. ಈಗ ಮಳೆ ಇಳಿಮುಖವಾಗಿದ್ದು, ಇದೇ ತಿಂಗಳಲ್ಲಿ ಮರಳುಗಾರಿಕೆ ಪ್ರಾರಂಭದ ಸುಳಿವನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಪ್ರಸ್ತುತ ಮುಂಗಾರು ಮಳೆ ಕ್ಷೀಣಿಸುತ್ತಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಜನಸಾಮಾನ್ಯರ ಮನೆ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಅವಶ್ಯಕತೆ ಇದ್ದುದರಿಂದ ಸೆ. 21ರಿಂದ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಪದ್ದತಿಯಲ್ಲಿ ಮರಳು ತೆರವುಗೊಳಿಸುವುದನ್ನು ಪ್ರಾರಂಭಿಸುವಲ್ಲಿ ಅನುಮತಿ ನೀಡಲು ಸಿದ್ಧತೆ ಮಾಡಿಕೊಳ್ಳಲು ಗಣಿ ಮತ್ತು ವಿಜ್ಞಾನ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

2020-21ನೇ ಸಾಲಿನಲ್ಲಿ ತಾತ್ಕಾಲಿಕ ಮರಳು ಪರವಾನಗಿ ಕೋರಿ ಅನೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ನ್ಯಾಯಲುತವಾಗಿ ಇತ್ಯರ್ಥ ಪಡಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಪರ ಜಿಲ್ಲಾಧಿಕಾರಿ, ಪರಿಸರ ಅಧಿಕಾರಿ, ಸಂಬಂಧಿಸಿದ ಉಪವಿಭಾಗಾಧಿಕಾರಿಗಳು ಹಾಗೂ ಗಣಿ ಇಲಾಖೆಯ ಉಪ ನಿರ್ದೇಶಕರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದೆ. ಸ್ವೀಕೃತವಾಗಿರುವ ಎಲ್ಲ ಅರ್ಜಿಗಳ ಕುರಿತು ಈ ಉಪ ಸಮಿತಿಯ ವರದಿ ಬಂದ ನಂತರ ಕಾನೂನಾತ್ಮಕವಾಗಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಪಂ ಸಿಇಒ ಮೊಹಮ್ಮದ ರೋಷನ್‌, ಎಸ್ಪಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್‌. ಕೆ., ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ, ಪರಿಸರ ಅಧಿಕಾರಿ ಪ್ರಸನ್ನ ಪಟಗಾರ, ಗಣಿ ಇಲಾಖೆ ಉಪ ನಿರ್ದೇಶಕ ಸೋಮಶೇಖರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next