ಹಾವೇರಿ: ನಗರ ಹೊರವಲಯದಲ್ಲಿ ಕಬ್ಬಿಣ, ಸಿಮೆಂಟ್ ಅಂಗಡಿ, ಮೊಬೈಲ್ ಶಾಪ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಯಾವುದೇ ಜನದಟ್ಟಣೆ ಇಲ್ಲದಂತೆ ಹೊರವಲಯದ ಅಂಗಡಿಗಳನ್ನು ತೆರೆಯಲು ಸ್ಥಳೀಯವಾಗಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅಧಿ ಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ತಹಶೀಲ್ದಾರರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ತರಕಾರಿ, ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಮಾರ್ಗಸೂಚಿಯಂತೆ ಉಳಿದ ಅಂಗಡಿಗಳಿಗೆ ಸಮಯ ನಿಗದಿಪಡಿಸುವ ಕುರಿತಂತೆ ತಹಶೀಲ್ದಾರರ ತಮ್ಮ ಹಂತದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಮಾಸ್ಕ್ ಹಾಗೂ ಸುರಕ್ಷತಾ ಕ್ರಮಗಳ ಅನುಷ್ಠಾನ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿರಂತರವಾಗಿ ನಿಗಾ ವಹಿಸುವಂತೆ ಸೂಚನೆ ನೀಡಿದರು.
ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ ಹಾಗೂ ವೈದ್ಯಕೀಯ ವೃತ್ತಿನಿರತರಲ್ಲಿ ಜ್ವರ, ಗಂಟಲು ನೋವು, ಕೆಮ್ಮು, ಸೀನು ಸೋಂಕು ಕುರಿತಂತೆ ಚಿಕಿತ್ಸೆ ಪಡೆದುಕೊಂಡವರ ಮಾಹಿತಿ ಪಡೆದು ಪ್ರತಿದಿನ ಕಳುಹಿಸಬೇಕು. ತುರ್ತು ಆರೋಗ್ಯ ತಪಾಸಣೆ ವರದಿ ಹಾಗೂ ಮನೆ ಮನೆ ಆರೋಗ್ಯ ತಪಾಸಣೆ ಮಾಹಿತಿಯನ್ನು ತ್ವರಿತವಾಗಿ ಕಳುಹಿಸಿಕೊಡುವಂತೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಾತನಾಡಿ, ವಲಸೆ ಕಾರ್ಮಿಕರನ್ನು ಮರಳ ಸ್ವಸ್ಥಳಕ್ಕೆ ಕಳಿಸುವ ಮುನ್ನ ಬಸ್ಸನ್ನು ಸ್ಥಳೀಯ ಸಂಸ್ಥೆಗಳಿಂದ ಸ್ವಚ್ಛಗೊಳಿಸಬೇಕು. ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಕಡ್ಡಾಯವಾಗಿ ಸ್ಯಾನಿಟೈಸರ್, ಮಾಸ್ಕ್, ಆಹಾರ ಪೊಟ್ಟಣ ನೀಡಬೇಕು. ಚಾಲಕರ ಜೊತೆಗೆ ಕಡ್ಡಾಯವಾಗಿ ಎರಡು ಜನ ಗ್ರಾಮ ಲೆಕ್ಕಾ ಧಿಕಾರಿಗಳನ್ನು ಕಳುಹಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲಾಮಟ್ಟದ ವಿವಿಧ ಇಲಾಖಾ ಅಧಿಕಾರಿಗಳಿದ್ದರು.