Advertisement

ಡ್ರೋನ್ ನಿಂದ ಕೀಟನಾಶಕ ಸಿಂಪಡಣೆಗೆ ಅನುಮತಿ: ಕೇಂದ್ರ ಸಚಿವ ಖೂಬಾ

07:33 PM Dec 25, 2021 | Team Udayavani |

ಬೀದರ್ : ಕೃಷಿ ಭೂಮಿಗಳಲ್ಲಿ ಕೀಟನಾಶಕ ಮತ್ತು ರಸಗೊಬ್ಬರ ಸಿಂಪಡಣೆಗಾಗಿ ಡ್ರೋನ್ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

Advertisement

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 97 ನೇ ಜನ್ಮ ದಿನದ ಪ್ರಯುಕ್ತ ರಾಯಚೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಧನುಕಾ ಅಗ್ರಿಟೆಕ್ ಲಿಮಿಟೆಡ್ ವತಿಯಿಂದ ನಗರದ ಘಾಳೆ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿಯಲ್ಲಿ ನೂತನ ತಾಂತ್ರಿಕ ಪ್ರಗತಿಗಳು ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಡ್ರೋನ್‌ನ್ನು ಕೃಷಿ ಕ್ಷೇತ್ರದಲ್ಲಿ ಈ ಹಿಂದೆ ಬಳಸಲು ರೈತರಿಗೆ ಅನುಮತಿ ಇರಲಿಲ್ಲ. ಆದರೆ ಕೃಷಿ ಕ್ಷೇತ್ರದಲ್ಲಿನ ಕಾರ್ಮಿಕರ ಸಮಸ್ಯೆ ಹಾಗೂ ಖರ್ಚಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕೀಟನಾಶಕ ಮತ್ತು ಗೊಬ್ಬರ ಸಿಂಪಡಣೆಗಾಗಿ ಡ್ರೋನ್ ಬಳಕೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಪ್ರತಿ ಹಳ್ಳಿಗಳಲ್ಲಿ ಕನಿಷ್ಠ 5 ವಿದ್ಯಾವಂತ ಯುವಕರು ಡ್ರೋನ್ ಮೂಲಕ ಗೊಬ್ಬರ, ಕೀಟನಾಶಕ ಸಿಂಪಡಣೆ ಮಾಡಿ ಮಾದರಿಯಾಗಬೇಕು. ಡ್ರೋನ್‌ಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂಬರುವ ಕೇಂದ್ರದ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸುವ ಚಿಂತನೆ ನಡೆದಿದೆ ಎಂದು ಸಲಹೆ ನೀಡಿದ ಸಚಿವ ಖೂಬಾ, ಸರ್ಕಾರ ನೀಡುವ ವಿದ್ಯುತ್ ಮೇಲೆ ಅವಲಂಬಿತರಾಗಿರದೆ ರೈತರು ಸ್ವಯಂ ಆಗಿ ಸೋಲಾರ್ ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬೇಕು. ಈ ನಿಟ್ಟಿನಲ್ಲಿ ಸೋಲಾರ್‌ಗಾಗಿ ಸರ್ಕಾರ ವಿವಿಧ ಸೌಲಭ್ಯ ಒದಗಿಸಿದೆ ಎಂದು ಹೇಳಿದರು.

ರೈತರು ಕೇವಲ ಕೃಷಿಕನಾಗಿ ವಿಚಾರ ಮಾಡಬಾರದು. ಕೈಗಾರಿಕೋದ್ಯಮಿ, ವ್ಯಾಪಾರಿ ದೃಷ್ಟಿಯಿಂದ ಚಿಂತನೆ ಮಾಡಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ತರುವ ಹೊಸ ಹೊಸ ತಂತ್ರಜ್ಞಾನ, ವಿಧಾನ ಬಳಸಿಕೊಂಡಾಗ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯ ಎಂದು ತಿಳಿಸಿದರು.

Advertisement

ಶೇ. 30ರಷ್ಟು ಕೇಂದ್ರ ಸರ್ಕಾರ ಮತ್ತು ಶೇ. 30ರಷ್ಟು ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತಿದ್ದು, ಇನ್ನುಳಿದ ಶೇ.40ರಷ್ಟು ರೈತರು ಭರಿಸಿ ಸೋಲಾರ್ ಅಳವಡಿಸಿಕೊಳ್ಳಬೇಕು. ಸೋಲಾರ್‌ಗಾಗಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ರೈತರು ತಮಗೆ ಬೇಕಾದ ವಿದ್ಯುತ್ ಬಳಸಿಕೊಂಡು, ಉಳಿದ ವಿದ್ಯುತ್ ಸರ್ಕಾರಕ್ಕೆ ಮಾರಾಟ ಮಾಡಬಹುದು. ಜಿಲ್ಲೆಯಲ್ಲಿ ಶೀಘ್ರ ಸೋಲಾರ್ ಅಳವಡಿಕೆಗಾಗಿ ಸಾಲ ಮೇಳ ಆಯೋಜನೆ ಮಾಡಲಾಗುವುದು ಎಂದರು.

ಧನುಕಾ ಗ್ರೂಪ್ ಅಧ್ಯಕ್ಷ ಆರ್.ಜಿ. ಅಗ್ರವಾಲ್, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಡಾ.ಕೆ.ಎನ್. ಕಟ್ಟಿಮನಿ, ಸತ್ಯಭೂಷಣ ಜೈನ್, ಅಭಿಷೇಕ ಧನುಕಾ, ಡಾ.ಡಿ.ಕೆ. ದೇಸಾಯಿ, ಡಾ. ಅರುಣಕುಮಾರ ಹೊಸಮನಿ, ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಇತರರಿದ್ದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಡಾ.ಎಂ.ಎ. ಖಾದ್ರಿ, ಗುರುಲಿಂಗಪ್ಪ ಮೇಲ್ದೊಡ್ಡಿ, ಸೂರಜಸಿಂಗ್ ರಜಪುತ್, ಅಭಿಮನ್ಯು ನಿರಗುಡೆ, ಚೇತನ್ ದಬಾಕೆ, ಶಾಹಾಜಿ ಬಿರಾದಾರ ಇತರರನ್ನು ಸನ್ಮಾನಿಸಲಾಯಿತು. ಕೆ.ಎಸ್. ಭರತ್ ಸ್ವಾಗತಿಸಿ ಮಂಗಲಾ ಭಾಗವತ್ ನಿರೂಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next