ಕಾರವಾರ: ಕಲ್ಲುಕ್ವಾರಿ ಮಾಡುವವರಿಗೆ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಬಳಿ ಬ್ಲಾಸ್ಟಿಂಗ್ ಗೆ ಅನುಮತಿ ಪಡೆಯಲೇ ಬೇಕು. ಒಂದೊಮ್ಮೆ ಅನುಮತಿ ಪಡೆಯದೇ ಗಣಿಗಾರಿಕೆ ನಡೆಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಧಿಕಾರಿ ಡಾ| ಹರೀಶ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅನುಮತಿಯಿಲ್ಲ, ಒಂದೊಮ್ಮೆ ಅಕ್ರಮ ಗಣಿಗಾರಿಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಜಿಲೇಟಿನ್ ಸ್ಪೋಟದ ನಂತರ ಜಿಲ್ಲೆಯಲ್ಲೂ ಗಣಿಗಾರಿಕೆ ಮೇಲೆ ಕಣ್ಣಿಡಲಾಗಿದೆ. ಈಗಾಗಲೇ ಅಧಿಕಾರಿಗಳ ತಂಡ ರಚಿಸಿದ್ದು, ಎಲ್ಲಾ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿನೀಡಿ ಅನುಮತಿಯನ್ನ ಮತ್ತೂಮ್ಮೆ ಪರಿಶೀಲಿಸಲಾಗುವುದು. ಎಲ್ಲೇ ಗಣಿಗಾರಿಕೆ ಮಾಡುವ ಸ್ಥಳದಲ್ಲಿ ಜಿಲ್ಲಾಧಿಕಾರಿಗಳಿಂದ ಬ್ಲಾಸ್ಟಿಂಗ್ ಅನುಮತಿ ಪಡೆಯಲೇ ಬೇಕು. ಬ್ಲಾಸ್ಟಿಂಗ್ ಅನುಮತಿ ಪಡೆದ ನಂತರವೂ ಸ್ಫೋಟವನ್ನು ಪರಿಣಿತ ತಂಡದಿಂದಲೇ ಮಾಡಿಸಬೇಕು. ಕೆಲವರು ಅನುಭವ ಇಲ್ಲದೇ ಕೆಲವರನ್ನ ಬಳಸಿಕೊಂಡು ಸ್ಫೋಟ ಮಾಡುವ ಬಗ್ಗೆ ತಿಳಿದಿದ್ದು ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಪೊಲೀಸರ ತಂಡವನ್ನ ಸಹ ಅಕ್ರಮ ಗಣಿಗಾರಿಕೆ ತಡೆಯಲು ಮಾಡಿದ್ದು, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಜಿಲ್ಲಾಡಳಿತ ಹದ್ದಿನ ಕಣ್ಣನ್ನ ಇಟ್ಟಿದೆ ಎಂದಿದ್ದಾರೆ.
ಪ್ರವಾಸಿಗರನ್ನು ರಕ್ಷಿಸಿ: ಜಿಲ್ಲೆಯ ಕಡಲ ತೀರದಲ್ಲಿ ಈಗಾಗಲೇ ಪ್ರವಾಸಿಗರ ರಕ್ಷಣೆಗೆ ಲೈಫ್ ಗಾರ್ಡ್‌ಗಳನ್ನ ನೇಮಿಸಲಾಗಿದೆ. ಸುರಕ್ಷಿತವಲ್ಲದ ಪ್ರದೇಶದಲ್ಲಿ ಸೂಚನಾ ಫಲಕಗಳನ್ನ ಸಹ ಹಾಕಲಾಗಿದೆ. ಇಷ್ಟಾದರು ಕೆಲವರು ಅತಿರೇಕ ವರ್ತನೆ ತೋರಿ ಸಮುದ್ರದಲ್ಲಿ ಮುಂದೆ ಸಾಗಿ ಈಜಲು ಹೋಗಿ ಅವಘಡಕ್ಕೆ ಸಿಲುಕುತ್ತಾರೆ. ಮುಂದಿನ ದಿನದಲ್ಲಿ ಲೈಫ್‌ಗಾರ್ಡ್‌ಗಳು ಮುಳುಗುತ್ತಿದ್ದ ಪ್ರವಾಸಿಗರನ್ನ ರಕ್ಷಣೆ ಮಾಡಿ ನಂತರ ವಿಷಯವನ್ನ ಪೊಲೀಸರ ಗಮನಕ್ಕೆ ತರುತ್ತಾರೆ. ಪೊಲೀಸರು ಅಂತವರ ಮೇಲೆ ಪ್ರಕರಣ ದಾಖಲಿಸುವ ಚಿಂತನೆ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕಡಲತೀರದಲ್ಲಿ ಯಾವುದೇ ಅವಘಡ ಆದರು ಪ್ರವಾಸಿಗರ ನಿರ್ಲಕ್ಷವೇ ಪ್ರಮುಖ ಕಾರಣ, ಆಳವಾದ ಪ್ರದೇಶಕ್ಕೆ ಹೋಗದೇ ದಡದಲ್ಲಿ ಆಟವಾಡಿ ತೆರಳಿದರೆ ಯಾವ ಅನಾಹುತ ಆಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಮುಂದಿನ ದಿನದಲ್ಲಿ ಕೇಸ್ ದಾಖಲು ಮಾಡುವ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ: ಜೂನ್ 14ರಿಂದ ಪರೀಕ್ಷೆ ಆರಂಭ
ಹೋಂ ಸ್ಟೇ ವಿರುದ್ಧ ಕ್ರಮ: ಜಿಲ್ಲೆಯಲ್ಲಿ ಈಗಾಗಲೇ ಹೋಂ ಸ್ಟೇಗಳ ಸಂಖ್ಯೆ ಅಧಿಕವಾಗಿದೆ ಎನ್ನುವ ದೂರು ಕೇಳಿ ಬಂದಿದೆ. ಹೋಂ ಸ್ಟೇ ಅಂದರೆ ಆ ಹೋಂ ಸ್ಟೇನಲ್ಲಿ ಮನೆಯ ಮಾಲಿಕರುತಂಗಬೇಕು ಎನ್ನುವ ಆದೇಶವಿದೆ. ಆದರೆ ಕೆಲವರು ಹೋಂ ಸ್ಟೇ ಎಂದು ಅನುಮತಿ ಪಡೆದು ರೆಸಾರ್ಟ್‌ಗಳನ್ನ ಮಾಡಿಕೊಂಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು
ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತೆರಿಗೆ ವಂಚನೆ ಮಾಡಲು ರೆಸಾರ್ಟ್ ಎಂದು ಅನುಮತಿ ಪಡೆಯದೇ ಹೋಂಸ್ಟೇಗಳೆಂದು ಅನುಮತಿ ಪಡೆದು ರೆಸಾರ್ಟ್ ನಡೆಸುತ್ತಾರೆ. ಇಂತಹ ಸ್ಥಳದಲ್ಲಿ ಪ್ರವಾಸಿಗರ ಸುರಕ್ಷತೆ ಸಹ ಇರುವುದಿಲ್ಲ. ಈ ಕೂಡಲೇ ಮಾಲಿಕರು ಇರದ ಹೋಂ ಸ್ಟೇಗಳು ರೆಸಾರ್ಟ್‌ಗಳೆಂದು ಅನುಮತಿ ಪಡೆದುಕೊಳ್ಳಲಿ. ಇಲ್ಲವಾದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.