Advertisement

ಆರ್ಥಿಕ ಚಟುವಟಿಕೆಗೆ ಅನುಮತಿ

06:46 PM May 01, 2020 | Suhan S |

ಹಾವೇರಿ: ಹಸಿರು ವಲಯದ ಜಿಲ್ಲೆಯಲ್ಲಿ ಆಯ್ದ ಆರ್ಥಿಕ ಚಟವಟಿಕೆಗೆ ಅನುಮತಿ ನೀಡಲಾಗಿದೆ. ವಿವಿಧ 18 ಬಗೆಯ ವ್ಯವಹಾರ ಹಾಗೂ ಸೇವೆಗಳಿಗೆ ನಿರ್ಬಂಧ ಮುಂದುವರೆದಿದೆ. ನಿಯಮ ಮೀರಿದರೆ ಅಂಗಡಿಗಳ ಪರವಾನಗಿ ರದ್ದು ಪಡಿಸುವುದಾಗಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಎಚ್ಚರಿಸಿದ್ದಾರೆ.

Advertisement

ಅವಕಾಶವಿಲ್ಲ: ಕ್ಷೌರಿಕ ಅಂಗಡಿಗಳು, ಬ್ಯೂಟಿ ಪಾರ್ಲರಗಳು, ಹೋಟೆಲ್‌, ಢಾಬಾ, ಸಿನಿಮಾ ಥೇಟರ್‌ಗಳು, ಮನರಂಜನಾ ಸ್ಥಳಗಳು, ಅಂತರ್‌ ಜಿಲ್ಲಾ ಮಾನವ ಸಾಗಾಣಿಕೆ, ಬಸ್‌, ಆಟೋ, ಟ್ಯಾಕ್ಸಿ, ಕ್ಯಾಬ್‌ ಸೇವೆಗಳು, ಶೈಕ್ಷಣಿಕ ಸಂಸ್ಥೆಗಳು ಅಥವಾ ತರಬೇತಿ ಅಥವಾ ಕೋಚಿಂಗ್‌ ಕೇಂದ್ರಗಳು, ವ್ಯಾಯಾಮ ಶಾಲೆಗಳು, ಕ್ಲಬ್‌ಗಳು ಮತ್ತು ರೆಸಾರ್ಟ್‌ಗಳು, ಸ್ವಿಮಿಂಗ್‌ ಫೂಲ್‌, ಉದ್ಯಾನವನಗಳು, ಸಮುದಾಯ ಭವನಗಳು ಅಥವಾ ಆಡಿಟೋರಿಯಂ, ಸಂತೆ, ಜಾತ್ರೆ, ಧಾರ್ಮಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಮದುವೆ ಮತ್ತು ಸಾಮೂಹಿಕ ಸಮಾರಂಭಗಳು, ಗುಟಕಾ ಅಥವಾ ತಂಬಾಕು ಅಂಗಡಿಗಳು, ಲಾರ್ಡ್ ಗಳು, ಬೀದಿಬದಿ ಚಾಟ್ಸ್‌ ಮತ್ತು ಟೀ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ದೇವಸ್ಥಾನ ಅಥವಾ ಮಸೀದಿ ಅಥವಾ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಅಂಗಡಿಗಳನ್ನು, ಕಾರ್ಖಾನೆಗಳನ್ನು ರಾತ್ರಿ 9ರವರೆಗೆ ತೆರೆಯ ಬಹುದು ಎಂದು ಅವರು ತಿಳಿಸಿದ್ದಾರೆ.

ಬಟ್ಟೆ ಅಂಗಡಿ, ಸಿದ್ಧ ಉಡುಪು ಅಂಗಡಿ, ಚಿನ್ನ ಮತ್ತು ಬೆಳ್ಳಿ ಅಂಗಡಿಗಳ ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಕೇವಲ ಶೇ. 50ರಷ್ಟು ಕೆಲಸಗಾರರನ್ನು ಮಾತ್ರ ಬಳಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಅಂಗಡಿಗಳ ಮೇಲೆ ನಿಗಾವಹಿಸಲು ಪೌರಾಯುಕ್ತರು ಹಾಗೂ ನಗರಸಭೆ ಮುಖ್ಯಾಧಿಕಾರಿಗಳನ್ನು ನಿಯೋಜಿಸಿ ಪ್ರತಿದಿನ ವರದಿ ಮಾಡಲು ಸೂಚಿಸಿದ್ದಾರೆ.

ವಾಹನಗಳಿಗೆ ಷರತ್ತು: ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು, ನಾಲ್ಕು ಚಕ್ರಗಳ ವಾಹನಗಳಲ್ಲಿ ಚಾಲಕ ಮತ್ತು ಹಿಂದಿನ ಸೀಟ್‌ನಲ್ಲಿ ಒಬ್ಬ ಸಹ ಪ್ರಯಾಣಿಕ ಮಾತ್ರ ಸಂಚರಿಸಲು ಹಾಗೂ ಶವಸಂಸ್ಕಾರದ ಸಮಯದಲ್ಲಿ 20ಜನಕ್ಕಿಂತ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1976 ಕಲಂ 144ರಂತೆ ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಸಂಬಂಧಪಟ್ಟ ಠಾಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಲು ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next