ಮುಂಬಯಿ, ಜೂ. 23: ಕೊರೊನಾ ಮೂರನೇ ಅಲೆಯ ಭಯದ ನಡುವೆ ಈ ವರ್ಷ ಗಣೇಶ ಮಂಡಳಿಗಳು ಎಲ್ಲ ನಿರ್ಬಂಧಗಳನ್ನು ಪಾಲಿಸುವುದರೊಂದಿಗೆ ಎತ್ತರದ ವಿಗ್ರಹಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಸರಕಾರದ ನಿಯಮಗಳಲ್ಲಿನ ವಿಳಂಬದಿಂದಾಗಿ ವಿಗ್ರಹದ ಎತ್ತರಕ್ಕೆ ಸಂಬಂಧಿಸಿದಂತೆ ಮಂಡಳಿಗಳು ಮುಖ್ಯಮಂತ್ರಿ ಮತ್ತು ಇತರ ರಾಜಕೀಯ ಮುಖಂಡರೊಂದಿಗೆ ಪತ್ರ ವ್ಯವಹಾರವನ್ನು ಪ್ರಾರಂಭಿಸಿವೆ.
ಕಳೆದ ವರ್ಷ ನಾವು ನಿಯಮಗಳನ್ನು ಜಾರಿಗೊಳಿಸಿದ್ದೇವೆ. ಆದರೂ ಉತ್ಸವಕ್ಕೆ ಅನೇಕ ಸ್ಥಳಗಳಲ್ಲಿ ಅಡಚಣೆಯಾಯಿತು. ಆದರೆ ಈ ವರ್ಷ ಸರಕಾರವು ಮಂಡಳಿಗಳ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಂಡಳಿಗಳು ತಿಳಿಸಿವೆ. ವಿಗ್ರಹದ ಎತ್ತರವನ್ನು ಕಡಿಮೆ ಮಾಡುವುದು ಸೂಕ್ತವಲ್ಲ. ಒಂದು ವರ್ಷ ಎಲ್ಲರೂ ಸಹಕರಿಸಿದ್ದಾರೆ. ನಾವು ಜನರಿಗೆ ಆನ್‌ಲೈನ್ ಮೂಲಕ ದರ್ಶನಕ್ಕೆ ಅನುವು ಮಾಡಿಕೊಡುತ್ತೇವೆ.
ಆಗಮನ ಹಾಗೂ ವಿಸರ್ಜನ ಸಂದರ್ಭ ಆಯ್ದ ಜನರು ಮಾತ್ರ ಇರುತ್ತಾರೆ. ಪೊಲೀಸ್ ಆಡಳಿತದೊಂದಿಗೆ ಸಂಪೂರ್ಣವಾಗಿ ಸಹಕರಿಸಲು ನಾವು ಸಿದ್ಧರಿದ್ದೇವೆ. ಈ ವರ್ಷ ಎತ್ತರದ ವಿಗ್ರಹವನ್ನು ಅನುಮತಿಸುವುದು ನಮ್ಮ ಏಕೈಕ ಬೇಡಿಕೆಯಾಗಿದೆ. ನಾವು ಇದೇ ರೀತಿಯ ಪತ್ರವನ್ನು ಮುಖ್ಯಮಂತ್ರಿಗೆ ನೀಡಿದ್ದೇವೆ ಎಂದು ಚಿಂಚ್‌ಪೋಕ್ಲಿ ಚಿಂತಾಮಣಿ ಎಂದೂ ಕರೆಯಲ್ಪಡುವ ಚಿಂಚ್‌ಪೋಕ್ಲಿ ಸಾರ್ವಜನಿಕ ಉತ್ಸವ ಮಂಡಳಿಯ ಕಾರ್ಯದರ್ಶಿ ವಾಸುದೇವ್ ಸಾವಂತ್ ಹೇಳಿದ್ದಾರೆ.
ಕಳೆದ ವರ್ಷದ ನಷ್ಟದ ಬಳಿಕ ಅನೇಕ ಶಿಲ್ಪಿಗಳು ತಮ್ಮ ಉದ್ಯಮಗಳನ್ನು ಮುಚ್ಚಿ ದ್ದಾರೆ. ಒಬ್ಬ ಶಿಲ್ಪಿ ಶೇ. 10 ಮಾತ್ರ ವ್ಯವಹಾರದಿಂದ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಶಿಲ್ಪಿಗಳು ಮಾತ್ರವಲ್ಲ ಸಾವಿರಾರು ಉದ್ಯೋಗಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಮುಂಬಯಿಯ ಎಲ್ಲ ವಲಯಗಳಿಂದ ಎತ್ತರದ ವಿಗ್ರಹಗಳಿಗೆ ಬೇಡಿಕೆಯೂ ಇದೆ. ಆದ್ದರಿಂದ ಸರಕಾರವು ವಿಗ್ರಹಗಳ ಎತ್ತರದ ಬಗ್ಗೆಯೂ ಸಕಾರಾತ್ಮಕವಾಗಿ ಯೋಚಿಸಬೇಕು ಎಂದು ಶಿಲ್ಪಿ ವಿಜಯ್ ಖತು ಸ್ಟುಡಿಯೋದ ರೇಷ್ಮಾ ಖತು ಹೇಳಿದ್ದಾರೆ.
ಕೊರೊನಾ ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿರುವುದರಿಂದ ಎತ್ತರದ ವಿಗ್ರಹಗಳನ್ನು ಬೆಂಬಲಿಸುವಂತೆ ಬೃಹನ್ಮುಂಬಯಿ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿ ರಾಜ್ಯ ಸರಕಾರವನ್ನು ಕೋರಿದೆ. ಈ ವರ್ಷದ ಹಬ್ಬದ ನಿಯಮಗಳ ಸರಕಾರಕ್ಕೆ ಪತ್ರ ನೀಡಲಾಗಿದ್ದು, ಈ ವರ್ಷ ವಿಗ್ರಹಗಳಿಗೆ ಯಾವುದೇ ಎತ್ತರದ ಮಿತಿ ಇರಬಾರದು, ಪಿಒಪಿ ನಿರ್ಧಾರದ ಬಗ್ಗೆ ತತ್‌ಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಚೌಪಟಿಯಲ್ಲಿ ವಿಸರ್ಜನೆಗೆ ಅನುವು ಮಾಡಿಕೊಡಬೇಕು.ವಲಯಗಳ ಪ್ರವೃತ್ತಿಯನ್ನು ತಿಳಿಯಲು ಸಮಿತಿಯೂ ಮುಂದಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.