Advertisement

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮಗಳು ಅಗತ್ಯ

12:56 AM Jul 24, 2021 | Team Udayavani |

ಕೊರೊನಾ 2ನೇ ಅಲೆಯಿಂದ ಚೇತರಿಸಿಕೊಳ್ಳುತ್ತಿರುವಂತೆಯೇ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಉತ್ತರ ಭಾರತದ ಹಲವೆಡೆ ವರುಣನ ಆರ್ಭಟ ಜೋರಾಗಿದೆ. ಮುಂಗಾರು ಮಾರುತಗಳು ದೇಶಾದ್ಯಂತ ಮಳೆ ಸುರಿಸಲಾರಂಭಿಸುತ್ತಿದ್ದಂತೆಯೇ ದೇಶದ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ನೆರೆ ಭೀತಿ ಕಾಡತೊಡಗಿದೆ. ಮಹಾರಾಷ್ಟ್ರದಲ್ಲಿ ಜಲಾಶಯಗಳು ತುಂಬಿರುವುದರಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದಾಗಿ ರಾಜ್ಯದ ಗಡಿ ಪ್ರದೇಶಗಳಲ್ಲಿನ ನದಿ ಪಾತ್ರದ ಜನರು ಪ್ರವಾಹದ ಆತಂಕದಲ್ಲಿ ಸಿಲುಕಿದ್ದಾರೆ.

Advertisement

ಕಳೆದೊಂದು ವಾರದಿಂದೀಚೆಗೆ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ಬಹುತೇಕ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಈಗಾಗಲೇ ಜಲಾವೃತವಾಗಿದ್ದರೆ ರಾಜ್ಯದ ಹಲವೆಡೆ ಭೂಕುಸಿತಗಳು ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಜ್ಯದ ಅಲ್ಲಲ್ಲಿ ಪ್ರಾಣಹಾನಿ, ಬೆಳೆ ನಷ್ಟ ಸಂಭವಿಸಿವೆ. ಏತನ್ಮಧ್ಯೆ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ನೆರೆ ಸಂಭಾವ್ಯ ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಹಲವೆಡೆ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಹವಾಮಾನ ಕಚೇರಿಯ ಮಾಹಿತಿಯ ಪ್ರಕಾರ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇನ್ನೂ ಮೂರ್‍ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದ್ದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ. ಶುಕ್ರವಾರದಂದು ಮುಖ್ಯಮಂತ್ರಿ, ಆರೋಗ್ಯ ಸಚಿವರು ಪ್ರತ್ಯೇಕ ಸಭೆಗಳನ್ನು ನಡೆಸಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದರಲ್ಲದೆ ಪ್ರವಾಹ ಪೀಡಿತ ಪ್ರದೇಶಗಳ ಜನರ ರಕ್ಷಣೆ, ಪರಿಹಾರ ಕಾರ್ಯಾಚರಣೆ, ಸಂತ್ರಸ್ತರಿಗೆ ಪರಿಹಾರವೂ ಸೇರಿದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಜತೆಯಲ್ಲಿ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿರುವಂತೆಯೂ ಸೂಚಿಸಿದ್ದಾರೆ. ಮಳೆ ಇಳಿಮುಖವಾದ ಬಳಿಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಂಬಂಧಿತ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶ ನೀಡಲಾಗಿದೆ. ಸದ್ಯಕ್ಕಂತೂ ಸಂತ್ರಸ್ತರ ಪ್ರಾಣ ರಕ್ಷಣೆಯೇ ಮೊದಲ ಆದ್ಯತೆಯಾಗಿರುವುದರಿಂದ ಈ ಎಲ್ಲ ಕ್ರಮಗಳು ನ್ಯಾಯೋಚಿತವೇ.

ಪ್ರತೀ ಮಳೆಗಾಲದಲ್ಲಿಯೂ ರಾಜ್ಯದ ಹಲವೆಡೆ ಪ್ರವಾಹ ತಲೆದೋರುವುದು ಈಗ ಸಾಮಾನ್ಯ ಎಂಬಂತಾಗಿದ್ದು ಸರಕಾರ ಮತ್ತು ಆಡಳಿತ ಮಳೆ ಬಂದಾಗ ಕೊಡೆ ಬಿಡಿಸುವ ಸಂಪ್ರದಾಯಕ್ಕೆ ಜೋತು ಬೀಳುತ್ತಿರುವುದರಿಂದಾಗಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿ, ಬೆಳೆ ಹಾನಿ, ಸಾವುನೋವುಗಳು ಸಂಭವಿಸುತ್ತಿವೆ. ಪ್ರತೀ ವರ್ಷ ಪ್ರವಾಹ ಕಾಣಿಸಿಕೊಂಡಾಗಲೂ ಸಂತ್ರಸ್ತರಿಗೆ ಪರಿಹಾರ, ಹೊಸ ಮನೆಗಳ ನಿರ್ಮಾಣಕ್ಕೆ ನೆರವು ಇವೇ ಮೊದಲಾದ ತಾತ್ಕಾಲಿಕ ಪರಿಹಾರ ಕ್ರಮಗಳಿಗೆ ಶರಣಾಗುತ್ತಿರುವುದರಿಂದಾಗಿ ಸರಕಾರ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಜನರ ಪಾಲಿಗೆ ಇದು ವಾರ್ಷಿಕ ಸಂಪ್ರದಾಯ ಎಂಬಂತಾಗಿದೆ. ಈ ತಾತ್ಕಾಲಿಕ ಪರಿಹಾರ ಕ್ರಮಗಳ ಬದಲಾಗಿ ಇಂತಹ ಪ್ರದೇಶಗಳ ನಿವಾಸಿಗಳನ್ನು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಿಸಿ ಅಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು. ಅಷ್ಟು ಮಾತ್ರವಲ್ಲದೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅನೈಸರ್ಗಿಕ ಯೋಜನೆಗಳ ಅನುಷ್ಠಾನ, ಕಾಮಗಾರಿಗಳು, ಅಕ್ರಮ ಗಣಿಗಾರಿಕೆ ಮತ್ತಿತರ ಪ್ರಕೃತಿ ವಿರೋಧಿ ಚಟುವಟಿಕೆಗಳಿಗೆ ಕಟ್ಟುನಿಟ್ಟಾಗಿ ಕಡಿವಾಣ ಹೇರಲೇಬೇಕಿದೆ. ಮಾನವನ ಈ ಎಲ್ಲ ಚಟುವಟಿ ಕೆಗಳು ಪ್ರಾಕೃತಿಕ ವಿಕೋಪಗಳಿಗೆ ನೇರವಾಗಿ ಕಾರಣವಾಗುತ್ತಿವೆ ಎಂಬುದನ್ನು ಸರಕಾರ ಮತ್ತು ಜನರು ಮೊದಲು ಮನಗಾಣಬೇಕು.

Advertisement

Udayavani is now on Telegram. Click here to join our channel and stay updated with the latest news.

Next