Advertisement
ಗಡಿ ಜಿಲ್ಲೆ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಪ್ರತಿ ವರ್ಷ ಪ್ರವಾಹದ ಆತಂಕ ತಪ್ಪಿಲ್ಲ. ಇದರಿಂದ ಮನೆ-ಮಠ ಕಳೆದುಕೊಂಡಿರುವ ನದಿ ಪಾತ್ರದ ಗ್ರಾಮಗಳ ಜನರು ಕೃಷಿಯಲ್ಲೂ ಅಪಾರ ನಷ್ಟ ಅನುಭವಿಸಿದ್ದಾರೆ. ಇದರಿಂದ ಮುಕ್ತಿ ಪಡೆಯಲು ಗ್ರಾಮಗಳ ಸ್ಥಳಾಂತರ ಮಾಡಬೇಕು ಎಂಬ ಒತ್ತಾಯ ವ್ಯಾಪಕವಾಗಿ ಕೇಳಿಬಂದಿತ್ತು. ಇದಕ್ಕಾಗಿ ಹೋರಾಟಗಳು ಸಹ ನಡೆದಿದ್ದವು.
Related Articles
Advertisement
2019ರಲ್ಲಿ ಕೃಷ್ಣಾ, ವೇದಗಂಗಾ ಜತೆಗೆ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಸಹ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದ್ದವು. ಆಗ ಜಿಲ್ಲಾಡಳಿತದ ಸಮೀಕ್ಷೆ ಪ್ರಕಾರ ಅತಿಯಾದ ಮಳೆ ಹಾಗೂ ನದಿಗಳ ಪ್ರವಾಹದಿಂದ 872 ಗ್ರಾಮಗಳು ತೊಂದರೆಗೆ ತುತ್ತಾಗಿದ್ದವು. ಭೀಕರ ಪ್ರವಾಹ ಸ್ಥಿತಿ ಬಂದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೇ ಸ್ವತಃ ನದಿ ತೀರದ ಹಳ್ಳಿಗಳ ಸ್ಥಳಾಂತರ ವಿಷಯ ಪ್ರಸ್ತಾಪ ಮಾಡಿದ್ದಲ್ಲದೆ ಸಂತ್ರಸ್ತರು ಲಿಖೀತ ರೂಪದಲ್ಲಿ ಬರೆದುಕೊಟ್ಟರೆ ಸರ್ಕಾರ ಇದಕ್ಕೆ ಸಿದ್ಧ ಎಂದು ಹೇಳಿ ನದಿ ಪಾತ್ರದ ಜನರ ಆತಂಕದ ಜೀವನಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಡುವ ಹೆಜ್ಜೆ ಇಟ್ಟಿದ್ದರು.
ಆದರೆ ಎಲ್ಲವೂ ಅಂದುಕೊಂಡಂತೆ ಆಗಲೇ ಇಲ್ಲ. ನದಿ ನೀರಿನ ಅಬ್ಬರ ಇಳಿಯುತ್ತಿದ್ದಂತೆ ಹಳ್ಳಿಗಳ ಸ್ಥಳಾಂತರದ ಬಿಸಿಯೂ ಆರಿತು. ಪ್ರವಾಹದ ಆತಂಕಕ್ಕೆ ಸ್ಥಳಾಂತರವೇ ಪರಿಹಾರ ಎಂದು ಹೇಳಿದ್ದ ಜನಪ್ರತಿನಿಧಿಗಳು ಸಹ ಆನಂತರ ಸುಮ್ಮನಾದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳಾಂತರ ವಿಚಾರ ಕೈಬಿಟ್ಟಿರುವುದು ಶಾಶ್ವತ ಪರಿಹಾರದ ಆಸೆಯನ್ನು ಹುಸಿಮಾಡಿದೆ.
2005ರಲ್ಲೂ ಎದುರಾಗಿತ್ತು ಸಂಕಷ್ಟ: 2005ರಲ್ಲಿ ಕೃಷ್ಣಾ ನದಿಗೆ ಇದೇ ರೀತಿ ಭೀಕರ ಪ್ರವಾಹ ಬಂದಾಗ ನದಿ ತೀರದ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗಿನ ಸರ್ಕಾರ ನಿರ್ಧಾರ ಮಾಡಿ ಪ್ರಕ್ರಿಯೆ ಸಹ ಆರಂಭಿಸಲಾಗಿತ್ತು. ಅನೇಕ ಹಳ್ಳಿಗಳಿಗೆ ಪರಿಹಾರ ನೀಡಲಾಗಿತ್ತು. ಆದರೆ ಯಾವ ಹಳ್ಳಿಯೂ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರವಾಗಲಿಲ್ಲ. ಹೀಗಾಗಿ ಸರ್ಕಾರ ಈಗ ಸ್ಥಳಾಂತರದ ಆಲೋಚನೆ ಕೈ ಬಿಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸತತ ಪ್ರವಾಹ ನೋಡಿ ನದಿ ತೀರದ ಜನರು ಸುರಕ್ಷತೆಯ ದೃಷ್ಟಿಯಿಂದ ಸ್ಥಳಾಂತರವಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಅವರಲ್ಲಿ ಹಳ್ಳಿಗಳ ಸ್ಥಳಾಂತರ ಮಾಡಿದರೆ ತಮಗೆ ಬರುವ ಪರಿಹಾರ ಹಾಗೂ ಪುನರ್ವಸತಿ ಬಗ್ಗೆ ಆತಂಕ ಹಾಗೂ ಗೊಂದಲ ಇದೆ. ಪುನರ್ವಸತಿ ಎಲ್ಲಿ ಮತ್ತು ಯಾವ ರೀತಿ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಸಂತ್ರಸ್ತರು ಸರ್ಕಾರದ ಪುನರ್ವಸತಿ ಭರವಸೆಯನ್ನು ಅನುಮಾನದಿಂದ ನೋಡುತ್ತಿದ್ದಾರೆ.
ಗ್ರಾಮಗಳ ಸ್ಥಳಾಂತರ ಸುಲಭದ ಮಾತಲ್ಲ. ಇದಕ್ಕೆ ಸಾವಿರಾರು ಕೋಟಿ ಹಣ ಬೇಕು. ಜಾಗದ ಸಮಸ್ಯೆಯೂ ಇದೆ. ಒಂದು ವೇಳೆ ಇಷ್ಟೊಂದು ಹಣ ಖರ್ಚು ಮಾಡಿ ಹೊಸ ಗ್ರಾಮಗಳ ನಿರ್ಮಾಣ ಮಾಡಿದರೂ ಮೊದಲಿದ್ದ ಗ್ರಾಮಗಳಿಂದ ಜನ ಹೋಗುವದಿಲ್ಲ. ಪ್ರವಾಹ ಕಡಿಮೆಯಾದ ನಂತರ ಅವರು ಮತ್ತೆ ತಮ್ಮ ಹಳೆ ಗ್ರಾಮಕ್ಕೆ ಹೋಗುತ್ತಾರೆ. ಹೀಗಾಗಿ ಸ್ಥಳಾಂತರದ ಬದಲು ಪರ್ಯಾಯ ಯೋಜನೆ ಮಾಡಲಾಗುತ್ತಿದೆ. –ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ
ಗ್ರಾಮಗಳ ಸ್ಥಳಾಂತರ ಇಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಸರಿಯಲ್ಲ. ಮೂರು ವರ್ಷಗಳ ಹಿಂದೆ ಬಂದ ಪ್ರವಾಹದಿಂದ ಬಹಳ ಕೆಟ್ಟ ಪರಿಸ್ಥಿತಿ ಎದುರಿಸಿದ್ದೇವೆ. ಆಗ ಇಲ್ಲಿಗೆ ಭೇಟಿ ನೀಡಿದ ಸಚಿವರು ಹಾಗೂ ಶಾಸಕರೆಲ್ಲ ಗ್ರಾಮವನ್ನು ಸ್ಥಳಾಂತರ ಮಾಡುವ ಭರವಸೆ ನೀಡಿದ್ದರು. ನಾವು ಸಹ ನಿರಾಳವಾಗಿದ್ದೆವು. ಆದರೆ ಈಗ ಮುಖ್ಯಮಂತ್ರಿಗಳು ಗ್ರಾಮಗಳ ಸ್ಥಳಾಂತರ ಇಲ್ಲ ಎಂದು ಹೇಳಿರುವುದು ಆತಂಕ ಉಂಟು ಮಾಡಿದೆ. ಪುನರ್ವಸತಿ ಕೇಂದ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವದಿಲ್ಲ. –ಚನ್ನಬಸು ನೆಲಗುಡ್ಡ, ಲಿಂಗದಾಳ ಗ್ರಾಮ
-ಕೇಶವ ಆದಿ