Advertisement

ಮಣ್ಣು ಕುಸಿತ ತಡೆಗೆ ಶಾಶ್ವತ ಯೋಜನೆ: ಸಂಜೀವ್‌ ಕಿಶೋರ್‌

02:14 AM Oct 31, 2021 | Team Udayavani |

ಸುಬ್ರಹ್ಮಣ್ಯ: ರೈಲ್ವೇಗೆ ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮಘಟ್ಟದ ಸುಬ್ರಹ್ಮಣ್ಯ ರೋಡ್‌ನಿಂದ ಸಕಲೇಶಪುರ ತನಕ ಮಳೆಗಾಲದಲ್ಲಿ ಹಳಿಯ ಮೇಲೆ ಗುಡ್ಡ ಜರಿದು ಆಗಾಗ ಸಮಸ್ಯೆ ಯಾಗ‌ುತ್ತದೆ. ಇದನ್ನು ನಿವಾರಿಸಲು ಸೂಕ್ತ ಯೋಜನೆ ರೂಪಿಸ ಲಾಗುವುದು ಎಂದು ಸೌತ್‌ ವೆಸ್ಟರ್ನ್ ರೈಲ್ವೇಸ್‌ ಜನರಲ್‌ ಮ್ಯಾನೇಜರ್‌ ಸಂಜೀವ್‌ ಕಿಶೋರ್‌ ಹೇಳಿದರು.

Advertisement

ನೆಟ್ಟಣ ನಿಲ್ದಾಣದಲ್ಲಿನ ಮೂಲಸೌಕರ್ಯ ಮತ್ತು ಸುರಕ್ಷೆಯನ್ನು ಶನಿವಾರ ಪರಿಶೀಲಿಸಿದ ಅನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸುರಕ್ಷೆಯನ್ನು ಪರಿಶೀಲಿಸಲು ಇಲ್ಲಿಗೆ ಆಗಮಿಸಿದ್ದೇನೆ. ಘಾಟಿ ಸೇರಿದಂತೆ ಮಂಗಳೂರಿನಿಂದ-ಬೆಂಗಳೂರಿನ ತನಕವೂ ರೈಲು ಹಾದಿ ಮತ್ತು ನಿಲ್ದಾಣಗಳನ್ನು ಸಮಗ್ರ ವಾಗಿ ಪರಿಶೀಲಿಸಿದ್ದೇನೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ರೈಲಿನಲ್ಲಿ ಆಗಮಿಸುವ ಭಕ್ತರು ನೆಟ್ಟಣ ನಿಲ್ದಾಣವನ್ನು ಅವಲಂಬಿಸಿರುವುದರಿಂದ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ನವೆಂಬರ್‌ನಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಆರಂಭಗೊಳ್ಳಲಿದ್ದು, ಮುಂದಿನ ಮಳೆಗಾಲದ ಒಳಗೆ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.

ಇದನ್ನೂ ಓದಿ:ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ

ಗ್ರಾಮೀಣ ನಿಲ್ದಾಣ ಅಭಿವೃದ್ಧಿ
ಗ್ರಾಮೀಣ ರೈಲು ನಿಲ್ದಾಣಗಳ ಅಭಿವೃದ್ಧಿಗೆ ವಿನೂತನ ಚಿಂತನೆ ಮಾಡಲಾಗುವುದು. ಸಿಬಂದಿ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಲಾಗುವುದು ಎಂದರು. ಮೈಸೂರು ರೈಲ್ವೇಯ ಡಿವಿಜನಲ್‌ ಮ್ಯಾನೇಜರ್‌ ರಾಹುಲ್‌ ಅಗರ್ವಾಲ್‌, ಪ್ರಿನ್ಸಿಪಲ್‌ ಚೀಫ್ ಎಂಜಿನಿಯರ್‌ ಎಸ್‌.ಪಿ.ಎಸ್‌. ಗುಪ್ತಾ, ಕಾರ್ಯದರ್ಶಿ ಸಂತೋಷ್‌ ಹೆಗ್ಡೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಒಪ್ಪಿಗೆ ಸಿಕ್ಕ ಕೂಡಲೇ ವಿಜಯಪುರ ರೈಲು
ವಿಜಯಪುರ – ಹಾಸನ – ಸುಬ್ರಹ್ಮಣ್ಯ ರೋಡ್‌ – ಮಂಗಳೂರು ರೈಲು ಒಮ್ಮೆ ಆರಂಭವಾಗಿದ್ದರೂ ಲಾಕ್‌ಡೌನ್‌ ಅವಧಿಯಲ್ಲಿ ನಿಲ್ಲಿಸಲಾಗಿತ್ತು. ಉತ್ತರ ಮತ್ತು ದಕ್ಷಿಣ ಕರ್ನಾಟಕವನ್ನು ಜೋಡಿಸುವ ಮತ್ತು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲತೆಗೆ ಈ ರೈಲು ಅತ್ಯಾವಶ್ಯಕವಾದ ಕಾರಣ ಶೀಘ್ರ ಆರಂಭಿಸುವಂತೆ ರೈಲ್ವೇ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಪ್ಪಿಗೆ ದೊರಕಿದ ಕೂಡಲೇ ಓಡಾಟ ಆರಂಭಿಸಲಿದೆ ಎಂದು ಸಂಜೀವ್‌ ಕಿಶೋರ್‌ ಹೇಳಿದರು.

ಸುಬ್ರಹ್ಮಣ್ಯ ರೋಡ್‌ ನಿಲ್ದಾಣ ಸೇರಿದಂತೆ ಇತರ ಕೆಲವೊಂದು ಪ್ರಮುಖ ನಿಲ್ದಾಣಗಳಲ್ಲಿ ವಿದ್ಯುತ್‌ ಚಾಲಿತವಾಗಿ ರೈಲುಗಳು ಚಲಿಸಲು ಬೇಕಾದ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಸಿಗ್ನಲ್‌ ವ್ಯವಸ್ಥೆಗಳ ಪರಿಪೂರ್ಣತೆಗೂ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ತಾಂತ್ರಿಕವಾಗಿ ರೈಲು ವ್ಯವಸ್ಥೆಗಳ ಔನ್ನತ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next