ವೈದಿ ಕಳೆದ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ದುಡಿಯುತ್ತಿರುವ ಯಶಸ್ವಿ ಛಾಯಾಗ್ರಾಹಕ. ಛಾಯಾಗ್ರಹಣದಲ್ಲಿ ವೈದಿ ಗೋಲ್ಡ್ ಮೆಡಲಿಸ್ಟ್. ಇದುವರೆಗೆ 25 ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ತಮಿಳು, ಮಲಯಾಳಂ ಮತ್ತು ಕನ್ನಡ ಈ ಮೂರು ಭಾಷೆಯಲ್ಲೂ ವೈದಿ ಕ್ಯಾಮೆರಾ ಹಿಡಿದಿದ್ದಾರೆ. ಮೂರು ಭಾಷೆಯ ಬಹುತೇಕ ಸ್ಟಾರ್ಗಳಿಗೆ ಛಾಯಾಗ್ರಾಹಣ ಮಾಡಿರುವುದು ವೈದಿ ಅವರ ವಿಶೇಷತೆ.
ಗಣೇಶ್ ಅಭಿನಯದ “ರೋಮಿಯೋ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ವೈದಿ, ಮೆಲ್ಲನೆ ಕನ್ನಡ ಚಿತ್ರರಂಗದಲ್ಲೇ ಹೆಚ್ಚು ಬಿಜಿಯಾಗಿಬಿಟ್ಟರು. ಮೊದಲ ಚಿತ್ರದ ಬಳಿಕ ಯಶ್ ಅಭಿನಯದ “ಗೂಗ್ಲಿ’, “ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’,”ಮಾಸ್ಟರ್ ಪೀಸ್’ ಚಿತ್ರಗಳಲ್ಲಿ ಕೆಲಸ ಮಾಡುತ್ತಲೇ ಅವರು ಪುನೀತ್‌ರಾಜ್‌ಕುಮಾರ್ ಅಭಿನಯದ “ರಣವಿಕ್ರಮ’ ಚಿತ್ರಕ್ಕೂ ಕ್ಯಾಮೆರಾ ಹಿಡಿದರು. ಅಷ್ಟೇ ಅಲ್ಲ, “ರಾಗ’ ಚಿತ್ರದಲ್ಲೂ ವೈದಿ ಕೆಲಸ ಮಾಡಿದ್ದಾರೆ. ವಿಶೇಷವೆಂದರೆ, ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ ಮೂರು ಚಿತ್ರಗಳಲ್ಲಿ ವೈದಿ ಕೆಲಸ ಮಾಡಿದ್ದಾರೆ. “ಗೂಗ್ಲಿ’, “ರಣವಿಕ್ರಮ’ ಮತ್ತು ಇದೀಗ ಬಿಡುಗಡೆಗೆ ರೆಡಿಯಾಗಿರುವ ಪುನೀತ್‌ರಾಜಕುಮಾರ್ ಅಭಿನಯದ “ನಟ ಸಾರ್ವಭೌಮ’ ಚಿತ್ರಕ್ಕೂ ಕ್ಯಾಮೆರಾ ಹಿಡಿದಿದ್ದಾರೆ.
ಹಾಗೆ ನೋಡಿದರೆ, ವೈದಿ ಅವರು ಎರಡು ದಶಕಗಳಿಂದಲೂ ಚಿತ್ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಅವರು ಅದು ಕನ್ನಡ ಚಿತ್ರರಂಗದಲ್ಲೇ ಹೆಚ್ಚು ಸ್ಟಾರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದು ವಿಶೇಷ. ಹಾಗೆ ಹೇಳುವುದಾದರೆ, ಕನ್ನಡದಲ್ಲಿ ಅವರು ಈವರೆಗೆ ಮಾಡಿರುವ ಎಲ್ಲಾ ಚಿತ್ರಗಳೂ ದೊಡ್ಡ ಸಕ್ಸಸ್ ಕಂಡಿವೆ. ಸ್ಟಾರ್ ಸಿನಿಮಾಗಳಿಗಷ್ಟೇ ಅಲ್ಲ, ಹೊಸಬರ ಜೊತೆಯಲ್ಲೂ ಸಿನಿಮಾ ಮಾಡುವ ತುಡಿತ ಇದೆ ಎನ್ನುವ ವೈದಿ, ಕಥೆ ಮತ್ತು ತಂಡ ಹೇಗಿರುತ್ತೆ ಎಂಬುದನ್ನು ನೋಡಿ ಕೆಲಸ ಮಾಡುವುದಾಗಿ ಹೇಳುತ್ತಾರೆ.
ಎಲ್ಲಾ ಸರಿ, ವೈದಿ ಅವರಿಗೆ ಕನ್ನಡ ಸ್ಪಷ್ಟವಾಗಿ ಬರುತ್ತಾ? ಈ ಪ್ರಶ್ನೆ ಎಲ್ಲರೂ ಕೇಳುತ್ತಾರೆ. ಆದರೆ, ವೈದಿ ಹೆಮ್ಮೆಯಿಂದ ಹೇಳುವುದಿಷ್ಟು. ಕನ್ನಡ ಭಾಷೆ ಅರ್ಥವಾಗುತ್ತೆ. ಮಾತನಾಡಲೂ ಬರುತ್ತೆ. ಅದಕ್ಕೆ ಕಾರಣ ನಿರ್ದೇಶಕ ಪವನ್ ಒಡೆಯರ್ ಎನ್ನುತ್ತಾರೆ. ವೈದಿ ಅವರ ಸಿನಿಜರ್ನಿಯಲ್ಲಿ ಪುನೀತ್‌ರಾಜ್‌ಕುಮಾರ್ ಅವರ “ನಟ ಸಾರ್ವಭೌಮ’ ಚಿತ್ರ ವಿಶೇಷವಂತೆ. ಯಾಕೆಂದರೆ, ಅದು ವೈದಿ ಅವರಿಗೆ 25 ನೇ ಚಿತ್ರ. ಹಾಗಾಗಿ, ಎಂದಿಗಿಂತ ವಿಶೇಷವಾದ ಕಾಳಜಿಯೊಂದಿಗೆ ಆ ಚಿತ್ರ ಮಾಡಿದ್ದಾರಂತೆ. ಇಷ್ಟು ವರ್ಷಗಳ ಕಾಲ ಅವರು ಮೂರು ಭಾಷೆಯ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರೂ, ಅವರಿಗೆ ಕನ್ನಡ ಚಿತ್ರರಂಗ ಕಂಫರ್ಟ್ ಎನ್ನುತ್ತಾರೆ.
ಕನ್ನಡದಲ್ಲಿ ಸದ್ಯಕೆ ಒಂದಷ್ಟು ಹೊಸ ಕಥೆ ಕೇಳುತ್ತಿರುವ ವೈದಿ, ಇಷ್ಟರಲ್ಲೇ ಮತ್ತೂಬ್ಬ ಸ್ಟಾರ್ ನಟರ ಸಿನಿಮಾ ಮಾಡುವ ಸುಳಿವು ನೀಡುತ್ತಾರೆ. ಇದುವರೆಗೆ ಕನ್ನಡದಲ್ಲಿ ಮೂವರು ಸ್ಟಾರ್ ಜೊತೆಗೇ ಸಿನಿಮಾ ಮಾಡಿರುವ ಅವರು, ಚಾಲೆಂಜ್ ಸಿನಿಮಾ ಅಂದರೆ, ಎಲ್ಲಿಲ್ಲದ ಖುಷಿಯಂತೆ. “ನಟ ಸಾರ್ವಭೌಮ’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ ಎನ್ನುವ ಅವರು, ಅದೊಂದು ವಿಭಿನ್ನ ಕಥೆ. ಹಾಗಾಗಿ, ಪ್ರತಿಯೊಂಬ್ಬ ತಂತ್ರಜ್ಞನಿಗೂ ಅದೊಂದು ಚಾಲೆಂಜ್ ಚಿತ್ರ ಎನ್ನುವುದನ್ನು ಮರೆಯುವುದಿಲ್ಲ ಅವರು.