Advertisement
ಹೌದು, ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ, ಜಿಲ್ಲೆಗೆ ನಿರಂತರವಾಗಿ ನೀರಾವರಿ ವಿಚಾರದಲ್ಲಿ ಆಗುತ್ತಿರುವ ಆನ್ಯಾಯವನ್ನು ಪ್ರಬಲವಾಗಿ ಖಂಡಿಸಿ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಲು ಮುಂದಾಗಿದ್ದು, ಇದೇ ತಿಂಗಳ ನ.25ಕ್ಕೆ ಜಿಲ್ಲಾ ಕೇಂದ್ರದಲ್ಲಿ ಮೂರು ಜಿಲ್ಲೆಗಳ ಸಂಸದರ, ಸಚಿವರ, ಶಾಸಕರನ್ನು ಒಳಗೊಂಡಂತೆ ನೀರಾವರಿ ಹೋರಾಟಗಾರರ, ಸಂಘ, ಸಂಸ್ಥೆಗಳ ಬೃಹತ್ ದುಂಡು ಮೇಜಿನ ಸಭೆ ಆಯೋಜಿಸಿದೆ.
Related Articles
Advertisement
ದಶಕಗಳಿಂದ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಮಹತ್ವಕಾಂಕ್ಷೆಯನ್ನು ಹೊತ್ತು ಹೋರಾಟ ನಡೆಸುತ್ತಿರುವ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಇದೀಗ ಮತ್ತೆ ನೀರಾವರಿ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಲು ನ.25 ರಂದು ಶನಿವಾರ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳನ್ನೊಳಗೊಂಡಂತೆ ಶಾಶ್ವತ ನೀರಾವರಿ ದುಂಡು ಮೇಜಿನ ಸಭೆಯಲ್ಲಿ ಚಿಕ್ಕಬಳ್ಳಾಪುರ ನಗರದ ಕೆಇಬಿ ಸಮುದಾಯ ಭವನದಲ್ಲಿ ಆಯೋಜಿಸಿದೆ. ದಂಡು ಮೇಜಿನ ಸಭೆಗೆ ಮೂರು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ಸಂಸದರಿಗೂ ಮುಕ್ತವಾಗಿ ಈಗಾಗಲೇ ಶಾಶ್ವತ ನೀರಾವರಿ ಹೋರಾಟ ಸಮಿತಿ ಆಹ್ವಾನ ನೀಡಿದೆ. ಅಲ್ಲದೇ ಶಾಶ್ವತ ನೀರಾವರಿ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಎಲ್ಲಾ ಕನ್ನಡಪರ, ದಲಿತಪರ, ರೈತಪರ ಸಂಘಟನೆ ಗಳಿಗೆ, ಯುವ ಶಕ್ತಿ ಪದಾಧಿಕಾರಿಗಳಿಗೆ, ಮಹಿಳಾ ಸಂಘಟನೆಗಳಿಗೆ ಹೋರಾಟ ಸಮಿತಿ ಆಹ್ವಾನ ನೀಡಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ ಆಂಜನೇಯರೆಡ್ಡಿ ಹೇಳಿದ್ದೇನು?:
ಜಿಲ್ಲೆಯು ದಶಕಗಳಿಂದ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದೆ. ಇದರ ಮಧ್ಯೆ ಸರ್ಕಾರ ಅಪಾಯಕಾರಿ ಎಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತದಡಿ ಶುದ್ಧೀಕರಣಗೊಳಿಸಿದೇ ಜಿಲ್ಲೆಯ ಕೆರೆಗಳಿಗೆ ತುಂಬಿಸುವ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದೆ. ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಜಿಲ್ಲೆಗಳಿಗೆ ಶುದ್ಧ ನೀರಿನ ಖಾತ್ರಿ ಇಲ್ಲವಾಗಿದೆ. ಆದ್ದರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮೂರು ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳಿಗೆ ಜಿಲ್ಲೆಗಳ ನೀರಿನ ಬವಣೆ ಬಗ್ಗೆ ಮನವರಿಕೆ ಮಾಡಿಕೊಡುವ ಜೊತೆಗೆ ನೀರಾವರಿ ಯೋಜನೆಗಳ ಸಾಧ್ಯತೆಗಳ ಕುರಿತು ಹಾಗೂ ಹೆಬ್ಟಾಳ ಹಾಗೂ ನಾಗವಾರ ಏತ ನೀರಾವರಿ ಯೋಜನೆಯ ಸಾಧಕಭಾದಕಗಳ ಬಗ್ಗೆ ಮುಂದಿನ ಜಿಲ್ಲೆಗಳ ನೀರಿನ ಬವಣೆ ಕುರಿತು ಅರಿವು ಮೂಡಿಸಿ, 3 ಜಿಲ್ಲೆಗಳಿಗೆ ಸಮಗ್ರ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಹೋರಾಟ ಸಮಿತಿ ಹಲವು ವಿಚಾರಗಳನ್ನು ದಾಖಲೆಗಳ ಸಮೇತ ಚುನಾಯಿತ ಜನಪ್ರತಿನಿಧಿಗಳ ಮುಂದೆ ಶಾಶ್ವತ ನೀರಾವರಿ ದುಂಡು ಮೇಜಿನ ಸಭೆಯಲ್ಲಿಟ್ಟು, ಈ ಭಾಗಕ್ಕೆ ಶಾಶ್ವತ ನೀರಾವರಿ ಒದಗಿಸಲು ಒತ್ತಾಯಸಲು ದಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಾವರಿ ಹೋರಾಟವನ್ನು ಇನ್ನಷ್ಟು ಪ್ರಖರವಾಗಿ ನಡೆಸಲು ದಂಡು ಮೇಜಿನ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗುವುದೆಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್.ಆಂಜನೇಯರೆಡ್ಡಿ ಉದಯವಾಣಿಗೆ ತಿಳಿಸಿದರು.
-ಕಾಗತಿ ನಾಗರಾಜಪ್ಪ