Advertisement

Karnataka: ಅತಿಥಿ ಉಪನ್ಯಾಸಕರ ಖಾಯಂ ಅಸಾಧ್ಯ: ಸರಕಾರ

10:21 PM Jan 02, 2024 | Team Udayavani |

ಬೆಂಗಳೂರು: ಸೇವೆ ಕಾಯಂಗೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ಆರಂಭಿಸಿರುವ ಪಾದಯಾತ್ರೆ ಮುಂದುವರಿದಿದ್ದು, ರಾಜ್ಯ ಸರಕಾರವೂ ತನ್ನ ಪಟ್ಟು ಸಡಿಲಿಸಿಲ್ಲ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು, ಅತಿಥಿ ಉಪನ್ಯಾಸಕರ ಖಾಯಂ ಅಸಾಧ್ಯ. ಕಾನೂನು ಮೀರಿ ಕಾಯಂ ಮಾಡಿದರೆ ಭಾರೀ ಕಷ್ಟ ಆಗಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Advertisement

ಕೊಪ್ಪಳದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಾದಯಾತ್ರೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಜತೆ ಮಾತನಾಡಿದ್ದೇವೆ. ಅವರು ಖಾಯಂ ಮಾಡಿ ಎನ್ನುತ್ತಿದ್ದಾರೆ. ಖಾಯಂ ಮಾಡುವುದು ಕಷ್ಟದ ಕೆಲಸ. ಕಾನೂನು ಮೀರಿ ಮಾಡಿದರೆ ಭಾರೀ ಕಷ್ಟ ಆಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌, ಅತಿಥಿ ಉಪನ್ಯಾಸಕರ ಖಾಯಂಗೊಳಿಸಲು ಕಾನೂನು ತೊಡಕು ಇದೆ. ಯಾವುದೇ ರಾಜ್ಯದಲ್ಲೂ ಖಾಯಂ ಮಾಡಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಪ್ರಕಟವಾಗದ ತೀರ್ಮಾನ
ಮುಷ್ಕರನಿರತ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಬೇಡಿಕೆಗೆ ಸರಕಾರ ಒಪ್ಪಿಲ್ಲ. ಆದರೆ, ಗರಿಷ್ಠ 5,000 ರೂ. ವೇತನ ಹೆಚ್ಚಿಸಲು ಸಮ್ಮತಿಸಿದೆ. ಅವರ ಸೇವಾವಧಿ ಆಧಾರದ ಮೇಲೆ ವೇತನ ಪರಿಷ್ಕರಣೆಯಾಗಲಿದೆ. ಇದರ ಜತೆಗೆ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ ಐದು ಲಕ್ಷ ರೂ. ಆರೋಗ್ಯ ವಿಮೆ, 10 ವರ್ಷ ಸೇವೆ ಪೂರೈಸಿದ 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಐದು ಲಕ್ಷ ರೂ. ಇಡಗಂಟು ನೀಡಲು ಸರಕಾರ ನಿರ್ಧರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಗೈರು ಹಾಜರಾದವರ ಮಾಹಿತಿ ಸಂಗ್ರಹ
ಉನ್ನತ ಶಿಕ್ಷಣ ಇಲಾಖೆಯು ಗೈರು ಹಾಜರಾಗಿರುವ ಅತಿಥಿ ಉಪನ್ಯಾಸಕರ ಮಾಹಿತಿ ಸಂಗ್ರಹದಲ್ಲಿ ತೊಡಗಿದೆ. ವಾರಕ್ಕೆ ಎಂಟು ಗಂಟೆ ಕೆಲಸ ಮಾಡುವ ಅತಿಥಿ ಉಪನ್ಯಾಸಕರು ಪ್ರತೀದಿನ ತರಗತಿ ತೆಗೆದುಕೊಳ್ಳದ ಕಾರಣ ಅವರ ಹಾಜರಾತಿ ಮಾಹಿತಿ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಜತೆಗೆ ಹಾಜರಾದ ಅತಿಥಿ ಉಪನ್ಯಾಸಕರಲ್ಲಿ ನೆಟ್‌, ಸ್ಲೇಟ್‌, ಪಿ.ಎಚ್‌ಡಿ. ಆಗಿರುವವರ ಮಾಹಿತಿಯನ್ನು ಸಹ ಸಂಗ್ರಹಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ನಾವು ಏನೇ ಮಾಡಿದರೂ ನ್ಯಾಯಾಲಯದಲ್ಲಿ ಸಮಸ್ಯೆ ಆಗಬಹುದು. ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಲು ಉಮಾದೇವಿ ಪ್ರಕರಣ ಬಂದ ಮೇಲೆ ಸಾಕಷ್ಟು ತೊಡಕಿದೆ. ನೇರವಾಗಿ ನೇಮಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಕೇಸ್‌ ಇದೆ. ಆದರೆ ಕೆಲವು ಅತಿಥಿ ಉಪನ್ಯಾಸಕರು ತಮ್ಮನ್ನು ಖಾಯಂಗೊಳಿಸಬೇಕು ಅಂತಿದ್ದಾರೆ.
– ಡಾ| ಎಂ.ಸಿ. ಸುಧಾಕರ್‌, ಉನ್ನತ ಶಿಕ್ಷಣ ಸಚಿವ

Advertisement

ಪಾದಯಾತ್ರೆಯಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು
ನೆಲಮಂಗಲ(ಬೆಂಗಳೂರು ಗ್ರಾ.): ತಾಲೂಕಿನ ದಾಬಸ್‌ಪೇಟೆಯಿಂದ ನೆಲಮಂಗಲದವರೆಗೆ ಸಾವಿರಾರು ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಸೇವೆ ಕಾಯಂಗೆ ಆಗ್ರಹಿಸಿದರು. ಅತಿಥಿ ಉಪಾನ್ಯಾಸಕರ ಪಾದಯಾತ್ರೆ ಸೋಮವಾರ ತುಮಕೂರಿನ ಶ್ರೀಸಿದ್ಧಗಂಗಾ ಮಠದಿಂದ ಹೊರಟು ಸೋಮವಾರ ರಾತ್ರಿ ತಾಲೂಕಿನ ದಾಬಸ್‌ಪೇಟೆಗೆ ಬಂದು ತಲುಪಿತ್ತು. ದಾಬಸ್‌ಪೇಟೆಯ ಬಸವಶ್ರೀ ಮತ್ತು ಶ್ರೀಸಿದ್ದೇಶ್ವರ ಸಮುದಾಯ ಭವನದಲ್ಲಿ ವಾಸ್ತವ್ಯ ಹೂಡಿದ್ದ ಪ್ರತಿಭಟನಾ ನಿರತರು, ಮಂಗಳವಾರ ಬೆಳಗ್ಗೆ ಉಪಾಹಾರ ಸೇವಿಸಿ ದಾಬಸ್‌ಪೇಟೆಯಿಂದ ನೆಲಮಂಗಲದವರೆಗೂ ಕಾಲ್ನಡಿಗೆಯಲ್ಲಿ ಸಾಗಿದರು. ರಾತ್ರಿ ನೆಲಮಂಗಲದ ಶ್ರೀ ಸಿದ್ಧಗಂಗಾ ಪದವಿ ಕಾಲೇಜಿನಲ್ಲಿ ವಾಸ್ತವ್ಯ ಹೂಡಿದ್ದು ಪಾದಯಾತ್ರೆಯಲ್ಲಿ 2 ಸಾವಿರಕ್ಕೂ ಹೆಚ್ಚು ಅತಿಥಿ ಉಪನಾಸ್ಯಕರು ಭಾಗಿಯಾಗಿದ್ದಾರೆ.

ಇಂದು ಬೆಂಗಳೂರಿನತ್ತ ಪಾದಯಾತ್ರೆ: ಜ.4ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯದ ಎಲ್ಲಾ 9ಸಾವಿರ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಬುಧವಾರ ನೆಲಮಂಗಲದಿಂದ ಬೆಂಗಳೂರಿನತ್ತ ಪಾದಯಾತ್ರೆ ಮಾಡುತ್ತೇವೆ ಎಂದು ತುಮಕೂರು ಜಿಲ್ಲಾಧ್ಯಕ್ಷ ಡಾ. ಧರ್ಮವೀರ ಉದಯವಾಣಿ’ಗೆ ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next