ವಿದ್ಯಾನಗರ: ಗೌರಿ ಶಂಕರರು ಲೋಕ ರಕ್ಷಕರಾಗಿ ನೆಲೆಸಿರುವ ಈ ಕ್ಷೇತ್ರದ ನವೀಕರಣದಿಂದ ಈ ಪ್ರದೇಶದ ನವೀಕರಣವಾದಂತೆ. ಒಂದು ಪ್ರದೇಶದಲ್ಲಿರುವ ಭಗವಂತನ ಸಾನಿಧ್ಯವನ್ನು ಸಂರಕ್ಷಿಸುವ ಮೂಲಕ, ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಿ ಭಜನೆ ಆರಾಧನೆಗಳ ಮೂಲಕ ಅವನ ಪ್ರೀತಿಯನ್ನು ಪಡೆಯುವುದರ ಮೂಲಕ ನೆಮ್ಮದಿಯನ್ನು ಪಡೆಯಲು ಸಾಧ್ಯ. ಅವನ ಕರುಣೆಯ ಬೆಳಕಲ್ಲಿ ಈ ಜಗತ್ತು ಬೆಳಗುತ್ತಿದೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಪರಮ ಪೂಜ್ಯ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನುಡಿದರು.
ಅವರು ಪೆರಿಯ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಇತ್ತೀಚೆಗೆ ಜರಗಿದ ಕ್ಷೇತ್ರ ನವೀಕರಣ-ದ್ರವ್ಯಕಲಶ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರ ಸೇವಾ ಸಮಿತಿಯ ಕಾರ್ಯದರ್ಶಿ ಪ್ರಮೋದ್ ಪೆರಿಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ್ಷೇತ್ರ ಸೇವಾಸಮಿತಿಯ ಗೌರವಾ ಧ್ಯಕ್ಷರೂ ಪೆರಿಯ ಗೋಗಂಗಾ ಪಂಚ ಗವ್ಯ ಚಿಕಿತ್ಸಾ ಕೇಂದ್ರದ ಸಂಚಾಲಕರೂ ಆಗಿರುವ ವಿಷ್ಣುಪ್ರಸಾದ ಪೂಚಕ್ಕಾಡ್ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಪದಾಧಿಕಾರಿಗಳಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮಹೇಶ್ ಸರಳಿ, ನವನೀತಪ್ರಿಯ ಕೈಪಂಗಳ, ಮಹಾಮಂಡಲದ ಗೋವಿಂದ ಬಳ್ಳಮೂಲೆ, ವಿವಿಧ ವಲಯಗಳ ಪದಾಧಿಕಾರಿಗಳಾದ ವೈ.ವಿ.ರಮೇಶ್ ಭಟ್, ಈಶ್ವರ ಭಟ್ ಉಳುವಾನ, ಸುಬ್ರಹ್ಮಣ್ಯ ಭಟ್ ಕೆರೆಮೂಕೆ, ಗಣೇಶ್ ಕೋಂಗೋಟು, ಕೃಷ್ಣರಾಜ ಪುಣೂರು ಜತೆಗಿದ್ದರು. ಗಳು ಸೇರಿದ ಭಕ್ತವೃಂದದವರಿಗೆ ಅನುಗ್ರಹ ಮಂತ್ರಾಕ್ಷತೆ ಇತ್ತು ಆಶೀರ್ವದಿಸಿದರು.
ಅದ್ದೂರಿ ಸ್ವಾಗತ
ಶ್ರೀಗಳಿಗೆ ಶ್ರೀ ಕ್ಷೇತ್ರದ ಸೇವಾಸಮಿತಿ ಹಾಗೂ ಊರ ಭಕ್ತವೃಂದದ ವತಿಯಿಂದ ಚೆಂಡೆ ವಾದ್ಯ ಘೋಷ ಗಳೊಂದಿಗೆ ಅದ್ದೂರಿಯ ಸ್ವಾಗತ ನೀಡಲಾಯಿತು.