Advertisement

Peripheral Ring Road: ಪೆರಿಫೆರಲ್‌ ರಿಂಗ್‌ ರಸ್ತೆಗೆ ಮರುಜೀವ?

02:48 PM Dec 06, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಹತ್ವಾಕಾಂಕ್ಷೆಯ ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ಯೋಜನೆಯು ಮರುಜೀವ ಪಡೆದುಕೊಳ್ಳುವ ಲಕ್ಷಣ ಗೋಚರಿಸಿದ್ದು, ಪಿಪಿಆರ್‌-2 ಯೋಜನೆಯಡಿ ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ವರೆಗಿನ 10.50 ಕಿ. ಮೀ. ರಸ್ತೆ ನಿರ್ಮಾಣಕ್ಕೆ ಸರ್ಕಾರದ ಹಂತದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

Advertisement

ಪೆರಿಫೆರಲ್‌ ರಿಂಗ್‌ ರಸ್ತೆ-2 (ಪಿಆರ್‌ಆರ್‌ -2) ಬಗ್ಗೆ ಸರ್ಕಾರದ ಹಂತದಲ್ಲಿ ಸಮೀಕ್ಷೆಗಳು ನಡೆಯುತ್ತಿವೆ. ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಬನ್ನೇರುಘಟ್ಟ ರಸ್ತೆ ನಡುವಿನ ಪಿಆರ್‌ಆರ್‌-2 ಯೋಜನೆಯನ್ನು ಮೊದಲು ಕೈಗೆತ್ತಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಡಿಎ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಈ ಯೋಜನೆಯ ಬಗ್ಗೆ ಎಂಜಿನಿಯರ್‌ಗಳು ಈಗಾಗಲೇ ರೂಪುರೇಷೆ ಸಿದ್ಧಪಡಿಸುತ್ತಿದ್ದು, ಡಿಸೆಂಬರ್‌ 2ನೇ ವಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಈ ಬೆಳವಣಿಗೆ ಬಳಿಕ ಟೆಂಡರ್‌ ಪ್ರಕ್ರಿಯೆ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಶೀಘ್ರ 10.50 ಕಿ.ಮೀ. ರಿಂಗ್‌ ರಸ್ತೆ ಶುರು: ಮೊದಲಿಗೆ ಹೊಸೂರಿನಿಂದ ಬನ್ನೇರುಘಟ್ಟ ವರೆಗಿನ 10.50 ಕಿ.ಮೀ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸಿ ಯೋಜನೆ ಕಾರ್ಯರೂಪಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಚತುಷ್ಪತ ರಸ್ತೆಗಳ ನಡುವೆ ಮೆಟ್ರೋ ಅಥವಾ ಸಬ್‌ ಅರ್ಬನ್‌ ರೈಲಿಗೆ ಮಧ್ಯದಲ್ಲಿ ಜಾಗ ಬಿಡಲಾಗುತ್ತಿದೆ. ಪಿಆರ್‌ಆರ್‌-2 ಯೋಜನೆಯು ಕ್ರಮವಾಗಿ ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆಯಲ್ಲಿ ಒಟ್ಟು 56 ಕಿ.ಮೀ ವರೆಗೆ ನಿರ್ಮಾಣವಾಗಲಿದೆ.

ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ, ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿವರೆಗೆ ಹಾದು ಹೋಗಲಿದೆ. ಇದಕ್ಕೆ ಭೂ ಸ್ವಾಧೀನ ಪರಿಹಾರ ಮೊತ್ತವೇ ಸುಮಾರು 5 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಬಿಡಿಎ ಎಂಜಿನಿಯರ್‌ ಗಳು ಅಂದಾಜಿಸಿದ್ದಾರೆ. ಪಿಆರ್‌ಆರ್‌-2 ಮಾದ ರಿಯು ಯಶಸ್ವಿಯಾದರೆ, ಪಿಆರ್‌ಆರ್‌-1 ಸಹ ಅದೇ ಮಾದರಿಯಲ್ಲಿ ಕಾರ್ಯ ರೂಪಕ್ಕೆ ತರಲು ಚಿಂತಿಸಲಾಗಿದೆ. ಒಟ್ಟು ಪಿಆರ್‌ಆರ್‌ ಯೋಜನೆಯು ಒಟ್ಟು 116 ಕಿ.ಮೀ. ಇರಲಿದೆ. ತುಮಕೂರು ರಸ್ತೆಯಿಂದ ಬಲ ಭಾಗಕ್ಕೆ ಸಾಗುವ 63 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯವನ್ನು ಪಿಆರ್‌ಆರ್‌-1 ಎಂದು ಪರಿಗಣಿಸಲಾಗಿದೆ.

ಪಿಆರ್‌ಆರ್‌-2ಗೆ ತೊಡಕುಗಳೇನು?

Advertisement

ಪಿಆರ್‌ಆರ್‌-2 ರಸ್ತೆ ನಿರ್ಮಾಣಕ್ಕೆ ಒಟ್ಟು ಸುಮಾರು 8 ಸಾವಿರ ಕೋಟಿ ರೂ. ತಗುಲಲಿದ್ದು, ಬಿಡಿಎ ಬಳಿ ಇಷ್ಟೊಂದು ದುಡ್ಡಿಲ್ಲ. ಹೀಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ 5 ಸಾವಿರ ಕೋಟಿ ರೂ. ಪರಿಹಾರ ಮೊತ್ತ ಕೊಡುವುದೇ ದೊಡ್ಡ ಸವಾಲಾಗಿದೆ. ಜೊತೆಗೆ ಮೇಲ್ಸೇತುವೆ ನಿರ್ಮಾಣ, ಪಿಆರ್‌ಆರ್‌ಗೆ ತಾಗಿಕೊಂಡಿರುವ ರಸ್ತೆಗಳಿಗೆ ಸಿಗ್ನಲ್‌ ಅಳವಡಿಸದೇ ಕಾಮಗಾರಿ ನಡೆಸುವುದೂ ಬಿಡಿಎಗೆ ತೊಡಕಾಗಿದೆ. ಹೀಗಾಗಿ ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಸೇರಿದಂತೆ ಹಲವು ಕಡೆಗಳಲ್ಲಿರುವ ಬಿಡಿಎ ಬಡಾವಣೆ, ನಿವೇಶನ, ಅಪಾರ್ಟ್‌ಮೆಂಟ್‌ ಮಾರಾಟ ಮಾಡುವುದು, ಒತ್ತುವರಿಯಾದ ಬಿಡಿಎ ಜಾಗ ಪತ್ತೆ ಹಚ್ಚಿ ತೆರವುಗೊಳಿಸಿ ಮಾರಾಟ ಮಾಡಿ ಬಂದ ದುಡ್ಡನ್ನು ಪಿಆರ್‌ಆರ್‌-2 ಯೋಜನೆಗೆ ಬಳಸಲು ಚಿಂತಿಸಲಾಗಿದೆ.

ಟ್ರಾಫಿಕ್ ಜಾಮ್‌ಗೆ ಮುಕ್ತಿ

ಪಿಆರ್‌ಆರ್‌-2 ಯೋಜನೆಯಡಿ ಹೊಸೂರಿನಿಂದ ಬನ್ನೇರುಘಟ್ಟದವರೆಗೆ 10.50 ಕಿ.ಮೀ. ರಿಂಗ್‌ ರಸ್ತೆ ನಿರ್ಮಾಣವಾದರೆ, ಎಲೆಕ್ಟ್ರಾನಿಕ್‌ ಸಿಟಿ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಚಂದಾಪುರ, ಸರ್ಜಾಪುರ ರಸ್ತೆ, ಬೊಮ್ಮಸಂದ್ರ, ಗಾರ್ವೆಪಾಳ್ಯ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್‌ ಲೇಔಟ್‌ ವ್ಯಾಪ್ತಿಯಲ್ಲಿರುವ ಅತೀಯಾದ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆ. ಶೇ.50ರಷ್ಟು ಸಾಫ್ಟ್ವೇರ್‌ ಕಂಪನಿಗಳು ಇದೇ ಪ್ರದೇಶದಲ್ಲಿದ್ದು, ಟೆಕಿಗಳಿಗೆ ಓಡಾಡಲು ಸಹಕಾರಿಯಾಗಲಿದೆ. ಎಲೆಕ್ಟ್ರಾನಿಕ್‌ ಸಿಟಿ ರಸ್ತೆಗಳಿಗೆ ಹೊಂದಿಕೊಂಡಿರುವ ರಸ್ತೆಗಳಲ್ಲೂ ಸದ್ಯ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ‌

ಪಿಆರ್‌ಆರ್‌ ಯೋಜನೆ ಬಗ್ಗೆ ಸರ್ಕಾರದ ಹಂತದಲ್ಲಿ ಹಲವು ಸಭೆಗಳು ನಡೆದಿವೆ. ಬಿಡಿಎ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಪರಿಹಾರ ನೀಡಿ ಯೋಜನೆ ಕಾರ್ಯರೂಪಕ್ಕೆ ತರಲು ದೊಡ್ಡ ಮೊತ್ತ ಬೇಕಾಗುತ್ತದೆ. ಯೋಜನೆಗೆ ತಗುಲುವ ವೆಚ್ಚ ಬಿಡಿಎಗೆ ಸಿಕ್ಕಿದರೆ ಸುಗಮವಾಗಿ ಯೋಜನೆ ರೂಪಿಸಬಹುದು. ● ಎನ್‌.ಜಯರಾಮ್‌, ಆಯುಕ್ತ, ಬಿಡಿಎ

ಭೂ ಸ್ವಾಧೀನ ಪರಿಹಾರ ಮೊತ್ತ ನೀಡಲು ಬಿಡಿಎನಲ್ಲಿ ದುಡ್ಡಿನ ಕೊರತೆ ಎದುರಾಗಿದೆ. ಇದಕ್ಕೆ ಬೇಕಾಗುವ ಹಣ ಹೊಂದಿಸಲು ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರದ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ● ಡಾ.ಎಚ್‌.ಆರ್‌.ಶಾಂತಾರಾಜಣ್ಣ, ಅಭಿಯಂತರ ಸದಸ್ಯ, ಬಿಡಿಎ

● ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next