ಬೀದರ: ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಅತ್ಯಂತ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದು, ಆಧುನಿಕ ಯುಗಕ್ಕೆ ಅನುಸಾರ ಸಿಬ್ಬಂದಿ ಕೆಲಸ ನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಎಡಮಲ್ಲೆ ಹೇಳಿದರು.
ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ರಾಜ್ಯಮಟ್ಟದ ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳಿಗಾಗಿ ನಬಾರ್ಡ್ ವತಿಯಿಂದ ನಡೆದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಂಕ್ ಅಧಿಕಾರಿಗಳು ಒತ್ತಡದ ನಡುವೆಯೂ ಗ್ರಾಹಕರಿಗೆ ನಗು ಮುಖದ ಸೇವೆ ನೀಡಬೇಕು. ಸ್ಪರ್ಧೆಗಳನ್ನು ಎದುರಿಸಲು, ಯಶಸ್ಸಿಯಾಗಿ ಆರ್ಥಿಕ ವ್ಯವಹಾರ ನಡೆಸಲು ಸಿಬ್ಬಂದಿ ಸನ್ನದ್ದರಾಗಿರಬೇಕಾಗಿದೆ. ಮೊದಲಿನಂತೆ ಸಾಂಪ್ರದಾಯಿಕ ಬ್ಯಾಂಕಿಂಗ್ ಕೆಲಸ ನಡೆಸದೇ ಬ್ಯಾಂಕ್‌ಗಳು ದಿನ ನಿತ್ಯ ಹೊಸ ವ್ಯವಹಾರಗಳೊಂದಿಗೆ ಹೊಂದಿಕೊಂಡು ಜನರಿಗೆ ಅನುಕೂಲಕರ ಸೇವೆ ಒದಗಿಸಲು ಕಂಕಣ ಬದ್ಧರಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ಆಡಳಿತ ವಿಭಾಗದ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಮಾತನಾಡಿ, ಸಹಕಾರಿ ರಂಗದ ಬ್ಯಾಂಕ್‌ಗಳು ಜನರಿಗೆ ಸಮೀಪವಾಗಿದ್ದು, ಹೆಚ್ಚು ಜನರೊಂದಿಗೆ ಸೇವೆ ಹೊಂದಿವೆ. ಆದರೂ, ಸಹಕಾರಿ ಬ್ಯಾಂಕ್‌ಗಳ ವ್ಯವಹಾರ ವಾಣಿಜ್ಯ ಬ್ಯಾಂಕ್‌ಗಳಿಗೆ ಹೋಲಿಸಿದರೆ ಕಮ್ಮಿ ವ್ಯವಹಾರ ಹೊಂದಿದೆ. ಜನರೊಂದಿಗೆ ನಮಗಿರುವ ಸಂಪರ್ಕ ಬಳಸಿಕೊಂಡು ಹೆಚ್ಚು ವ್ಯವಹಾರ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಅಪೆಕ್ಸ್ ಬ್ಯಾಂಕಿನ ತರಬೇತುದಾರ ಎಸ್.ಜಿ. ಕುಲಕರ್ಣಿ ಮಾತನಾಡಿ, ಸಹಕಾರ ಬ್ಯಾಂಕ್ ಗಳು ಕೂಡ ರಿಜರ್ವ್ ಬ್ಯಾಂಕ್‌ನ ನಿಯಮಗಳನ್ನು ಪಾಲಿಸುತ್ತಿದ್ದು, ಸೂಕ್ತ ವ್ಯವಸ್ಥೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಬ್ಯಾಂಕ್‌ಗಳಲ್ಲಿ ತಾಂತ್ರಿಕ ವ್ಯವಸ್ಥೆಗಳ ಸುಧಾರಣೆ ಮಾಡಬೇಕು ಎಂದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಎಸ್.ಜಿ. ಪಾಟೀಲ, ತನ್ವಿರ, ನಾಗಶೆಟ್ಟಿ ಇದ್ದರು.