ಲಾಸ್ ಏಂಜಲೀಸ್: ಇರಾನ್ ಮೂಲದ ಅಮೆರಿಕದ ಚಿತ್ರ ನಿರ್ದೇಶಕಿ ರಯ್ಕ ಝೆಹಾಬಿ ನಿರ್ದೇಶನದ “ಪೀರಿಯಡ್. ಎಂಡ್ ಆಫ್ ಸೆಂಟೆನ್ಸ್’ ಎಂಬ ಸಾಕ್ಷ್ಯ ಚಿತ್ರಕ್ಕೆ 2018-19ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಗೌರವ ಸಂದಿದೆ. ರವಿವಾರ ರಾತ್ರಿ, ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಶ್ರೇಷ್ಠ ಕಿರು ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಈ ಚಿತ್ರ ಪ್ರಶಸ್ತಿ ಬಾಚಿಕೊಂಡಿತು. ಭಾರತದ ನಿರ್ಮಾಪಕಿ ಗುನೀತ್ ಮೊಂಗಾ ಅವರ “ಶಿಖ್ಯಾ ಎಂಟರ್‌ಟೇನ್‌ಮೆಂಟ್’ ಸಂಸ್ಥೆಯಡಿ ಈ ಸಾಕ್ಷ್ಯಚಿತ್ರ ತಯಾರಾಗಿದೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿ ಸಲಾಗಿದೆ.
ಭಾರೀ ಪೈಪೋಟಿ ನಡುವೆಯೂ, “ಬ್ಲಾಕ್ ಶೀಪ್’, “ಎಂಡ್ ಗೇಮ್’, “ಲೈಫ್ ಬೋಟ್’ ಹಾಗೂ “ಎ ನೈಟ್ ಅಟ್ ದ ಗಾರ್ಡನ್’ಗಳನ್ನು ಹಿಂದಿಕ್ಕಿ “ಪೀರಿಯಡ್. ಎಂಡ್ ಆಫ್ ಸೆಂಟೆನ್ಸ್ ‘, ಪ್ರಶಸ್ತಿಗೆ ಭಾಜನವಾಗಿದ್ದು, ಚಿತ್ರ ನಿರ್ಮಾಪಕಿ, ಭಾರತ ಮೂಲದ ಗುನೀತ್ ಮೊಂಗಾ ಅವರಿಗೆ ರೋಮಾಂಚನ ತಂದಿತ್ತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೊಂಗಾ, “”ಹೆಣ್ಣುಮಕ್ಕಳಲ್ಲಿ ನೈಸರ್ಗಿಕವಾಗಿ ನಡೆಯುವ ಋತುಚಕ್ರವನ್ನು ಭಾರತದ ಹಲವೆಡೆ ಇಂದಿಗೂ ಕೀಳಾಗಿ ನೋಡುವ ಪರಿಪಾಠವಿದೆ. ಅಂಥ ಸಾಮಾಜಿಕ ಪಿಡುಗುಗಳನ್ನು ಹೋಗಲಾ ಡಿಸುವ ಪ್ರಯತ್ನವನ್ನು ಈ ಸಾಕ್ಷ್ಯಚಿತ್ರದಲ್ಲಿ ಮಾಡಲಾಗಿದೆ. ಆದರೆ, ಇದಕ್ಕೆ ಆಸ್ಕರ್ ಸಿಗುತ್ತದೆ ಎಂದು ಭಾವಿಸಿರಲಿಲ್ಲ ” ಎಂದರು. ತಮಿಳುನಾಡಿನಲ್ಲಿ ತಾನೇ ಖುದ್ದು ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿ ಅದನ್ನು ಕಡಿಮೆ ಬೆಲೆಗೆ ಹಳ್ಳಿಗಳ ಯುವತಿಯರಿಗೆ ನೀಡಿ ಪ್ರಸಿದ್ಧರಾದ ಅರುಣಾಚಲಂ ಮುರುಗನಾಥಮ್ ಅವರೇ ಈ ಸಾಕ್ಷ್ಯಚಿತ್ರದಲ್ಲಿ ನಟಿಸಿರುವುದು ವಿಶೇಷ. ಇದೇ, ಮುರುಗನಾಥಮ್ ಜೀವನ ಕಥೆ ಆಧರಿಸಿ ಬಾಲಿವುಡ್‌ನಲ್ಲಿ ಈಗಾಗಲೇ “ಪ್ಯಾಡ್ ಮ್ಯಾನ್’ ಎಂಬ ಚಿತ್ರ ತೆರೆಕಂಡಿದೆ.
ದಶಕದ ಅನಂತರದ ಮಿಂಚು: ಆಸ್ಕರ್‌ನಲ್ಲಿ ಭಾರತದ ಮಿಂಚು ಹರಿದು ಒಂದು ದಶಕದ ನಂತರ ಈಗ ಮತ್ತೆ ಭಾರತಕ್ಕೆ ಪ್ರತಿಷ್ಠಿತ ಗರಿ ಲಭಿಸಿದಂತಾಗಿದೆ. 2009ರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಸೌಂಡ್ ಇಂಜಿನಿಯರ್ ರಸೂಲ್ ಪೂಕುಟ್ಟಿ , “ಸ್ಲಂ ಡಾಗ್ ಮಿಲಿಯನೇರ್’ ಚಿತ್ರಕ್ಕಾಗಿ ಕ್ರಮವಾಗಿ ಶ್ರೇಷ್ಠ ಸಂಗೀತ ನಿರ್ದೇಶಕ ಹಾಗೂ ಶ್ರೇಷ್ಠ ಧ್ವನಿ ಗ್ರಾಹಕ ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದರು. ಕಿರು ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಬಂದಿದ್ದನ್ನು ಹಿಂದಿ ಚಿತ್ರರಂಗದ ಖ್ಯಾತ ನಾಮರಾದ ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಮುಂತಾದವರು ಟ್ವಿಟರ್‌ನಲ್ಲಿ ಕೊಂಡಾಡಿ, ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
“ಗ್ರೀನ್ ಬುಕ್’ ಶ್ರೇಷ್ಠ ಚಿತ್ರ
ಜನಾಂಗಗಳ ನಡುವಿನ ಆಪ್ತತೆಯನ್ನು ಸಾರುವ “ಗ್ರೀನ್ ಬುಕ್’ ಚಿತ್ರ ಅತ್ಯುತ್ತಮ ಚಲನ ಚಿತ್ರವೆಂಬ ಹೆಗ್ಗಳಿಕೆಗೆ ಭಾಜನವಾದರೆ, “ರೋಮಾ’ ಚಿತ್ರದ ನಿರ್ದೇಶಕ ಅಲೊನ್ಸೊ ಕ್ಯುರಾನ್‌ಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, “ದ ಫೇವರಿಟ್’ ಚಿತ್ರಕ್ಕಾಗಿ ಒಲಿವಿಯಾ ಕೋಲ್ಮನ್‌ಗೆ ಶ್ರೇಷ್ಠ ನಟಿ, “ಬೊಹೇಮಿಯಾನ್ ರಾಪೊಡಿ’ ಚಿತ್ರಕ್ಕಾಗಿ ರಾಮಿ ಮಲೇಕ್‌ಗೆ ಶ್ರೇಷ್ಠ ನಟ ಪ್ರಶಸ್ತಿ ಸಂದವು.