Advertisement
ಕೋಸ್ಟಲ್‌ವುಡ್‌ನಲ್ಲಿ ಭರವಸೆಯ ನಟನಾಗಿ ಮಿಂಚಿರುವವರು ನಟ ರೂಪೇಶ್ ಶೆಟ್ಟಿ. ಹೊಸತನದೊಂದಿಗೆ ಹೊಸ ನಿರೀಕ್ಷೆಯಲ್ಲಿ ಸಿನೆಮಾ ಬರಬೇಕು ಎಂಬ ಲೆಕ್ಕ ಹಾಕಿಕೊಂಡವರು ಅವರು. ಹೀಗಾಗಿಯೇ ತುಳು ಹಾಗೂ ಕನ್ನಡದಲ್ಲಿಯೂ ನಾಯಕ ನಟನಾಗಿ ಮಿಂಚುವ ಅವಕಾಶ ಅವರಿಗೆ ದೊರಕಿದೆ. “ಐಸ್‌ಕ್ರೀಂ’, “ಅಮ್ಮೆರ್ ಪೊಲೀಸಾ’ ಸೇರಿದಂತೆ ಹಲವು ತುಳು ಸಿನೆಮಾ ಮಾಡಿದ ರೂಪೇಶ್ ಈಗ ನೇರವಾಗಿ “ಗಿರಿಗಿಟ್’ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ ವೇಳೆಗೆ ಬಿಡುಗಡೆಯ ನಿರೀಕ್ಷೆಯಲ್ಲಿರುವ ಈ ಸಿನೆಮಾ ರೂಪೇಶ್ ಅವರ ಬಹುನಿರೀಕ್ಷೆಯ ಸಿನೆಮಾ.
Related Articles
Advertisement
ತುಳು ರಂಗಭೂಮಿ ಹಾಗೂ ತುಳು ಸಿನೆಮಾ ಲೋಕದಲ್ಲಿ ಬಹುದೊಡ್ಡ ಹೆಸರು ಗೌರವ ಪಡೆದ ದೇವದಾಸ್ ಕಾಪಿಕಾಡ್ ಅಭಿನಯದ ಜತೆಗೆ ಸಿನೆಮಾ ನಿರ್ದೇಶನದ ಮೂಲಕವೇ ಮಾನ್ಯತೆ ಪಡೆದಿದ್ದಾರೆ. ಚಂಡಿ ಕೋರಿ, ಬರ್ಸ, ಅರೆಮರ್ಲೆರ್, ಏರಾ ಉಲ್ಲೆರ್‌ಗೆ ಸಿನೆಮಾ ಮಾಡಿದ ಕಾಪಿಕಾಡ್ ಈಗ ಜಬರ್ದಸ್ತ್ ಶಂಕರ ಸಿನೆಮಾ ಮಾಡುತ್ತಿದ್ದರೆ, ಅಭಿನಯದಲ್ಲಿಯೂ ಅವರಿದ್ದಾರೆ. ಜತೆಗೆ ಅರ್ಜುನ್ ಕಾಪಿಕಾಡ್ ಅವರು ಸಹನಿರ್ದೇಶನಾಗಿಯೂ ಕೆಲಸ ಮಾಡಿದ್ದಾರೆ.
“ಒರಿಯರ್ದೊರಿ ಅಸಲ್’ ಮೂಲಕ ತುಳುಚಿತ್ರರಂಗದಲ್ಲಿ ಚಾರಿತ್ರಿಕ ದಾಖಲೆ ಬರೆದ ವಿಜಯ್ ಕುಮಾರ್ ಕೊಡಿಯಲಾಬೈಲ್ ಅವರು ಕೂಡ ಅಭಿನಯದಲ್ಲಿ ಕಾಣಿಸಿಕೊಂಡು ದಾಖಲೆಯ ಸಿನೆಮಾವನ್ನೇ ನೀಡಿದ್ದಾರೆ.
ಅಂದಹಾಗೆ, ರಂಗ್, ಪಿಲಿಬೈಲ್ ಯಮುನಕ್ಕ ಸೇರಿದಂತೆ ಹಲವು ತುಳು ಸಿನೆಮಾದಲ್ಲಿ ಅಭಿನಯದ ಮೂಲಕ ಮೋಡಿ ಮಾಡಿದ ವಿಸ್ಮಯ್ ವಿನಾಯಕ್ ಅವರು ಇದೀಗ “ರಡ್ಡ್ ಎಕ್ರೆ’ ತುಳು ಸಿನೆಮಾದ ನಿರ್ದೇಶನ ಮಾಡಿದ್ದಾರೆ. ಕೋಸ್ಟಲ್‌ವುಡ್‌ನಲ್ಲಿ ವಿಭಿನ್ನ ಮ್ಯಾನರಿಸಂನ ಸಿನೆಮಾ ಎಂಬ ಹೆಗ್ಗಳಿಕೆ ಕೂಡ ಇದರದ್ದಾಗಿದೆ.
ತುಳುರಂಗಭೂಮಿ- ಸಿನೆಮಾ, ಕನ್ನಡ ಸಿನೆಮಾ ಮೂಲಕ ಮನೆಮಾತಾದ ಸಾಯಿಕೃಷ್ಣ ಅವರು ಕೂಡ ತುಳುವಿನಲ್ಲಿ “ಸೂಂಬೆ’ ಸಿನೆಮಾದ ಮೂಲಕ ಆ್ಯಕ್ಷನ್ ಕಟ್ ಹೇಳಿದ್ದಾರೆ. “ಪಕ್ಕಿಲು ಮೂಜಿ’ ಸಿನೆಮಾದ ಮೂಲಕ ಪ್ರಕಾಶ್ ಕಾಬೆಟ್ಟು ಅವರು ಕೂಡ ಗಮನಸೆಳೆದಿದ್ದಾರೆ. ತುಳು-ಕನ್ನಡ ಸಿನೆಮಾದಲ್ಲಿ ಅಭಿನಯಿಸಿದ್ದ ಶಿವಧ್ವಜ್ ಶೆಟ್ಟಿ “ಗಗ್ಗರ’ ಸಿನೆಮಾ ನಿರ್ದೇಶಿಸಿದ್ದರು. ಕನ್ನಡ ತುಳು ಸಿನೆಮಾದಲ್ಲಿ ಅಭಿನಯಿಸಿದ್ದ ರಾಜಶೇಖರ ಕೋಟ್ಯಾನ್ ಅವರು “ಬ್ರಹ್ಮ ಶ್ರೀ ನಾರಾಯಣ ಗುರು’ ಸಿನೆಮಾ ಮಾಡಿದ್ದರು. ಇನ್ನು ಖ್ಯಾತ ನಟ ಎಂ.ಕೆ. ಮಠ ಅವರು ಕೂಡ ಖ್ಯಾತ ನಿರ್ದೇಶಕ ಎಂಬುದು ಉಲ್ಲೇಖನೀಯ.
ತುಳು ರಂಗಭೂಮಿಯಲ್ಲಿ ಅಭಿನಯಿಸುತ್ತಿರುವ ಜೆ.ಪಿ. ತುಮಿನಾಡ್ ಇತ್ತೀಚೆಗೆ ತೆರೆಕಂಡ “ಕಟಪಾಡಿ ಕಟ್ಟಪ್ಪ’ ಸಿನೆಮಾ ನಿರ್ದೇಶಿಸಿದ್ದಾರೆ. ಜತೆಗೆ, ತುಳು ಸಿನೆಮಾರಂಗದಲ್ಲಿ ಅಭಿನಯದ ಮೂಲಕ ಕಾಣಿಸಿಕೊಂಡ ಅಶ್ವಿನಿ ಕೋಟ್ಯಾನ್ ಈಗ ತುಳುವಿನ ಚೊಚ್ಚಲ ಮಹಿಳಾ ನಿರ್ದೇಶಕಿ ಎಂಬ ಹೆಸರು ಪಡೆದಿದ್ದಾರೆ. “ನಮ್ಮ ಕುಡ್ಲ’ ಸಿನೆಮಾ ಮಾಡಿದ ಅವರು ಈಗ “ತಂಬಿಲ’ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ದಿನೇಶ್ ಇರಾ