Advertisement

ಆತ್ಮವಿಶ್ವಾಸದೊಂದಿಗೆ ಮುಂದೆ ಹೋದಾಗ ಸಾಧನೆ ಸಾಧ್ಯ

11:22 AM Jul 28, 2017 | Team Udayavani |

ಮೈಸೂರು: ಸಂಕೋಚ ಸ್ವಭಾವಬಿಟ್ಟು, ಪ್ರಪಂಚದಲ್ಲಿರುವ ಯಾವುದೇ ದೊಡ್ಡ ಕೆಲಸವನ್ನಾದರೂ ನಾನು ಮಾಡಬಲ್ಲೆ ಎಂಬ ಅಭಿಲಾಷೆಯೊಂದಿಗೆ ಮುಂದೆ ಹೆಜ್ಜೆಯಿಟ್ಟಾಗ ಸಾಧನೆ ಮಾಡಲು ಸಾಧ್ಯ ಎಂದು ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಹೇಳಿದರು.

Advertisement

ಜೆಎಸ್‌ಎಸ್‌ ಮಹಿಳಾ ಪದವಿ ಪೂರ್ವ ಕಾಲೇಜಿನ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಒಂದು ವೃತ್ತಿಗೆ ಸೇರಬೇಕೆಂದರೆ, ಅದರಲ್ಲಿರುವ ಸರಿ-ತಪ್ಪುಗಳನ್ನು ಸರಿಯಾಗಿ ತಿಳಿದುಕೊಂಡು ಹೇಳುವ ಧೈರ್ಯ ಇರಬೇಕು ಎಂದರು.

ತಪ್ಪೆಂದು ಹೇಳುವಾಗ ಸಮರ್ಪಕ ಕಾರಣಗಳನ್ನು ನೀಡಬೇಕು. ಹೀಗಾಗಿ ಗುರಿಯ ಬಗ್ಗೆ ನಿಮ್ಮ ಗೆಳೆಯರೊಂದಿಗೆ ಹೇಳಿಕೊಂಡು, ಗುರಿ ಮುಟ್ಟಲು ಬೇಕಾದ ಗುಣ ನಿಮ್ಮಲಿದೆಯೇ, ನಿಮಲ್ಲಿ ಕೊರತೆ ಏನು? ಅದನ್ನು ವೃದ್ಧಿಸುವುದು ಹೇಗೆ ಎಂದು ಯೋಚಿಸಿ ಆ ಕಡೆಗೆ ಗಮನ ಹರಿಸಿ. ಆ ವೃತ್ತಿಯಲ್ಲಿರುವ ಸರಿ ತಪ್ಪುಗಳನ್ನು ತಿಳಿದುಕೊಂಡು ಮುಂದೆ ಸಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪದವಿ ವಿದ್ಯಾಭ್ಯಾಸದ ಪ್ರಮುಖ ಘಟ್ಟ. ಪಠ್ಯದೊಂದಿಗೆ ಲೋಕಜಾnನವು ಬಹಳ ಮುಖ್ಯವಾಗುತ್ತದೆ. ಪ್ರಪಂಚದಲ್ಲಿನ ಆಗು-ಹೋಗುಗಳನ್ನು ಅರಿತುಕೊಳ್ಳಬೇಕು. ನನ್ನಲ್ಲಿ ಹಣವಿಲ್ಲ, ಆದ್ದರಿಂದ ಗುರಿಮುಟ್ಟಲು ಸಾಧ್ಯವಾಗಿಲ್ಲ ಎಂದುಕೊಳ್ಳಬೇಡಿ. ಸಾಧನೆಗೆ ಹಣ ಮುಖ್ಯವಲ್ಲ. ಆಸಕ್ತಿ ಹಾಗೂ ಪರಿಶ್ರಮ ಇದ್ದರೆ, ಅದೇ ನಿಮ್ಮನ್ನು ಗುರಿಯಡೆಗೆ ಕರೆದೊಯ್ಯುತ್ತದೆ ಎಂದರು.

ಕ್ರೀಡೆ ಕೂಡ ಉತ್ತಮ ವೃತ್ತಿಯಾಗುತ್ತದೆ. ನಿಮ್ಮ ಜೀವನ ಕೌಶಲ್ಯಗಳನ್ನು ಕ್ರೀಡೆ ತಿಳಿಸಿಕೊಡುತ್ತದೆ. ಆಟದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಸೋತಾಗ ಗೆಲ್ಲಬೇಕೆಂಬ ಹುಮ್ಮಸ್ಸು ನಿಮಗೆ ಬರುತ್ತದೆ. ಅದೇ ರೀತಿ ಜೀವನದಲ್ಲಿ ಗೆಲ್ಲಬೇಕೆಂಬ ಛಲವನ್ನು ಕ್ರೀಡೆ ತಂದುಕೊಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಮಾತನಾಡಿ, ನಾಯಕರಾದವರು ತಾನೊಬ್ಬನೇ ಬೆಳೆಯುವುದಲ್ಲ. ತಮ್ಮೊಂದಿಗೆ ಇರುವವರನ್ನೂ ಬೆಳೆಸಬೇಕು. ಬದಲಿಗೆ ಹಿಂಬಾಲಕರನ್ನಾಗಿಸಿ ಕೊಂಡರೆ ಅವನು ನಿಜವಾದ ನಾಯಕನಾಗಲಾರ ಎಂದರು.

ವಿದ್ಯಾರ್ಥಿಗಳು ಉತ್ತಮ ಆದರ್ಶಗಳನ್ನಿಟ್ಟುಕೊಂಡು ಜೀವನ ರೂಪಿಸಿಕೊಳ್ಳುವುದರ ಜತೆಗೆ ನಮ್ಮ ದೇಶ, ಪೋಷಕರು, ಗುರುಗಳು ಮತ್ತು ನಿಮಗೆ ವಿದ್ಯೆ ಕಲಿಸಿದ ಶಿಕ್ಷಣ ಸಂಸ್ಥೆಗೆ ಕೀರ್ತಿ ತರಬೇಕೆಂದು ಹೇಳಿದರು. ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಸಹಾಯಕ ನಿರ್ದೇಶಕ ನಿರಂಜನ್‌ಮೂರ್ತಿ, ಪ್ರಾಂಶುಪಾಲೆ ಎಂ.ಪಿ.ರಾಜೇಶ್ವರಿ, ಆಂಗ್ಲ ವಿಭಾಗದ ಉಪನ್ಯಾಸಕಿ ಮಂಜುಳ.ಎಸ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next