Advertisement

ತನ್ಮಯತೆ-ಏಕಾಗ್ರತೆ ಇದ್ದರೆ ಸಾಧನೆ ಸಾಧ್ಯ

09:09 AM Jan 23, 2019 | |

ಚಿಕ್ಕಮಗಳೂರು: ತನ್ಮಯತೆ, ಏಕಾಗ್ರತೆ ಮತ್ತು ಕಠಿಣ ಅಭ್ಯಾಸಗಳು ಒಬ್ಬ ಉತ್ತಮ ಕ್ರಿಕೆಟ್ ಆಟಗಾರರನ್ನಾಗಿ ರೂಪುಗೊಳ್ಳಲು ಸಹಕಾರಿ ಎಂದು 16-19 ವರ್ಷ ದೊಳಗಿನ ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ನಗರದ ಶಿಶಿರಾ ಗೌಡ ತಿಳಿಸಿದರು.

Advertisement

ನಗರದ ಸಾಯಿಏಂಜಲ್ಸ್‌ ಶಾಲೆಯಲ್ಲಿ 2ನೇ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎ.ಶಿಶಿರ ಗೌಡ ಅವರಿಗೆ ನಗರದ ಆರ್‌.ಪಿ. ಕ್ರಿಕೆಟ್ ಅಕಾಡೆಮಿ ನೀಡಿದ ಅಭಿನಂದನೆ ಮತ್ತು ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಣಕ್ಕೆ ದೊರೆಯುತ್ತಿರುವ ಪ್ರೋತ್ಸಾಹ ಇಂದು ಕ್ರೀಡಾ ಕ್ಷೇತ್ರಕ್ಕೂ ದೊರೆಯುತ್ತಿದೆ. ಆದರೆ ಪ್ರೌಢಶಾಲಾ ಶಿಕ್ಷಣ ಸಮಯದಲ್ಲಿ ಪಾಠ ಮತ್ತು ಕ್ರೀಡೆ ಎರಡನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಆದರೆ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಅರಿವಿದ್ದರೆ ಎರಡು ಕ್ಷೇತ್ರದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ತಮ್ಮ ಕ್ರಿಕೆಟ್ ಅಭ್ಯಾಸಕ್ಕೆ ಮತ್ತು ಸಾಧನೆಗೆ ಪೋಷಕರು, ಸಾಯಿ ಏಂಜಲ್ಸ್‌ ಶಾಲೆಯ ಶಿಕ್ಷಕರು ಮತ್ತು ತಮ್ಮ ಆಟದ ಶೈಲಿಯಲ್ಲಿ ತಿದ್ದಿ ತಿಡಿ ತರಬೇತಿ ನೀಡಿದ ರಾಮ್‌ದಾಸ್‌ ಪ್ರಭು ಕಾರಣ ಎಂದರು.

ಪ್ರತಿನಿತ್ಯ ಕಠಿಣ ಅಬ್ಯಾಸ ಮಾಡಲು ಜಿಲ್ಲಾ ಕೇಂದ್ರದಲ್ಲಿ ಬೌಲಿಂಗ್‌ ಮಿಷನ್‌ ಮತ್ತು ಹುಲ್ಲು ಹಾಸಿನಪಿಚ್ (ಟರ್ಫ್‌ಪಿಚ್) ಸೌಲಭ್ಯಗಳ ಅಗತ್ಯವಿದೆ ಎಂದರು.

Advertisement

ಈ ವರ್ಷ 2ನೇ ವರ್ಷದ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೂ ಶಿಕ್ಷಣಕ್ಕೆ ಒತ್ತು ನೀಡಿ ದೂರ ಉಳಿಯಬೇಕಾಯಿತು ಎಂದು ನಿರಾಸೆ ವ್ಯಕ್ತಪಡಿಸಿದರು.

19 ವರ್ಷದೊಳಗಿನ ಪಂದ್ಯದಲ್ಲಿ ಆಂದ್ರಪ್ರದೇಶದ ವಿರುದ್ಧ ಪಡೆದ ರೋಚಕ ಗೆಲುವಿನ ರಾಜ್ಯ ಮಹಿಳಾ ಕ್ರಿಕೆಟ್ ತಂಡದಲ್ಲಿ ತಾವು ಪ್ರತಿನಿಧಿಸಿದ್ದುದು ಅವಿಸ್ಮರಣಿಯ ಎಂದರು.

ಶಿಶಿರಾ ಗೌಡ ಅವರಿಗೆ ನೆನಪಿನ ಕಾಣಿಕೆ ಮತ್ತು ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿದ ಕೆ.ಎಸ್‌.ಸಿ.ಎ. ಕ್ರಿಕೆಟ್ ತರಬೇತುದಾರ ರಾಮದಾಸ್‌ ಪ್ರಭು, ಇಂದು ಕ್ರೀಡಾಕ್ಷೇತ್ರಕ್ಕೆ ಪ್ರಾಮುಖ್ಯತೆ ದೊರೆಯುತ್ತಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.

ಸಿಡಿಎ ಲೇಔಟ್‌ನಲ್ಲಿ ಆಟದ ಮೈದಾನಕ್ಕೆ ಮೀಸಲಿಟ್ಟಿರುವ 7 ಎಕರೆ ಜಾಗವನ್ನು ಕೆ.ಎಸ್‌.ಸಿ.ಎ.ಗೆ ವಹಿಸಿಕೊಟ್ಟರೆ ಒಂದು ಸುಂದರ ಟರ್ಫ್‌ಪಿಚ್ ಜೊತೆಗೆ ಬೌಲಿಂಗ್‌ ಮಿಷನ್‌ ಮತ್ತು ಇತರ ಸೌಲಭ್ಯಗಳ ನೆರವನ್ನು ಕೆ.ಎಸ್‌.ಸಿ.ಎ.ಯಿಂದ ಪಡೆಯಬಹುದು ಎಂದು ಹೇಳಿದರು. ಕಾಫಿ ಬೆಳೆಗಾರ ಬಿ.ಆರ್‌.ಅನುಪ್‌ ಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next