Advertisement

ಕ್ರೀಡೆಯಿಂದ ಸಾಧನೆ ಸುಲಭ

09:58 PM Oct 04, 2019 | Team Udayavani |

ಅರಸೀಕೆರೆ: ವಿದ್ಯಾರ್ಥಿಗಳಿಗೆ ಶಿಕ್ಷಣ ಬದುಕಿಗೆ ಬೆಳಕಾದರೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಾಧನೆ ಬದುಕನ್ನು ವಿಕಾಸಗೊಳಿಸುತ್ತದೆ ಎಂದು ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಆದಿಚುಂಚನಗಿರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ನಗರದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ನಡೆದ 2019-20ನೇ ಸಾಲಿನ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾಲಿಬಾಲ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗೆ ಉತ್ತಮ ವೇದಿಕೆ: ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ದಿವ್ಯ ಸಂಕಲ್ಪದಂತೆ ನಾಡಿನ ಉದ್ದಗಲಕ್ಕೂ ಇರುವ ಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಉತ್ತಮ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ ಎಂದರು.

ಶ್ರೀಗಳ ಕನಸು ನನಸು: ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಅಲ್ಲದೇ, ವಿದ್ಯಾಭ್ಯಾಸ ಮಾಡಿದ ಶಾಲೆಗೂ, ಪೋಷಕರು ಹಾಗೂ ಊರಿಗೆ ಕೀರ್ತಿ ತರುವ ಮೂಲಕ ಬಾಲಗಂಗಾಧರನಾಥ ಸ್ವಾಮೀಜಿಗಳ ಕನಸು ನನಸು ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ರೀಡಾ ಸಾಧನೆ ಮಾಡಿ: ದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕ್ರೀಡಾಪಟುಗಳು ಯಶಸ್ಸು ಕಾಣಲು ಸಾಧ್ಯವಾಗುತ್ತಿಲ್ಲ. ಶಾಲಾ ಕಾಲೇಜು ಮಟ್ಟಗಳಲ್ಲಿ ನಡೆಯುವ ಆಟೋಟ ಸ್ಪರ್ಧೆ ಹಾಗೂ ಕ್ರೀಡಾಕೂಟಗಳ ವೇದಿಕೆಯನ್ನು ಬಳಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಬಾಂಧವ್ಯ ವೃದ್ಧಿ: ಡಿವೈಎಸ್‌ಪಿ ನಾಗೇಶ್‌ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಹವ್ಯಾಸ ಕೇವಲ ಮನರಂಜನೆಗಾಗಿ ಅಲ್ಲ. ವಿದ್ಯಾರ್ಥಿಗಳ ನಡುವೆ ಮನಸ್ಸು ಮನಸ್ಸುಗಳ ಬೆಸೆಯುವ ಬಾಂಧವ್ಯವಾಗಿ ಕ್ರೀಡಾಕೂಟಗಳು ಬೆಳೆಯಬೇಕಾಗಿದೆ ಎಂದು ಹೇಳಿದರು. ಪ್ರತಿಯೊಂದು ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಸಕ್ರಿಯವಾಗಿ ಭಾಗವಹಿಸುವುದೇ ಮುಖ್ಯ. ಅದರಲ್ಲೂ ಕ್ರೀಡೆಗಳಲ್ಲಿ ಹೆಚ್ಚಿನ ಸ್ಪೂರ್ತಿಯಿಂದ ಆಟವಾಡುವ ಮನಸ್ಥಿತಿ ಬೆಳೆಸಿಕೊಂಡರೆ ಮಾತ್ರ ಹೆಚ್ಚಿನ ಸಾಧನೆ ಮಾಡಲು ಸುಲಭ ಎಂದು ತಿಳಿಸಿದರು.

ಸಾಧನೆ ಮೆಟ್ಟಿಲು ಹತ್ತಿ: ಅಂತಾರಾಷ್ಟ್ರೀಯ ವಾಲಿಬಾಲ್‌ ಕ್ರೀಡಾಪಟು ಪೃಥ್ವಿರಾಜ್‌ ಮಾತನಾಡಿ, ಕ್ರೀಡಾಪಟು ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಸದೃಢತೆ ಬೆಳೆಸಿಕೊಂಡಾಗ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆಟ್ಟಿಲು ಹತ್ತಲು ಸಾಧ್ಯ. ಪಂದ್ಯಗಳಲ್ಲಿ ಪ್ರತಿ ಸ್ಪರ್ಧಿಗಳು ನೀಡುವ ಪ್ರತಿರೋಧದ ನಡುವೆಯೂ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲುವ ಕಲೆಯನ್ನು ಕರಗತ ಮಾಡಿಕೊಂಡ ಆಟಗಾರನಿಗೆ ಮಾತ್ರ ಸಾಧನೆ ಕಿರೀಟ ಮುಡಿಗೇರುತ್ತದೆ. ಅಲ್ಲದೇ, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ-ಕೇಂದ್ರ ಸರ್ಕಾರಗಳು ಗುರುತಿಸಿ ಗೌರವಿಸುವುದಲ್ಲದೇ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಿವೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್‌.ಅನಂತ್‌ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಯರಾಂ, ಕಾಲೇಜಿನ ಪ್ರಾಂಶುಪಾಲ ಲಿಂಗರಾಜ್‌, ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹಿರಿಯ ಉಪಾಧ್ಯಕ್ಷ ಎಚ್‌.ಟಿ.ಮಹದೇವ್‌, ತಾಲೂಕು ನೌಕರರ ಸಂಘದ ಅಧ್ಯಕ್ಷ ಬಸವರಾಜು, ನಗರಸಭೆ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್‌, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್‌ಕುಮಾರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸದಾನಂದ ಮೂರ್ತಿ, ತಾಲೂಕು ದೈಹಿಕ ಪರಿವೀಕ್ಷಕ ಬಸವರಾಜ್‌, ಆದಿಚುಂಚನಗಿರಿ ಶಾಲೆ ದೈಹಿಕ ಶಿಕ್ಷಕ ನಾಗೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಇನ್ನಿತರ ಕ್ರೀಡೆಗೂ ಪ್ರೋತ್ಸಾಹ ಅಗತ್ಯ: ಭಾರತದ 130 ಕೋಟಿ ಜನಸಂಖ್ಯೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೇನೂ ಕೊರತೆ ಇಲ್ಲ, ಆದರೆ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನಿರಾಸಕ್ತಿ ವಹಿಸುತ್ತಿವೆ. ಕ್ರಿಕೆಟ್‌ ಕ್ರೀಡೆಗೆ ಕೊಟ್ಟ ಪ್ರಾಮುಖ್ಯತೆಯನ್ನು ಇನ್ನಿತರ ಕ್ರೀಡೆಗಳಿಗೆ ನೀಡುತ್ತಿಲ್ಲ ಎಂದು ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next